ಕೈಕೊಟ್ಟ ಕೈಗಾ
ಕಾರವಾರ; ರಾಜ್ಯದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾದ ನಾಲ್ಕನೇ ಘಟಕದಲ್ಲಿ ಹಠಾತ್ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ದುರಸ್ತಿ ಆಗುವ ತನಕ ಅನಿರ್ದಿಷ್ಟ ಅವಧಿಗೆ ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಕಾಡುವ ಬೇಸಿಗೆ, ಬರ, ವಿದ್ಯುತ್ ಕ್ಷಾಮದ ನಡುವೆ ಅಣು ವಿದ್ಯುತ್ ಘಟಕ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕತ್ತಲೆ ಭೀತಿ ಆವರಿಸಿದೆ.
ಹತ್ತು ದಿನಗಳ ಹಿಂದೆ ನಾಲ್ಕನೇ ಘಟಕಕ್ಕೆ ಅಳವಡಿಸಲಾಗಿರುವ ಬೃಹತ್ ಬೇರಿಂಗ್ನ ಚಲನೆಯಲ್ಲಿ ಏರುಪೇರು ಉಂಟಾಯಿತು. ತಾತ್ಕಾಲಿಕ ಕ್ರಮ ಕೈಗೊಂಡರೂ ಸರಿಯಾಗದ ಕಾರಣ ಮುಂಬಯಿಯಿಂದ ತಾಂತ್ರಿಕ ಪರಿಣತರನ್ನು ಕರೆಸಲಾಗಿದೆ. ಅತಿ ಸೂಕ್ಷ್ಮ ಕೆಲಸ ಹಾಗೂ ಬೇರಿಂಗ್ ಅಲೈನ್ಮೆಂಟ್ ಸಮರ್ಪಕಗೊಳಿಸಬೇಕಿರುವುದರಿಂದ ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ಹೇಳಲು ಸಾಧ್ಯವಿಲ್ಲದಂತಾಗಿದೆ. ಬೇರಿಂಗ್ಗಳು ಭಾರಿ ವೇಗದಲ್ಲಿ ಚಲಿಸುತ್ತವೆ ಹಾಗೂ ನಿರಂತರವಾಗಿ ಚಲಿಸುತ್ತಿರುತ್ತವೆ. ಒಮ್ಮೊಮ್ಮೆ ಬೇರಿಂಗ್ಗಳು ತಿರುಗುವಾಗ ಕಂಪನಗಳು ಉಂಟಾಗಿ ದೋಷ ಕಾಣಿಸುತ್ತವೆ. ಇದನ್ನು ಸರಿಪಡಿಸಲು ಸಾಧ್ಯ. ಆದರೆ, ಕ್ಷಿಪ್ರವಾಗಿ ಸರಿಪಡಿಸಲು ಸಾಧ್ಯವಿಲ್ಲ. ಸಾಕಷ್ಟು ಸಮಯ ಬೇಕಾಗಲಿದೆ ಎಂದು ಯೋಜನೆಯ ತಜ್ಞರು ಅಭಿಪ್ರಾಯಪಡುತ್ತಾರೆ.
ವಿದೇಶಿ ಪರಿಣತರೂ ಮೆಚ್ಚಿದ್ದರು: ಈ ಘಟಕದ ಬಗ್ಗೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿತ್ತು. ಮಾತ್ರವಲ್ಲ ನಿರ್ಮಾಣ ಹಾಗೂ ಘಟಕದ ತಾಂತ್ರಿಕತೆ ಬಗ್ಗೆ ಅಮೆರಿಕ ಹಾಗೂ ರಷ್ಯಾದ ಪರಿಣತರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಘಟಕಕ್ಕೆ ಭೇಟಿ ನೀಡಿ, ಅದರ ಕಾರ್ಯಕ್ಷಮತೆ ಬಗ್ಗೆಯೂ ಸಮಾಧಾನ ಪಟ್ಟಿದ್ದರು. ಈ ಬಾರಿ ಜಲ ಆಧಾರಿತ ಅಣು ವಿದ್ಯುತ್ ಘಟಕ ಆರಂಭವಾದ ಮೇಲೆ ನಿರಾತಂಕವಾಗಿ ವಿದ್ಯುತ್ ಉತ್ಪಾದನೆ ನಡೆದಿತ್ತು. ರಾಜ್ಯದ ಕತ್ತಲೆ ಕಳೆಯುವಲ್ಲಿ ಕೈಗಾದ ಕೊಡುಗೆ ಮಹತ್ವದ್ದು. ಆದರೆ ಈಗ ಘಟಕವೇ ಸ್ಥಗಿತಗೊಂಡಿರುವುದರಿಂದ ರಾಜ್ಯಕ್ಕೆ ಶೇ.26ರಷ್ಟು ವಿದ್ಯುತ್ ಖೋತಾ ಆಗಿದೆ.
12/2010
ವಿದ್ಯುತ್ ಉತ್ಪಾದನೆ ಆರಂಭ
220 ಮೆ.ವ್ಯಾ.
ಘಟಕದ ಉತ್ಪಾದನಾ ಸಾಮರ್ಥ್ಯ
26%
ಒಟ್ಟು ಉತ್ಪಾದನೆಯ ಇಷ್ಟು ವಿದ್ಯುತ್ ರಾಜ್ಯಕ್ಕೆ ಸೇರುತ್ತಿತ್ತು
ವಸಂತಕುಮಾರ್ ಕತಗಾಲ