ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರಧಾನಿ, ಹಿರಿಯ ನಾಯಕರು ಹೆಚ್ಚು ಮಾತನಾಡಬೇಕಿತ್ತು

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ...

Mainashree
Updated On : 29 Apr 2014, 10:02 am

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎನ್ನುವ ಸಮೀಕ್ಷೆಗಳು ಹಾಗೂ ಮೋದಿ ಅಲೆ ದೇಶಾದ್ಯಂತ ವ್ಯಾಪಿಸುತ್ತಿದೆ ಎಂಬ ಹೇಳಿಕೆಗಳ ನಡುವೆಯೇ ಕಾಂಗ್ರೆಸ್‌ನ ಮೂವರು ಹಿರಿಯ ನಾಯಕರು ಮಂಗಳವಾರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪಕ್ಷದ ಬಗ್ಗೆ, ಸರ್ಕಾರದ ಬಗ್ಗೆ ಅವರ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಜೈರಾಂ ರಮೇಶ್
ಯುಪಿಎ-2 ಸರ್ಕಾರಕ್ಕೆ ಬಂದ ಎಲ್ಲ ಅಡ್ಡಿ, ಸಮಸ್ಯೆಗಳಿಗೂ ಪರಿಣಾಮಕಾರಿಯಲ್ಲದ ಸಂವಹನ ಕಾರಣ ಎಂದು ಕೇಂದ್ರ ಸಚಿವ ಜೈರಾಂ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಮೇಶ್, ಆರೋಪಗಳು ಕೇಳಿಬಂದಾಗ ನಾವು ನೀಡಿದ್ದ ಪ್ರತಿಕ್ರಿಯೆಗೆ ತೂಕವೇ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪ್ರಧಾನಿ ಪ್ರತಿಕ್ರಿಯಿಸಬೇಕಿತ್ತು. ಹಿರಿಯ ನಾಯಕರು ಪರಿಣಾಮಕಾರಿ ಸಂವಹನ ನಡೆಸಬೇಕಿತ್ತು ಎಂದಿದ್ದಾರೆ. ಇದೇ ವೇಳೆ, ಪ್ರಿಯಾಂಕಾ ಹಾಗೂ ರಾಹುಲ್‌ಗೆ ಹೋಲಿಕೆ ಮಾಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈರಾಂ, ಪ್ರಿಯಾಂಕಾ ಆಕರ್ಷಕವಾಗಿದ್ದಾರೆ ಹಾಗೂ ಚೆನ್ನಾಗಿ ಮಾತಾಡುತ್ತಾರೆ ನಿಜ. ಆದರೆ ರಾಹುಲ್ ಕಾಂಗ್ರೆಸ್‌ನ ನಾಯಕ ಎಂದಿದ್ದಾರೆ.
ಅಹ್ಮದ್ ಪಟೇಲ್
ಯುಪಿಎ ಮತ್ತೆ ಅಧಿಕಾರಕ್ಕೇರುವುದಿಲ್ಲ, ಸಮೀಕ್ಷೆಗಳ ಪ್ರಕಾರ ಎನ್‌ಡಿಎ ಬಹುಮತ ಗಳಿಸುತ್ತದೆ ಎಂಬೆಲ್ಲ ಭವಿಷ್ಯವನ್ನೂ ಕಾಂಗ್ರೆಸ್ ನಾಯಕ, ಸೋನಿಯಾರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಕೇವಲ 'ಊಹಾಪೋಹ' ಎಂದಷ್ಟೇ ಭಾವಿಸಿದ್ದಾರೆ. ಜತೆಗೆ, ಮೋದಿ ಅಧಿಕಾರಕ್ಕೇರುವುದನ್ನು ತಡೆಯಲು ತೃತೀಯ ರಂಗಕ್ಕೆ ಕಾಂಗ್ರೆಸ್ ಬೆಂಬಲ ಕೊಡುವುದೇ ಎಂಬ ಪ್ರಶ್ನೆಗೆ ಉತ್ತರಿಸಲೂ ಅವರು ನಿರಾಕರಿಸಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಪಟೇಲ್, ಕಾಂಗ್ರೆಸ್‌ಗೆ ಬಹುಮತ ಬರುವುದು ಖಚಿತ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಕಾರ್ಯಕಾರಿ ಸಮಿತಿಯೊಂದಿಗೆ ಸಮಾಲೋಚಿಸಿ ಸೋನಿಯಾ ಅವರೇ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ, ಜನರಲ್ಲಿ ಕಾಂಗ್ರೆಸ್ ಬಗ್ಗೆ ಸ್ವಲ್ಪಮಟ್ಟಿಗೆ ಅಸಮಾಧಾನವಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
ದಿಗ್ವಿಜಯ್
ಮೈತ್ರಿಕೂಟ ಸರ್ಕಾರ ರಚನೆ ವೇಳೆ ಬಾಹ್ಯ ಬೆಂಬಲ ನೀಡುವುದು ಕಾರ್ಯಸಾಧುವಲ್ಲದ್ದು, ಇದು ಕೇವಲ ಹುಚ್ಚಾಟ ಎಂದಿದ್ದಾರೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿಗ್ಗಿ, ಬಾಹ್ಯ ಬೆಂಬಲ ಅಪ್ರಾಯೋಗಿಕ ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ. 1996ರಲ್ಲಿ ಸಂಯುಕ್ತ ರಂಗಕ್ಕೆ ಕಾಂಗ್ರೆಸ್ ಬೆಂಬಲ ನೀಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೂ ಸರಿಯಾಗಿ ನಡೆದಿಲ್ಲವಲ್ಲ ಎಂದಿದ್ದಾರೆ. ಇದೇ ವೇಳೆ, ಮಾಧ್ಯಮಗಳು ಬಿಜೆಪಿ ಪರ ಮೃದು ಧೋರಣೆ ತಾಳಿವೆ ಎಂದೂ ಸಿಂಗ್ ಹೇಳಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು ಬಿಜೆಪಿಗೆ ಬಂದಾಗ ಅದು ವರದಿಯಾಗಲೇ ಇಲ್ಲ. ಆದರೆ, ಅಶೋಕ್ ಚವಾಣ್ ಅವರ ವಿಚಾರಣೆಯೂ ನಡೆದಿಲ್ಲ, ಅವರ ವಿರುದ್ಧ ಆರೋಪಪಟ್ಟಿಯೂ ದಾಖಲಾಗಿಲ್ಲ, ಆದರೂ ಅವರಿಗೆ ಟಿಕೆಟ್ ನೀಡಿದಾಗ ದೊಡ್ಡ ಸುದ್ದಿಯಾಯಿತು ಎಂದಿದ್ದಾರೆ ಸಿಂಗ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement