ಕಾಂಗ್ರೆಸ್ನದ್ದು ಪ್ರಣಾಳಿಕೆಯಲ್ಲ, 'ಧೋಕಾಪತ್ರ': ನರೇಂದ್ರ ಮೋದಿ
ಪರಸ್ಪರ ಮಾತುಗಳ ಚಾಟಿ ಬೀಸುವುದನ್ನು ರಾಜಕೀಯ...
ಪಲಾಂಪುರ/ಅಮೇಠಿ/ಪಟನಾ: ಪರಸ್ಪರ ಮಾತುಗಳ ಚಾಟಿ ಬೀಸುವುದನ್ನು ರಾಜಕೀಯ ನಾಯಕರು ನಿಲ್ಲಿಸಿಲ್ಲ. ಒಬ್ಬರ ವಾಗ್ದಾಳಿಗೆ ಮತ್ತೊಬ್ಬರ ಪ್ರತ್ಯುತ್ತರ, ತಿರುಗೇಟು ಮುಂದುವರಿದಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ವಿರುದ್ಧ 'ನಮೂನೆ' ಪದ ಬಳಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರನ್ನು ಅಮೇಠಿಯಲ್ಲಿ ಪ್ರಚಾರದ ವೇಳೆ ಪ್ರಿಯಾಂಕಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಹಿಮಾಚಲದಲ್ಲಿ ರ್ಯಾಲಿ ನಡೆಸಿದ ಮೋದಿ ತಿರುಗೇಟು ನೀಡಿದ್ದಾರೆ. ಇವರ ಮಾತಿನ ವರಸೆ ಹೀಗಿದೆ:
ಕಾಂಗ್ರೆಸ್ 'ವಂಚಕ' ಪಕ್ಷ
- ಕಾಂಗ್ರೆಸ್ ಒಂದು ವಂಚಕ ಪಕ್ಷ. ಅದರದ್ದು ಪ್ರಣಾಳಿಕೆಯಲ್ಲ, 'ಧೋಕಾಪತ್ರ'.
- 100 ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಸುವುದಾಗಿ 2009ರ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಹಾಗಾದರೆ ಅದು ಪ್ರಣಾಳಿಕೆಯೇ, ಧೋಕಾಪತ್ರವೇ ನೀವೇ ಹೇಳಿ.
- ತಪ್ಪುಗಳನ್ನಾದರೂ ಜನರು ಕ್ಷಮಿಸುತ್ತಾರೆ, ವಂಚನೆಯನ್ನು ಯಾರೂ ಕ್ಷಮಿಸುವುದಿಲ್ಲ
- ಹುತಾತ್ಮ ಯೋಧ ವಿಕ್ರಂ ಬಾತ್ರಾರಂತೆ ನಾನೂ 'ಯೇ ದಿಲ್ ಮಾಂಗೇ ಮೋರ್' ಎನ್ನುತ್ತೇನೆ. ಕಾಂಗ್ರೆಸ್ಗೆ 60 ವರ್ಷಗಳ ಅವಕಾಶ ಕೊಟ್ಟಿದ್ದೀರಿ. ನನಗೆ 60 ತಿಂಗಳ ಅವಕಾಶ ಕೊಟ್ಟು ನೀಡಿ.
- ವೀರ ಯೋಧರಿಗೆ ಕಾಂಗ್ರೆಸ್ ದ್ರೋಹ ಮಾಡಿದೆ.
ಮೋದಿಯವರದ್ದು ಬಾಲಿಶ ವರ್ತನೆ
- ರಾಹುಲ್ರನ್ನು 'ಶಹಜಾದಾ', 'ನಮೂನಾ', 'ಹಾಸ್ಯಗಾರ' ಎಂದೆಲ್ಲ ಹೇಳುವ ಮೂಲಕ ಮೋದಿ ಅವರು ಬಾಲಿಶವಾಗಿ ವರ್ತಿಸುತ್ತಿದ್ದಾರೆ.
-ಪ್ರಧಾನಿ ಪಟ್ಟಕ್ಕೇರುವ ಇಚ್ಛೆಯುಳ್ಳವರು ಶಿಷ್ಟಾಚಾರ ಹೊಂದಿರಬೇಕು. ಆ ಪಟ್ಟದ ಮರ್ಯಾದೆ ಉಳಿಸಿಕೊಳ್ಳಿ. ಯಾರ್ಯಾರನ್ನು ದೂಷಿಸುವ ಬದಲು ಜನರಿಗೆ ನೀವೇನು ಮಾಡಲಿದ್ದೀರಿ ಎಂಬುದನ್ನು ತಿಳಿಸಿ.
- ನಮ್ಮ ತಂದೆ ರಾಜೀವ್ ಗಾಂಧಿ ಅವರು ನಮ್ಮ ದೇಶದಲ್ಲಿ ಕಂಪ್ಯೂಟರ್ ಅನ್ನು ಪರಿಚಯಿಸಿದಾಗ ಅವರನ್ನು ಬಿಜೆಪಿ ನಾಯಕರು ತಮಾಷೆ ಮಾಡಿದ್ದರು. ಈಗ ಅದೇ ಬಿಜೆಪಿಯವರು ನನ್ನ ತಮ್ಮನನ್ನು ತಮಾಷೆ ಮಾಡುತ್ತಿದ್ದಾರೆ.
ಮೋದಿಗಿಂತ ಕಟುಕನೇ ವಾಸಿ
ಇದೇ ವೇಳೆ, ಪಟನಾದಲ್ಲಿ ಮಾತನಾಡಿದ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್. ದೇಶದ ಪ್ರಧಾನಿಯಾಗಲು ಇಚ್ಛಿಸುತ್ತಿರುವ ಮೋದಿ ಅವರನ್ನು ನೋಡಿದರೆ ಕಟುಕನಿಗೂ ನಾಚಿಕೆಯಾಗುತ್ತಿದೆ. ಮೋದಿಗಿಂತ ಕಟುಕನೇ ವಾಸಿ. ಈ ವ್ಯಕ್ತಿಯೂ ಪ್ರಧಾನಿ ಆಗುತ್ತಾರಾ ಎಂದು ಕಟುಕ ಯೋಚಿಸುತ್ತಾನೆ ಎಂದಿದ್ದಾರೆ.
ಯೋಧನ ಕುಟುಂಬ ಆಕ್ರೋಶ
ಹಿಮಾಚಲಪ್ರದೇಶ ರ್ಯಾಲಿಯಲ್ಲಿ ಪದೇ ಪದೆ ಹುತಾತ್ಮ ಯೋಧ ವಿಕ್ರಂ ಬಾತ್ರಾ ಅವರ ಹೆಸರನ್ನು ಹಾಗೂ ಬಾತ್ರಾರ 'ಯೇ ದಿಲ್ ಮಾಂಗೇ ಮೋರ್' ಪದಗುಚ್ಛವನ್ನು ಬಳಸಿದ ನರೇಂದ್ರ ಮೋದಿ ವಿರುದ್ಧ ಯೋಧನ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಬಿಜೆಪಿ ನನ್ನ ಮಗನನ್ನು ರಾಜಕೀಯ ಉದ್ದೇಶಕ್ಕೆ ಎಳೆಯುವುದು ಬೇಡ' ಎಂದು ಬಾತ್ರಾರ ತಂದೆ ಜಿ.ಎಲ್. ಬಾತ್ರಾ ಹೇಳಿದ್ದಾರೆ. ಹುತಾತ್ಮ ಯೋಧನ ತಾಯಿ, ಶಾಲಾ ಶಿಕ್ಷಕಿ ಕಮಲ ಕಾಂತಾ ಬಾತ್ರಾ ಅವರು ಮೊದಲ ಬಾರಿಗೆ ಆಪ್ನಿಂದ ಹಮೀರ್ಪುರದಲ್ಲಿ ಕಣಕ್ಕಿಳಿದಿದ್ದಾರೆ. ಇದನ್ನು ಪ್ರಸ್ತಾಪಿಸಿದ ಜಿ.ಎಲ್. ಬಾತ್ರಾ ಅವರು, 'ಮೋದಿ ಅವರಿಗೆ ಹುತಾತ್ಮ ಯೋಧರ ಬಗ್ಗೆ ಅಷ್ಟೊಂದು ಗೌರವವಿದ್ದರೆ ತನ್ನ ಪತ್ನಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿಯನ್ನು ವಾಪಸ್ ಪಡೆಯಲಿ' ಎಂದು ಸವಾಲು ಹಾಕಿದ್ದಾರೆ.
ಮೋದಿಗೆ ಪತ್ರ: ಇದೇ ವೇಳೆ, ಕಮಲಾ ಬಾತ್ರಾ ಅವರು ಮೋದಿಗೆ ಪತ್ರ ಬರೆದಿದ್ದು, '15 ವರ್ಷಗಳಲ್ಲಿ ನೀವಾಗಲೀ, ಬಿಜೆಪಿಯಾಗಲೀ ನನ್ನ ಪುತ್ರನ ಹೆಸರನ್ನೆತ್ತಿಲ್ಲ. ಈಗ ರಾಜಕೀಯ ಉದ್ದೇಶಕ್ಕಾಗಿ ಆತನ ಹೆಸರನ್ನು ಬಳಸುತ್ತಿದ್ದೀರಿ. ಬಿಜೆಪಿ ಒಮ್ಮೆಯಾದ್ರೂ ಹುತಾತ್ಮರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದೆಯೇ' ಎಂದು ಪ್ರಶ್ನಿಸಿದ್ದಾರೆ. ನನ್ನ ಮಗನನ್ನು ಹೊಗಳಿದರಷ್ಟೇ ಸಾಲದು. ಹುತಾತ್ಮನ ಕುಟುಂಬಕ್ಕೆ ಗೌರವ ಕೊಡಬೇಕಿದ್ದರೆ ಏನು ಮಾಡಬೇಕು ಎಂಬುದನ್ನೂ ಯೋಚಿಸಬೇಕು ಎಂದಿದ್ದಾರೆ ಬಾತ್ರಾ. ಇದಕ್ಕೆ ಉತ್ತರಿಸಿರುವ ಬಿಜೆಪಿ, 'ಶ್ರೀಮತಿ ಬಾತ್ರಾ ಅವರು ಅನುರಾಗ್ ಠಾಕೂರ್ ಕಣಕ್ಕಿಳಿಯುವ ಮುನ್ನ ಬಿಜೆಪಿಯಿಂದಲೇ ಕಣಕ್ಕಿಳಿಯಬೇಕಿತ್ತು' ಎಂದಿದೆ.