ಗರ್ಭಿಣಿ ಪತ್ನಿ ಕೊಲೆ
ಅಂತರ್ಜಾತಿ ವಿವಾಹವಾಗಿದ್ದ ಮಹಿಳೆಯನ್ನು ಆಸ್ತಿಗಾಗಿ ಪತಿ ತಂದೆಯೊಂದಿಗೆ ಸೇರಿ ಹತ್ಯೆ..
ಬೆಂಗಳೂರು: ಅಂತರ್ಜಾತಿ ವಿವಾಹವಾಗಿದ್ದ ಮಹಿಳೆಯನ್ನು ಆಸ್ತಿ ಆಸೆಗಾಗಿ ಪತಿ ತಂದೆಯೊಂದಿಗೆ ಸೇರಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ.
ಅಂತರ್ಜಾತಿ ವಿವಾಹ ಕಾರಣ ಆಸ್ತಿ ಕೊಡುವುದಿಲ್ಲ ಎಂದು ತಂದೆ ಬೆದರಿಸಿದ ಹಿನ್ನೆಲೆಯಲ್ಲಿ ಏಳು ತಿಂಗಳ ಗರ್ಭಿಣಿ ಸ್ಮಿತಾ (22)ಳ ಕೈಕಾಲು ಕಟ್ಟಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ.
ಹೆಸರಘಟ್ಟದಲ್ಲಿ ಮಂಗಳವಾರ ಬೆಳಗ್ಗೆ ಕೊಲೆ ನಡೆದಿದ್ದು, ಟೊಯೋಟಾ ವಾಹನ ಬಿಡಿ ಭಾಗಗಳ ತಯಾರಿಕಾ ಕಂಪನಿ ನೌಕರ ಮದನ್ ಕುಮಾರ್ ಹಾಗೂ ತಂದೆ ರಾಜಣ್ಣ ಕೊಲೆ ಮಾಡಿದ್ದಾರೆ ಎಂದು ಸ್ಮಿತಾ ತಂದೆ ರುದ್ರಣ್ಣ ಆರೋಪಿಸಿದ್ದಾರೆ.
ವಿವರ: ಬಿಡಿಎನಲ್ಲಿ ಸಹಾಯಕ ಸಬ್ಇನ್ಸ್ಪೆಕ್ಟರ್ ಆಗಿರುವ ರಾಜಣ್ಣ ಅವರ ಮಗ ಮದನ್ ಹಾಗೂ ರಾಜಾನುಕುಂಟೆ ಸಮೀಪದ ಕಾಕೋಳು ನಿವಾಸಿ ರುದ್ರಣ್ಣ ಅವರ ಮಗಳು ಸ್ಮಿತಾ ಪ್ರೀತಿಸಿ ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದರು.
ಮದನ್ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾಗ ಬಿ.ಕಾಂ ಓದುತ್ತಿದ್ದ ಸ್ಮಿತಾ ಪರಿಚಯವಾಗಿತ್ತು. ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಜಾತಿ ಬೇರೆಯಾದ ಕಾರಣ ಹುಡುಗನ ತಂದೆ ರಾಜಣ್ಣ, ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸ್ಮಿತಾ ಪೋಷಕರು ಒಪ್ಪಿಗೆ ಮೇರೆಗೆ ವಿವಾಹವಾಗಿತ್ತು. ದಂಪತಿ ಹೆಸರಘಟ್ಟದ ಸ್ವಂತ ಮನೆಯಲ್ಲಿ ವಾಸವಿದ್ದರು. ಅದಕ್ಕೆ ಹೊಂದಿಕೊಂಡಂತೆ ಇರುವ ಮತ್ತೊಂದು ಮನೆಯಲ್ಲಿ ಪೋಷಕರು ವಾಸವಿದ್ದರು. ಸ್ಮಿತಾ ಮನೆಯಲ್ಲೇ ಯುವತಿಯರಿಗೆ ಬ್ಯೂಟಿಷಿಯನ್ ಹಾಗೂ ಟೈಲರಿಂಗ್ ಹೇಳಿಕೊಡುತ್ತಿದ್ದರು.
ಮನೆ ಬದಲಿಸುವ ಯೋಚನೆ: ಮದನ್ ಹಾಗೂ ಸ್ಮಿತಾ ಚೆನ್ನಾಗಿ ಜೀವನ ನಡೆಸುತ್ತಿದ್ದರು. ತಂದೆ ರಾಜಣ್ಣ ಮುನಿಸಿಕೊಂಡಿದ್ದರು. 9 ತಿಂಗಳ ಹಿಂದೆ ಮದನ್ ಸಹೋದರಿ ವಿವಾಹ ನಡೆದಿದ್ದು, ಅದಕ್ಕೆ ಮದನ್ ಹಾಗೂ ಸ್ಮಿತಾಗೆ ಆಹ್ವಾನ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ಸ್ಮಿತಾ ಬೇರೆ ಮನೆ ಮಾಡಲು ನಿರ್ಧರಿಸಿ ಪೋಷಕರಿಗೆ ಮಾಹಿತಿ ನೀಡಿದ್ದರು' ಎಂದು ಸ್ಮಿತಾ ತಂದೆ ರುದ್ರಣ್ಣ ತಿಳಿಸಿದರು. ಹೆರಿಗೆಗೆ ತವರಿಗೆ ಹೋಗಿ ಬಂದ ನಂತರ ಮನೆ ಬದಲಾಯಿಸದರಾಯಿತು ಎಂದು ಮದನ್ ನೀಡಿದ್ದ ಸಲಹೆಗೆ ಸ್ಮಿತಾ ಒಪ್ಪಿದ್ದರು ಎಂದು ತಿಳಿದು ಬಂದಿದೆ.
ಕೊಲೆ ಸಂಚು: ಮಂಗಳವಾರ ಬೆಳಗ್ಗೆ 9 ಕ್ಕೆ ಮದನ್ ಕೆಲಸಕ್ಕೆ ತೆರಳಿದ್ದ. 10ಕ್ಕೆ ಸ್ಮಿತಾ ತಾಯಿ ಜತೆ ಫೋನ್ನಲ್ಲಿ ಮಾತನಾಡಿದ್ದಳು. ಅದಾದ 20 ನಿಮಿಷಗಳಲ್ಲಿ ಟ್ಯೂಷನ್ ವಿದ್ಯಾರ್ಥಿಗಳು ಮನೆಗೆ ಬಂದಾಗ ಸ್ಮಿತಾ ಕೈ ಕಾಲು ಕಟ್ಟಿ ಹಾಕಲಾಗಿದ್ದು, ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸೋಲದೇವನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಶವಪರೀಕ್ಷೆಗೆ ಸಾಗಿಸಿದ್ದಾರೆ.
'ಮದುವೆಯಾದ ಮರುದಿನವೇ ದಂಪತಿ ಬೇರೆ ಮಾಡುವುದಾಗಿ ರಾಜಣ್ಣ ಬೆದರಿಕೆ ಹಾಕಿದ್ದ. ನಾನು ಪೊಲೀಸ್ ಏನು ಮಾಡಬೇಕು ಎನ್ನುವುದು ಗೊತ್ತು ಎಂದು ಹೇಳಿದ್ದ. ಅದರಂತೆ ಆತನ ಮಗನೊಂದಿಗೆ ಸೇರಿ ಕೊಲೆ ಮಾಡಿದ್ದಾನೆ' ಎಂದು ಸ್ಮಿತಾ ತಂದೆ ರುದ್ರಣ್ಣ ಕನ್ನಡಪ್ರಭಕ್ಕೆ ತಿಳಿಸಿದರು. 'ಮದನ್, ತಂದೆ ರಾಜಣ್ಣ, ಇತರರ ವಿರುದ್ಧ ಸ್ಮಿತಾ ತಂದೆ ರುದ್ರಣ್ಣ ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ಮದನ್ನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದೇವೆ' ಎಂದು ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.
ಪೂರ್ವ ಯೋಜಿತ ಕೃತ್ಯ
ಕಳೆದ 9 ತಿಂಗಳಿಂದ ಒಮ್ಮೆಯು ಮಾತನಾಡಿಸದ ಮಾವ ರಾಜಣ್ಣ ನಾಲ್ಕು ದಿನಗಳ ಹಿಂದಷ್ಟೇ ಸ್ಮಿತಾಳನ್ನು ಸುಮಾರು ಅರ್ಧ ಗಂಟೆ ಮಾತನಾಡಿಸಿದ್ದರು. ಟ್ಯೂಷನ್ ಯುವತಿಯರು ಎಷ್ಟು ಗಂಟೆಗೆ ಬರುತ್ತಾರೆ? ಹೋಗುತ್ತಾರೆ ಎಂದು ಕೇಳಿದ್ದರು. ಮಾವ ತನ್ನನ್ನು ಒಪ್ಪಿಕೊಂಡಿದ್ದಾರೆ ಎಂದು ಭಾವಿಸಿದ್ದ ಸ್ಮಿತಾ, ನಮಗೆ ಕರೆ ಮಾಡಿ ತಿಳಿಸಿದ್ದಳು. ಆದರೆ, ಆಕೆಯನ್ನು ಕೊಲೆ ಮಾಡಲು ಈ ರೀತಿ ಮಾಹಿತಿ ಸಂಗ್ರಹಿಸಿದ್ದರು ಎನ್ನುವುದು ಆಕೆ ಕನಸಲ್ಲೂ ಊಹಿಸಿರಲಿಲ್ಲ.
- ರುದ್ರಣ್ಣ, ಸ್ಮಿತಾ ತಂದೆ