ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಯರ ಮಠದಲ್ಲಿ ಭಿನ್ನಾಭಿಪ್ರಾಯವಿಲ್ಲ

ಶ್ರೀಮಠದ ಪ್ರಮುಖರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ, ಸೌಹಾರ್ದಯುತ...

Mainashree
Updated On : 28 Apr 2014, 10:06 am

ಕ.ಪ್ರ. ವಾರ್ತೆ - ರಾಯಚೂರು - ಏ.28
ಶ್ರೀಮಠದ ಪ್ರಮುಖರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ, ಸೌಹಾರ್ದಯುತ ವಾತಾವರಣವಿದೆ. ಮಂತ್ರಾಲಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ಎಲ್ಲರ ಗುರಿ. ಈ ನಿಟ್ಟಿನಲ್ಲಿ ಹರಡಿರುವ ಮಾಹಿತಿಯಲ್ಲಿ ಹುರುಳಿಲ್ಲ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರು ಸ್ಪಷ್ಟಪಡಿಸಿದರು.
ಮಂತ್ರಾಲಯದಲ್ಲಿ ಸೋಮವಾರ ಸಂಜೆ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಧ್ಯಮಗಳಲ್ಲಿ ವರದಿಯಾದಂತೆ ಶ್ರೀಮಠದಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ. ಎಲ್ಲರೂ ಒಂದಾಗಿದ್ದು ಶ್ರೀಮಠವನ್ನು ಸಮೃದ್ಧಿಯತ್ತ ಕೊಂಡೊಯ್ಯುವುದೇ ಎಲ್ಲರ ಆಶಯವಾಗಿದೆ ಎಂದು ಹೇಳಿದರು.
ಆಡಳಿತದಲ್ಲಿ ಪಾರದರ್ಶಕತೆ: ಶ್ರೀಮಠದಲ್ಲಿ ತಾವು ಪೀಠಾಲಂಕಾರ ಮಾಡಿದ ನಂತರದಲ್ಲಿ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಲು ನಿರ್ಧರಿಸಿದ್ದಾಗಿ ತಿಳಿಸಿದ ಅವರು, ಶ್ರೀಮಠದಲ್ಲಿ ಇನ್ನು ಮುಂದೆ ಧಾರ್ಮಿಕ ಹಾಗೂ ಶೈಕ್ಷಣಿಕ ವಿಚಾರಗಳಿಗೆ ತಮ್ಮ ಪೂರ್ವಾಶ್ರಮದ ತಂದೆ ಶ್ರೀರಾಜಾ ಗಿರಿಯಾಚಾರ್ಯ ಅವರು ಸಲಹೆ ಸೂಚನೆಗಳನ್ನು ನೀಡಲಿದ್ದಾರೆಂದು ಹೇಳಿದರು.
ಹಾಗೆಯೇ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯ ಅವರು ಶ್ರೀಮಠದ ಕಾನೂನು ಸಂಬಂಧಿ ವಿಚಾರಗಳು ಮತ್ತು ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ ವಹಿಸಲಿದ್ದಾರೆ. ಅದೇ ರೀತಿ ಆಪ್ತ ಸಹಾಯಕ ರಾಜಾ ಎಸ್.ರಾಜಗೋಪಾಲಾಚಾರ್ಯ ಅವರಿಗೆ ಶ್ರೀಮಠದ ವಿವಿಧ ಹೊಣೆ ಹೊರಲು ಸೂಚಿಸಿದ್ದು, ಕಾರ್ಯಭಾರವನ್ನು ಎಲ್ಲ ಪ್ರಮುಖರಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಗೊಳಿಸುವ ಗುರಿ: ಶ್ರೀಮಠವನ್ನು ಎಂದಿನಂತೆ ಅಭಿವೃದ್ಧಿಯತ್ತ ಮುನ್ನಡೆಸುವುದು ತಮ್ಮ ಉದ್ದೇಶ. ಸುಕ್ಷೇತ್ರಕ್ಕೆ ಬರುವ ಭಕ್ತರಿಗೆ ಎಲ್ಲ ಸೌಲಭ್ಯ ದೊರಕಿಸುವುದು ಹಾಗೂ ಧಾರ್ಮಿಕ, ಸಾಮಾಜಿಕವಾಗಿ ಶ್ರೀಮಠವನ್ನು ಶ್ರೀಮಂತಗೊಳಿಸುವುದು ಗುರಿಯಾಗಿದೆ ಎಂದು ಹೇಳಿದರು.
ಶ್ರೀಗಳ ಪೂರ್ವಾಶ್ರಮದ ತಂದೆ ಮಹಾಮಹೋಪಾಧ್ಯಾಯ ರಾಜಾ ಗಿರಿಯಾಚಾರ್ಯರು ಮಾತನಾಡಿ, ಶ್ರೀ ರಾಘವೇಂದ್ರಸ್ವಾಮಿಗಳ ಪ್ರೇರಣೆಯಂತೆಯೇ ಪೀಠಾಧಿಪತಿಗಳು ಶ್ರೀಮಠದ ಹೊಣೆ ನಿರ್ವಹಿಸಲಿದ್ದಾರೆ. ಅದರಂತೆ ಎಲ್ಲರಿಗೂ ಕೆಲಸ ವಹಿಸಿದ್ದಾರೆ. ಭಿನ್ನಮತ ಮತ್ತು ಗೊಂದಲಕ್ಕೆ ಅವಕಾಶವೇ ಇಲ್ಲ ಎಂದು ತಿಳಿಸಿದರು.
ಯಾವುದೇ ಗೊಂದಲಗಳಿಲ್ಲ
ಶ್ರೀಗಳ ಆಪ್ತಕಾರ್ಯದರ್ಶಿ ಸುಯಮೀಂದ್ರಾಚಾರ್ಯ ಮಾತನಾಡಿ, ಪ್ರಸಕ್ತ ಪೀಠಾಧಿಪತಿಗಳು ಲೌಕಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಅಪಾರ ಜ್ಞಾನಿಗಳಾಗಿದ್ದಾರೆ. ಹಾಗಾಗಿ ಅವರ ಮಾರ್ಗದರ್ಶನದಲ್ಲಿಯೇ ಶ್ರೀಮಠವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕಾರ್ಯ ಮಾಡುವುದಾಗಿ ತಿಳಿಸಿ ತಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದರು. ತಾವು ಉದ್ಯಮಿಯಾಗಿದ್ದು ತಮ್ಮ ಕಂಪನಿಯ ವಹಿವಾಟು ನೋಡಿಕೊಳ್ಳುವ ಉದ್ದೇಶದಿಂದ ಕಾರ್ಯಭಾರ ಕಡಿಮೆಗೊಳಿಸಲು ಬಹು ಹಿಂದೆಯೇ ಹಾಲಿ ಪೀಠಾಧಿಪತಿಗಳಿಗೆ ಮನವಿ ಮಾಡಿದ್ದಾಗಿ ತಿಳಿಸಿ, ಈ ಹಿನ್ನೆಲೆಯಲ್ಲಿ ಶ್ರೀಮಠದ ಆಡಳಿತ ನಿರ್ವಹಣೆಯಿಂದ ದೂರವಿದ್ದಿದ್ದಾಗಿ ಹೇಳಿಕೊಂಡರು. ಆಡಳಿತದಲ್ಲಿ ಪಾರದರ್ಶಕತೆ ತರಲು ಶ್ರೀಗಳು ನಿರ್ಧರಿಸಿದ್ದಾರೆ. ಅಂತೆಯೇ ಮಠದಲ್ಲಿನ ಯುವ ಸಿಬ್ಬಂದಿಯನ್ನು ಶಾಖಾ ಮಠಗಳಿಗೆ ವರ್ಗಾಯಿಸಿ ಅವರಿಗೆ ಜವಾಬ್ದಾರಿ ಹೊರುವ ನಿಟ್ಟಿನಲ್ಲಿ ತರಬೇತಿ ನೀಡುವ ತೀರ್ಮಾನದಂತೆ ವರ್ಗಾಯಿಸಲಾಗಿದೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದರು.
ಲೆಕ್ಕಪತ್ರಗಳ ಬಗ್ಗೆ ಅನುಮಾನ ಬೇಡ
ಶ್ರೀಮಠದ ಲೆಕ್ಕಪತ್ರಗಳಿಗೆ ಸಂಬಂಧಿಸಿ ಯಾರಲ್ಲಿಯೂ ಅನುಮಾನ ಬೇಡ. ಲೆಕ್ಕಪತ್ರದ ಪರಿಶೋಧನೆಯಾಗಿದೆ. ಎಲ್ಲ ದಾಖಲೆಗಳು ಲಭ್ಯವಿದ್ದು, ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ. ಪೀಠಾಧಿಪತಿಗಳು ತಮಗೆ ನೀಡಿದ ಕೆಲಸವನ್ನು ಮಾಡಿಕೊಂಡಿರುವುದಾಗಿ ಹೇಳಿದರು. ಶ್ರೀಗಳ ಆಪ್ತಸಹಾಯಕ ರಾಜಾ ರಾಜಗೋಪಾಲಾಚಾರ್ಯ ಮಾತನಾಡಿ, ಮಂತ್ರಾಲಯದ ಮಠದ ಎಲ್ಲ ವಿಚಾರಗಳಿಗೆ ಪೀಠಾಧಿಪತಿಗಳ ನಿರ್ಧಾರವೇ ಅಂತಿಮ. ಹಾಗೆಯೇ ಅವರೇ ಸುಪ್ರೀಂ ಆಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ನೀಡುವ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು. ಹಾಗೊಂದು ವೇಳೆ ಸಣ್ಣಪುಟ್ಟ ಲೋಪದೋಷಗಳಿದ್ದರೆ ಅವೆಲ್ಲವುಗಳನ್ನೂ ಅಂತರಿಕವಾಗಿ ಬಗೆಹರಿಸಿ ಕೊಳ್ಳಲಾಗುತ್ತದೆ. ಈ ಬಗ್ಗೆ ಭಕ್ತರಲ್ಲಿ ಯಾವುದೇ ರೀತಿಯ ಗೊಂದಲಬೇಡ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement