ಆರೋಗ್ಯ ನಿರೀಕ್ಷಕಗೆ 10 ವರ್ಷ ಜೈಲು
ಚಿತ್ರದುರ್ಗ: ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಪಾತ ಮಾಡಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಗ್ಯ ನಿರೀಕ್ಷಕನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಹತ್ತು ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ.
ವಂಚನೆಗೊಳಗಾದ ಯುವತಿಗೆ ಒಂದು ಲಕ್ಷ ರು. ಪರಿಹಾರ ನೀಡುವಂತೆಯೂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಹಂಚಾಟೆ ಸಂಜೀವ ಕುಮಾರ್ ಮಂಗಳವಾರ ನೀಡಿರುವ ತೀರ್ಪಿನಲ್ಲಿ ಆದಶಿಸಿದ್ದಾರೆ.
ನಗರದ ಬುರುಜನಹಟ್ಟಿಯ ನವೀನ್ ಕುಮಾರ್ ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ನಿರೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ. ಈತ ಹಲವಾರು ಬಾರಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿ, ಆಕೆಗೆ ಗರ್ಭಪಾತ ಮಾಡಿಸಿದ್ದ. ಬಳಿಕ ವಿವಾಹವಾಗಲು ನಿರಾಕರಿಸಿದ್ದ. ನೊಂದ ಯುವತಿ ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಅಂದಿನ ಅಧಿಕಾರಿ ಮಹಮ್ಮದ್ ರಫಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ನಾಲ್ಕು ವರ್ಷ ವಿಚಾರಣೆ ನಡೆದು ತೀರ್ಪು ಹೊರಬಿದ್ದಿದೆ.