ಹೈ-ಕ ಅರ್ಹತಾ ಪತ್ರಕ್ಕೆ 5-6 ದಿನ ಸಾಕು!
ಬಳ್ಳಾರಿ: ಬಳ್ಳಾರಿ ತಹಸೀಲ್ದಾರ್ ಕಚೇರಿಯಲ್ಲಿ ಹೈದರಾಬಾದ್ ಕರ್ನಾಟಕ ಅರ್ಹತಾ, ವಾಸಸ್ಥಳ ಪ್ರಮಾಣ ಪತ್ರ ಪಡೆಯಲು 30 ದಿನ ಕಾಯಬೇಕಾಗಿಲ್ಲ, ಕೇವಲ ಐದಾರು ದಿನಗಳಲ್ಲಿಯೇ ಪಡೆಯಬಹುದು!
ಕಚೇರಿಗಳಲ್ಲಿ ಬ್ರೋಕರ್ಗಳಿಗೆ ಮೊರೆ ಹೋದರೆ ಮಾತ್ರ ಇದು ಸಾಧ್ಯ. 'ಕನ್ನಡಪ್ರಭ' ಕುಟುಕು ಕಾರ್ಯಾಚರಣೆ ವೇಳೆ ಬ್ರೋಕರ್ ದಂಧೆ ಬೆಳಕಿಗೆ ಬಂದಿದೆ. ಹೈ-ಕ ಭಾಗಕ್ಕೆ 371ಜೆ ಘೋಷಿಸಿದಾಗ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಾಕಷ್ಟು ಅನುಕೂಲಗಳಾಗುತ್ತವೆ ಎಂದು ಸಂತೋಷ ಪಟ್ಟು, ಅರ್ಹತಾ ಪ್ರಮಾಣ ಪತ್ರ ಪಡೆಯಲು ಬೇಕಾಗುವ ದಾಖಲೆಗಳ ಸಿದ್ಧತೆಗೆ ತಹಸೀಲ್ದಾರ್ ಕಚೇರಿಗೆ ಹೋದರೆ, ವಾಸಸ್ಥಳ ಪ್ರಮಾಣಪತ್ರ ನೀಡಲು ತಿಂಗಳಾದರೂ ಬೇಕೆಂಬ ಉತ್ತರ ಸಿಗುತ್ತದೆ. ಆದರೆ, ಬ್ರೋಕರ್ಗಳ ಮೂಲಕ ಹೋದರೆ, ಈ ನಿಯಮ ಅನ್ವಯಿಸುವುದಿಲ್ಲ. ಎಷ್ಟು ದುಡ್ಡು ಜಾಸ್ತಿ ಕೊಡುತ್ತೀರೋ, ಅಷ್ಟು ಬೇಗ, ವಾಸಸ್ಥಳ ಪ್ರಮಾಣಪತ್ರ ಕೈ ಸೇರುತ್ತದೆ. ಆದರೆ, ದಾಖಲೆಗಳು ಪಕ್ಕಾ ಇದ್ದರೆ ಮಾತ್ರ ಬ್ರೋಕರ್ಗಳು ಮುಟ್ಟುತ್ತಾರೆ ಎಂಬುದು ನಿಟ್ಟುಸಿರು ಬಿಡುವ ವಿಷಯ.
ಅಡ್ಡದಾರಿ ತುಳಿಯುವ ಜನರು
ಮೆಡಿಕಲ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೇ 8 ರಿಂದ 12ರ ವರೆಗೆ ಹೈದರಾಬಾದ್ ಕರ್ನಾಟಕ ಅರ್ಹತಾ ಪತ್ರ ಪರಿಶೀಲನೆಗೆ ನೀಡಬೇಕು, ಈ ಹೊತ್ತಲ್ಲಿ ವಾಸಸ್ಥಳ ಪ್ರಮಾಣಪತ್ರಕ್ಕೆ ತಹಸೀಲ್ದಾರ್ ಕಚೇರಿಗೆ ಅಲೆದಾಡುವುದು ಕಷ್ಟ. ಹೀಗಾಗಿ, ಬ್ರೋಕರ್ ಮೊರೆ ಹೋಗುತ್ತಾರೆ. ಖುದ್ದಾಗಿ ಅಧಿಕಾರಿಗಳನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿದರೆ, ಒಂದು ತಿಂಗಳಲ್ಲಿ ಸಿಗುವ ವಾಸಸ್ಥಳ ಪ್ರಮಾಣಪತ್ರ, ಬ್ರೋಕರ್ ಮೂಲಕ ಐದಾರು ದಿನಗಳಲ್ಲೇ ಲಭ್ಯ.
ವ್ಯವಸ್ಥಿತ ದಂಧೆ
ಬ್ರೋಕರ್ಗಳ ದಂಧೆ ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿದ್ದರೂ, ಮೇಲಧಿಕಾರಿಗಳು ಅದರ ತಡೆಗೆ ಮುಂದಾಗಿಲ್ಲ. ಬ್ರೋಕರ್ಗಳು ಅರ್ಜಿದಾರರಿಂದ ಸಹಿ, ಹಣ ಪಡೆದು ಅರ್ಜಿ ಹಾಕುತ್ತಾರೆ. ಅರ್ಜಿಯನ್ನು ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗೆ ಕೊಡುತ್ತಾರೆ. ಅವರೇ ಬೇಗನೆ ಅರ್ಹತಾ ಪತ್ರ ಕೊಡುತ್ತಾರೆ. ಈ ಬ್ರೋಕರ್ಗಳು ಪ್ರತಿ ದಿನವೂ ತಮ್ಮ ಅರ್ಜಿಗಳ ಫಾಲೋ ಅಪ್ ಮಾಡುತ್ತಾರೆ. ಇದೆಲ್ಲ ಹೊರ ಜಗತ್ತಿಗೆ ಕಾಣದಷ್ಟು ಸೂಕ್ಷ್ಮವಾಗಿ ನಡೆಯುತ್ತದೆ.
ಕಾರ್ಯಾಚರಣೆಯಲ್ಲಿ ಬಹಿರಂಗ
ಕುಟುಕು ಕಾರ್ಯಾಚರಣೆಯಲ್ಲಿ ಕನ್ನಡಪ್ರಭ ಪ್ರತಿನಿಧಿ ಬ್ರೋಕರ್ನೊಬ್ಬನ ಹತ್ತಿರ ಹೋಗಿ ನಡೆಸಿದ ಸಂಭಾಷಣೆ ಇಲ್ಲಿದೆ
- ಕ.ಪ್ರ.: ಸಿಇಟಿಗೆ 371ಜೆ ಅರ್ಹತಾ ಪತ್ರ ಪಡೆಯಲು ವಾಸಸ್ಥಳ ಬೇಕಾಗಿದೆ, ಅದೂ ಬೇಗ ಬೇಕು.
- ಬ್ರೋಕರ್: ನಿಮಗೆ ನನ್ನ ನಂಬರ್ ಯಾರು ಕೊಟ್ಟರು? ಯಾರ್ ನೀವು?
- ಕ.ಪ್ರ.: ನಾನು ಸತೀಶ್ ಎಂದು. ನನಗೆ ವಾಸಸ್ಥಳ ಪತ್ರ ಬೇಕಾಗಿದೆ.
- ಬ್ರೋಕರ್: ಎಷ್ಟು ದಿನದಲ್ಲಿ ಬೇಕು?
- ಕ.ಪ್ರ.: ನಾಲ್ಕೈದು ದಿನಗಳಲ್ಲಿ.
- ಬ್ರೋಕರ್: ನಾಲ್ಕೈದು ದಿನ ಅಂದರೆ ಆಗುವುದು ಕಷ್ಟ, ಹತ್ತು ದಿನ ಆಗಬಹುದು.
- ಕ.ಪ್ರ.: ದುಡ್ಡು ಎಷ್ಟು ಖರ್ಚಾಗುತ್ತದೆ? ರು. 1000 ಅಥವಾ ರು. 2000?
- ಬ್ರೋಕರ್: ನಾನು ಫೋನಿನಲ್ಲಿ ಹೇಳುತ್ತೇನೆ. ಆದರೆ, ದುಡ್ಡು ಖರ್ಚು ಆಗುತ್ತೆ. ನಾವು ಅರ್ಜಿ ಕೊಟ್ಟ ಮೇಲೆ ಫಾಲೋ ಅಪ್ ಮಾಡುತ್ತೇವೆ.
- ಕ.ಪ್ರ.: ನಾಲ್ಕೈದು ದಿನಗಳಲ್ಲಿ ಬೇಕು.
-ಬ್ರೋಕರ್: ಅಷ್ಟರಲ್ಲೇ ಕೊಡುವುದಕ್ಕೆ ಪ್ರಯತ್ನಿಸುತ್ತೇನೆ.
ಪ್ರಮಾಣಪತ್ರ ವಿತರಣೆ ಮ್ಯಾನುವಲ್ಲಾಗಿ ಮಾಡುವುದರಿಂದ ಇಂತಹ ಸಮಸ್ಯೆ ಬಂದಿರಬಹುದು, ಆದರೆ, ಇದು ನಮ್ಮ ಗಮನಕ್ಕೆ ಬಂದಿಲ್ಲ, ಈ ಕುರಿತು ಎಚ್ಚರಿಕೆ ವಹಿಸುತ್ತೇವೆ. ಅಟಲ್ಜೀ ಜನಸ್ನೇಹಿ ಕೇಂದ್ರದಿಂದ ವಾಸಸ್ಥಳ ಪ್ರಮಾಣಪತ್ರ ನೀಡುವುದು ಬಂದರೆ, ಸಮಸ್ಯೆ ಉಂಟಾಗುವುದಿಲ್ಲ, ಸಿಬ್ಬಂದಿ ಇಂತಹ ಅವಘಡಗಳನ್ನು ಮಾಡಿದರೆ, ಮೇ 3ರಂದು ಸಿಬ್ಬಂದಿ ಸಭೆ ನಡೆಸಿ, ಕಟ್ಟುನಿಟ್ಟಾಗಿ ಸೂಚನೆ ನೀಡುತ್ತೇವೆ.
-ನಾಗರಾಜ್ ಪಾಟೀಲ್, ತಹಸೀಲ್ದಾರ್, ಬಳ್ಳಾರಿ
ಶಶಿಧರ ಮೇಟಿ