ಮೇವಿಗಾಗಿ ಜನರ ಜಾನು'ವಾರ್'
ಬೇಸಿಗೆ ಬಂತೆಂದರೆ ಸಾಕು ಸಮಸ್ಯೆಗಳ ಸರಮಾಲೆಯೇ ಶುರುವಾಗಿಬಿಡುತ್ತೆ...
ಬೇಸಿಗೆ ಬಂತೆಂದರೆ ಸಾಕು ಸಮಸ್ಯೆಗಳ ಸರಮಾಲೆಯೇ ಶುರುವಾಗಿಬಿಡುತ್ತೆ. ಜನರೇನೋ ಕುಡಿಯಲು ನೀರಿಲ್ಲ ಎಂದು ಬವಣೆ ಇಡುತ್ತಾರೆ. ಆದರೆ ಜಾನುವಾರುಗಳಿಗೆ ನೀರು ಮತ್ತು ಮೇವಿಲ್ಲದಿದ್ದರೆ.., ಹೌದು, ರಾಜ್ಯದಲ್ಲಿ ಮೇವಿನ ಸಮಸ್ಯೆ ಬಹುವಾಗಿಯೇ ಕಾಡುತ್ತಿದೆ. ಎಷ್ಟೋ ಜಿಲ್ಲೆಗಳಲ್ಲಿ ಹಣ ಕೊಟ್ಟರೂ ಮೇವು ಸಿಗಲಾರದ ಸ್ಥಿತಿ ಇದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೇವಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದ ನಿರ್ಲಕ್ಷ್ಯತನ ಜಿಲ್ಲಾಡಳಿತದಲ್ಲಿದೆ. ಹೈದ್ರಾಬಾದ್ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮೇವನ್ನು ನೆರೆ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಮೇವಿನ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಒಟ್ಟಾರೆಯಾಗಿ ರಾಜ್ಯದ ಜಾನುವಾರುಗಳಿಗೆ ಮೇವು ಸಿಗುವುದು ಕಷ್ಟ ಎಂಬಂಥ ಪರಿಸ್ಥಿತಿ ಇದೆ.
ಮೇವಿನ ಬೀಜವೇ ಕೊಡದ ಜಿಲ್ಲಾಡಳಿತ!
- ಈ ಬಾರಿ ಹವಾಮಾನ ಮುನ್ಸೂಚನೆಯಂತೆ ಜುಲೈವರೆಗೆ ಮಳೆ ಇಲ್ಲ
- ತಾಲೂಕುವಾರು ಬೀಜದ ಬೇಡಿಕೆ ಇಟ್ಟ ಪಶುಸಂಗೋಪನಾ ಇಲಾಖೆ
- ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ ಮಲೆನಾಡ ಜಿಲ್ಲೆ. ಸದ್ಯ 10 ವಾರಕ್ಕೇನೂ ಮೇವಿಗೆ ಇಲ್ಲಿ ತೊಂದರೆ ಇಲ್ಲ. ಹಾಗೆಂದು ಕೈ ಕಟ್ಟಿ ಕುಳಿತರೆ ಮುಂದಿನ ದಿನಗಳ ಪರಿಸ್ಥಿತಿಯನ್ನೂ ಊಹಿಸಲೂ ಸಾಧ್ಯವಿಲ್ಲ. ಆದರೆ, ಜಿಲ್ಲಾಡಳಿತವು ಇದುವರೆಗೂ ರೈತರಿಗೆ ಮೇವಿನ ಬೀಜ ವಿತರಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಸದ್ಯ ಜಿಲ್ಲೆಯಲ್ಲಿ 2,63,525 ಮೆಟ್ರಿಕ್ ಟನ್ ಮೇವು ಇದೆ. ಆದರೆ, ಜಿಲ್ಲೆಯಲ್ಲಿರುವ ಮೇವು ಆಧಾರಿತ ಜಾನುವಾರುಗಳ ಸಂಖ್ಯೆ 7,20,000. ಒಂದು ಜಾನುವಾರಿಗೆ ದಿನಕ್ಕೆ ಕನಿಷ್ಠ 5 ಕಿಲೋ ಒಣ ಮೇವು, 10 ಕಿಲೋ ಹಸಿ ಮೇವು ಬೇಕು. ಈಗಿರುವ ದಾಸ್ತಾನು 10 ವಾರಕ್ಕೆ ಖಾಲಿ ಆಗುವುದು ಖಚಿತ. ಮೇವು ಕೊರತೆ ಕಂಡ ತಕ್ಷಣ ಬೆಳೆದು ನಿವಾರಿಸಲು ಆಗುವುದಿಲ್ಲ. ಬೀಜ ಬಿತ್ತನೆ ನಂತರ ಕನಿಷ್ಠ 60 ದಿನ ಬೇಕು. ಆದರೆ, ಜಿಲ್ಲಾಡಳಿತ ಈ ಬಗ್ಗೆ ಚಿಂತನೆಯನ್ನೇ ಮಾಡಿಲ್ಲ. ಕೂಡಲೇ ನೀರಾವರಿ ಪ್ರದೇಶದ ರೈತರಿಗೆ ಮೇವು ಬೀಜವನ್ನು ವಿತರಿಸದಿದ್ದರೆ ಕಷ್ಟದ ದಿನಗಳು ಕಾದಿವೆ. ಮೇವು ಬೀಜ ವಿತರಣೆಗೆ ಬೇಕಾಗುವ ಲಕ್ಷಗಳನ್ನು ಉಳಿಸಿಕೊಳ್ಳಲು ಚಿಂತಿಸಿದರೆ ಮುಂದೆ ಮೇವು ಖರೀದಿಗೆ ಕೋಟಿಗಟ್ಟಲೆ ಖರ್ಚು ಮಾಡಬೇಕಾಗುತ್ತದೆ.
ಸಮಸ್ಯೆ: ಬತ್ತವನ್ನು 1,08,000 ಹೆಕ್ಟೇರ್ನಲ್ಲಿ ಬೆಳೆಯಲಾಗಿದೆ. ಮಿಷನ್ ಕಟಿಂಗ್ನಿಂದಾಗಿ ಮೇವು ಉಳಿಯುತ್ತಿಲ್ಲ. ರೈತರಲ್ಲೀಗ ಬಣವೆ ಹಾಕುವ ಸಂಪ್ರದಾಯ ಇಲ್ಲ.
ಗೋಶಾಲೆಯೇ ಗತಿ!
- ಪ್ರಸ್ತುತದಲ್ಲಿ ದಿನಕ್ಕೆ 2014 ಮೆಟ್ರಿಕ್ ಟನ್ ಮೇವಿನ ಅವಶ್ಯಕತೆ ಇದೆ
- ವಿಚಿತ್ರವೆಂದರೆ ಮೇವಿನ ಕೊರತೆಯೇ ಇಲ್ಲ ಎನ್ನುತ್ತಿರುವ ಅಧಿಕಾರಿಗಳು
- ದೇವರಾಜು ಕಪ್ಪಸೋಗೆ
ಚಾಮರಾಜನಗರ ಜಿಲ್ಲೆಗಳಲ್ಲಿ ಮೇವಿಗೆ ತೀವ್ರ ಸಮಸ್ಯೆ ಇದೆ. ಕಳೆದ ಹಲವಾರು ವರ್ಷಗಳಿಂದ ಅನಾವೃಷ್ಟಿ ಕಾಡಿದೆ. ಹೀಗಾಗಿ ಶೀಘ್ರ ಮಳೆ ಬಾರದಿದ್ದರೆ ಗೋ ಶಾಲೆ ತೆರೆಯುವುದು ಅನಿವಾರ್ಯ. ಜಿಲ್ಲೆಯ ಬಹುತೇಕರು ಹೈನುಗಾರಿಕೆ ಅವಲಂಬಿಸಿದ್ದಾರೆ. 2.91 ಲಕ್ಷ ಜಾನುವಾರುಗಳಿವೆ. ಪ್ರತಿನಿತ್ಯ 2014 ಮೆಟ್ರಿಕ್ಟನ್ ಮೇವು ಬೇಕಿದೆ. ವರ್ಷಕ್ಕೆ 7 ಲಕ್ಷ ಟನ್ ಮೇವಿನ ಅವಶ್ಯಕತೆ ಇದೆ. ಕಳೆದ ಬಾರಿ 80.303 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ತೆಗೆಯಲಾಗಿದ್ದು, 6 ಲಕ್ಷ ಮೆಟ್ರಿಕ್ ಟನ್ ಮೇವು ಉತ್ಪಾದನೆಯಾಗಿದೆ. ಈ ಬಾರಿ ಮಳೆ ಬಾರದಿದ್ದರೆ ತಕ್ಷಣದಲ್ಲೇ ಪಣ್ಯದಹುಂಡಿ, ಹರವೆ ಮತ್ತು ಹರದನಹಳ್ಳಿ ಭಾಗದಲ್ಲಿ ಗೋ ಶಾಲೆ ತೆರೆಯುವುದು ಅನಿವಾರ್ಯವಾಗಿದೆ. ಈಗಾಗಲೇ ಮೇವಿನ ತೊಂದರೆಯಾಗಿದ್ದರಿಂದ ಜಿಲ್ಲೆಯಲ್ಲಿ ಆರು ಗೋಶಾಲೆ ತೆರೆಯಲಾಗಿದೆ. 2012- 13ರಲ್ಲಿ ತೀವ್ರ ಬರಗಾಲವಿದ್ದ ಹಿನ್ನೆಲೆ ಚಾಮರಾಜನಗರ ತಾಲೂಕಿನ ಮಂಗಲ, ಮುತ್ತಿಗೆ, ಹರವೆ, ಗಣಗನೂರು ಕೊಳ್ಳೇಗಾಲ ತಾಲೂಕಿನ ಹನೂರು, ಬಂಡಳ್ಳಿ, ಮಾರ್ಟಳ್ಳಿ, ಕೆಂಪನಪಾಳ್ಯ, ಕೆಂಪಯ್ಯನಹಟ್ಟಿ, ಇಕ್ಕಡಹಳ್ಳಿ, ಕಂಡಯ್ಯನಪಾಳ್ಯ ಮತ್ತು ಗುಂಡ್ಲುಪೇಟೆ ತಾಲೂಕಿನ ಹಕ್ಕಲಪುರದಲ್ಲಿ ಗೋಶಾಲೆ ತೆರೆಯಲಾಗಿತ್ತು.
ಈ ಬಾರಿ ದಿಢೀರ್ ಕೊರತೆ
-ಹೈನುಗಾರರಿಗಾಗಿ ಕೆಎಂಎಫ್ನಿಂದ ಒಣ ಹುಲ್ಲು ಪೂರೈಕೆ
- ಕಳೆದ ಬಾರಿ ಗುತ್ತಿಗೆದಾರರು ಪೂರೈಸದ ಕಾರಣ, ಈ ಬಾರಿ ಟೆಂಡರ್ ಇಲ್ಲ
- ಸುಭಾಶ್ಚಂದ್ರ ವಾಗ್ಳೆ
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಮೇವಿನ ಕೊರತೆ ಇರಲಿಲ್ಲ. ಆದರೆ ಈ ವರ್ಷದಿಂದ ಏಕಾಏಕಿ ಕೊರತೆ ಶುರುವಾಗಿದೆ. ಇಲ್ಲಿ ಬತ್ತ ಮುಖ್ಯ ಬೆಳೆಯಾಗಿರುವುದರಿಂದ ಒಣಹುಲ್ಲು ದನಗಳ ಮುಖ್ಯ ಆಹಾರ. ಜತೆಗೆ ಅಡಕೆ- ತೆಂಗಿನ ತೋಟ ಹೆಚ್ಚಿದ್ದು, ಇಲ್ಲಿ ವರ್ಷವಿಡೀ ಹಸಿರು ಹುಲ್ಲು ಸಿಗುತ್ತದೆ. ಆದರೆ ಕಳೆದ 10 ವರ್ಷಗಳಲ್ಲಿ ಹೈನುಗಾರಿಕೆಯಲ್ಲಿ ವಿದೇಶಿ ಮತ್ತು ಮಿಶ್ರ ತಳಿಯ ದನಗಳ ಸಾಕಣೆ ಹೆಚ್ಚಿದೆ. ಇದರಿಂದ ಅಲ್ಪ ಪ್ರಮಾಣದಲ್ಲಿ ಬತ್ತದ ಒಣ ಹುಲ್ಲಿನ ಕೊರತೆ ಉಂಟಾಗಿದೆ. ಪಕ್ಕದ ಶಿವಮೊಗ್ಗ ಜಿಲ್ಲೆಯಿಂದ ಒಣಹುಲ್ಲು ಆಮದಾಗುತ್ತಿದೆ. ಆದರೆ ಜಿಲ್ಲೆಯ ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾಗಿದ್ದರಿಂದ ಬತ್ತ ಕಟಾವು ಮಾಡುವಾಗ ಒಣಹುಲ್ಲು ನಷ್ಟವಾಗುತ್ತಿದೆ. ಇದರಿಂದ ಮೇವಿನ ಕೊರತೆ ಆರಂಭವಾಗಿದೆ. ಜಿಲ್ಲಾಡಳಿತಕ್ಕಾಗಲೀ, ಪಶು ಸಂಗೋಪನೆ ಇಲಾಖೆಗಾಗಲೀ ತೊಂದರೆಯ ಅರಿವು ಇನ್ನೂ ಆಗಿಲ್ಲ. ಕೊರತೆ ಇಲ್ಲ ಎಂದೇ ಅಧಿಕಾರಿಗಳು ಹೇಳುತ್ತಾರೆ ಅನ್ನೋದು ರೈತರ ಆಕ್ರೋಶ.
ಜಾನುವಾರಿಗಿಲ್ಲ ಆತಂಕ
- ಈಗಾಗಲೇ ಜಿಲ್ಲಾಡಳಿತದಿಂದ ಸಾಕಷ್ಟು ಮೇವು ಸಂಗ್ರಹ
- ಹೀಗಾಗಿ ನೆರವಿಗಾಗಿ ಮಠಾಧೀಶರನ್ನು ಸಂಪರ್ಕಿಸಿಲ್ಲ
- ಉಗಮ ಶ್ರೀನಿವಾಸ್
ತುಮಕೂರು ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸದ್ಯಕ್ಕೆ ಆತಂಕವಿಲ್ಲ. 13 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ. ಮಳೆಗಾಲ ಆರಂಭವಾಗುವ ತನಕ ಮೇವಿಗೆ ಬರವಿಲ್ಲ. ತುಮಕೂರು ಜಿಲ್ಲೆಯ ಗುಬ್ಬಿ, ತುರುವೇಕೆರೆ, ಕುಣಿಗಲ್ನಲ್ಲಿ ತಕ್ಕ ಮಟ್ಟಿಗೆ ನೀರಿದೆ. ಹೀಗಾಗಿ ಗೋಶಾಲೆ ತೆಗೆಯುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸತ್ಯಮೂರ್ತಿ ಹೇಳುತ್ತಾರೆ. ಮೇವಿಗೆ ತೊಂದರೆಯಾಗಬಾರದೆಂದು ಜಿಲ್ಲಾಡಳಿತ ಮೇವಿನ ಬೀಜವಿರುವ 5 ಸಾವಿರ ಸೀಡ್ ಕಿಟ್ ವಿತರಿಸಿದೆ. ಜೂನ್ ತಿಂಗಳಿನಲ್ಲಿ ಮಳೆ ಆರಂಭವಾಗುತ್ತದೆ. ಹಾಗಾಗಿ ಈ ಬಾರಿ ಯಾವುದೇ ರೀತಿಯಲ್ಲೂ ಮೇವಿಗೆ ತೊಂದರೆಯಾಗುವುದಿಲ್ಲ ಎಂಬುದು ಜಿಲ್ಲಾಡಳಿತದ ಅಂಬೋಣ. ಜಾನುವಾರುಗಳಿಗೆ ಕುಡಿವ ನೀರಿನ ಸಲುವಾಗಿ ಜಿಲ್ಲೆಯ 80 ಕಡೆ ನೀರಿನ ಹಳ್ಳಗಳನ್ನು ನಿರ್ಮಿಸಲಾಗಿದೆ. 'ಕಳೆದ ಸಲ ಬೇಸಿಗೆಯಲ್ಲಿ ಎದುರಾಗಿದ್ದ ಬರದಿಂದ ಜಾನುವಾರುಗಳನ್ನು ಕಸಾಯಿಖಾನೆ ಕಳುಹಿಸಲಾಗುತ್ತಿತ್ತು. ಈಗ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ಮಳೆಗಾಲ ಆರಂಭವಾಗುವ ತನಕ ಮೇವಿಗೆ ಬರ ಇಲ್ಲ. ಈ ಹಿನ್ನೆಲೆಯಲ್ಲಿ ಗೋಶಾಲೆಯನ್ನು ನಿರ್ಮಿಸುವ ಅಗತ್ಯವಿಲ್ಲ' ಎನ್ನುತ್ತಾರೆ ಜಿಲ್ಲಾಧಿಕಾರಿ.
ಇಲ್ಲಿ ಮೇವಿಗಿಲ್ಲ ಭಯ
- ಅಂತರ್ಜಲ ಕುಸಿತದಿಂದ ಶೇ. 50ರಷ್ಟು ಕೊಳವೆ ಬಾವಿಗಳು ವಿಫಲ
- ಹೊಸದಾಗಿ ಸಾವಿರ ಅಡಿಯಾಚೆ ಕೊರೆದರೂ ನೀರು ಸಿಗುತ್ತಿಲ್ಲ
- ಮತ್ತೀಕೆರೆ ಜಯರಾಮ್
ರಾಮನಗರ ಬರಪೀಡಿತ ಜಿಲ್ಲೆ. ಇಲ್ಲಿ ಈಗಾಗಲೇ ಜನ, ಜಾನುವಾರಿಗೆ ಕುಡಿಯುವ ನೀರು ಸಮರ್ಪಕವಾಗಿಲ್ಲ. ಆದರೆ, ಜಾನುವಾರುಗಳಿಗೆ ಇನ್ನೂ 42 ವಾರಕ್ಕಾಗುವಷ್ಟು ಒಣ ಮೇವು ಲಭ್ಯವಿದೆ. ಆದರೆ ಹೈನುಗಾರಿಕೆ ರಾಸುಗಳಿಗೆ ಹಸಿರು ಮೇವಿನ ಕೊರತೆ ಇದೆ. ಕಳೆದ ಬೇಸಿಗೆಯ ಕಹಿ ಅನುಭವದಿಂದ ಎಚ್ಚೆತ್ತ ರೈತರು ಈ ಬಾರಿ ಹುಲ್ಲು ಮಾರದೆ, ದಾಸ್ತಾನಿಟ್ಟಿದ್ದಾರೆ. ಕಳೆದ ವರ್ಷ ಈ ಭಾಗದ ರೈತರು ಜಾನುವಾರುಗಳಿಗೆ ಮೇವನ್ನು ಕಾವೇರಿ ಆಶ್ರಿತ ಬೇಸಾಯ ಪ್ರದೇಶವಾದ ನೆರೆಯ ಮಂಡ್ಯ, ಮೈಸೂರು ಜಿಲ್ಲೆಗಳಿಂದ ದುಬಾರಿ ಬೆಲೆ ತೆತ್ತು ಖರೀದಿಸಿದ್ದರು. ಇಲ್ಲಿನ್ನೂ ಗೋಶಾಲೆ ತೆರೆಯುವ ಅಗತ್ಯವೇನೂ ಕಂಡು ಬರುತ್ತಿಲ್ಲ. ಕೃಷಿಗೆ ಬೆನ್ನು ತೋರಿದ ರೈತರು ಸಹಜವಾಗಿಯೇ ದುಡಿಯುವ ದನಗಳನ್ನು ಮಾರಿದ್ದಾರೆ. ದಿನ ದಿನಕ್ಕೆ ಹೈನೋದ್ಯಮ ಅವಲಂಬಿತರ ಸಂಖ್ಯೆ ಹೆಚ್ಚಿದ್ದು, ಹಾಲು ಕೊಡುವ ರಾಸುಗಳ ಸಾಕಾಣಿಕೆ ಪ್ರಮಾಣ ಹೆಚ್ಚುತ್ತಿದೆ. ಹೈನೋದ್ಯಮದಲ್ಲಿ ಹಾಲು ಕೊಡುವ ರಾಸುಗಳಿಗೆ ಹಸಿರು ಮೇವು ನಿಗದಿತ ಪ್ರಮಾಣದಲ್ಲಿ ಅತ್ಯಗತ್ಯ. ಲಭ್ಯವಿರುವ ಅಲ್ಪ ಪ್ರಮಾಣದ ಹಸಿರು ಮೇವಿಗೆ ಬೇಡಿಕೆ ಹೆಚ್ಚಿದೆ.
ಕಾಳಜಿ ಮಾತ್ರ ಕಾಣುತ್ತಿಲ್ಲ
- ಸಮಸ್ಯೆ, ಅದರ ಪರಿಣಾಮ ಅಧಿಕಾರಿಗಳ ಗಮನಕ್ಕೆ ಬಂದಿದೆ.
- ಆದರೂ ಸದ್ಯಕ್ಕೆ ರೈತರೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ
- ಎನ್. ವೆಂಕಟೇಶ್
ಚಿಕ್ಕಬಳ್ಳಾಪುರದಲ್ಲಿ ಮೇವಿನ ಸಮಸ್ಯೆ ಮಿತಿಮೀರಿದೆ. ಜಾನುವಾರುಗಳಿಗೆ ಕುಡಿವ ನೀರು ಹಾಗೂ ಮೇವಿಗಾಗಿ ರೈತರು ಎಲ್ಲಿಲ್ಲದ ಕಷ್ಟಪಡುತ್ತಿದ್ದಾರೆ. ಜಿಲ್ಲೆಯ ಹೆಚ್ಚಿನ ಜನ ಹೈನೋದ್ಯಮ ನಂಬಿದ್ದಾರೆ. ಆದರೆ ಸರಿಯಾದ ಮಳೆಯಾಗದೆ, ಹಸಿರು ಉಳಿಯದೇ, ಬೆಳೆ ಬಾರದೇ ಹೈನೋದ್ಯಮಕ್ಕೆ ಹಿನ್ನಡೆಯಾಗಿದೆ. ಈ ನಡುವೆ ರೈತರು ಮೇವನ್ನು ಹೊಂದಿಸುವಲ್ಲಿ ಹೈರಾಣಾಗಿದ್ದಾರೆ. ಕೆಲವರು ಬೇರೆ ಕಡೆಗೆ ತೆರಳಿ ಅಲ್ಲಿ ದುಬಾರಿ ಬೆಲೆಗಾದರೂ ಮೇವನ್ನು ಖರೀದಿಸುತ್ತಿದ್ದಾರೆ. ಇದು ಬಡ ರೈತರಿಗೆ ಕಷ್ಟ ಎಂಬಾಂತಾಗಿದೆ. ಅವರು ವಿಧಿಯಿಲ್ಲದೇ ತಮ್ಮ ಜಾನುವಾರುಗಳನ್ನು ಸಮೀಪದ ಬೆಟ್ಟಗುಡ್ಡಗಳಿಗೆ ಮೇಯಿಸಲು ಕರೆದೊಯ್ಯುತ್ತಿದ್ದಾರೆ. ಅಲ್ಲಿ ಮೇವು ಸಿಕ್ಕಿದರೆ ಜಾನುವಾರುಗಳ ಅದೃಷ್ಟ ಎಂಬಂತಾಗಿದೆ. ಇಷ್ಟಾದರೂ ಸಹ ಜಿಲ್ಲೆಯಲ್ಲಿ ಗೋಶಾಲೆಗಳನ್ನು ತೆರೆಯುವ ಕೆಲಸವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿದ್ದು ಕಾಣುತ್ತಿಲ್ಲ. ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವ ಕೆಲಸವೂ ನಡೆಯುತ್ತಿದೆ. ಮುಂದೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂಬುದು ಡಿಸಿ ಆಶ್ವಾಸನೆ.
ಪರಿಹಾರ ಕೇಳ್ಬೇಡಿ...
- ಜಿಲ್ಲೆಯಾದ್ಯಂತ ಮೇವಿನ ತೀವ್ರ ಬರ ಇದ್ದರೂ ಗಮನ ಹರಿಸಿಲ್ಲ
- ಕೃಷಿ, ಪಶು ಸಂಗೋಪನಾ, ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ
- ಪ್ರಕಾಶ ಎಸ್. ಶೇಟ್
ಧಾರವಾಡ ಜಿಲ್ಲೆಯಲ್ಲಿ ಬಿಸಿಲಿಗೆ ಕೆರೆ ಕಟ್ಟೆಗಳು ಒಣಗಿವೆ. ಕುಡಿಯಲು ನೀರು ಸಿಗುತ್ತಿಲ್ಲ, ತಿನ್ನಲು ಮೇವಿಲ್ಲದೆ ಮೂಕ ಪ್ರಾಣಿಗಳ ವೇದನೆ ಹೇಳತೀರದು. ಹೊಲದ ಬದು, ಬೆಟ್ಟಗುಡ್ಡಗಳಲ್ಲಿ ಹಸಿರಿನ ಗರಿಕೆಯೂ ಚಿಗುರದ ಪರಿಣಾಮ ಮೇಯಲು ಹೋದ ಪ್ರಾಣಿಗಳಿಗೆ ಆಹಾರವಿಲ್ಲ. ಕುಂದಗೋಳ, ನವಲಗುಂದ, ಹುಬ್ಬಳ್ಳಿ ಗ್ರಾಮೀಣ ಭಾಗ, ಅಣ್ಣಿಗೇರಿಯಲ್ಲಿ ತೀವ್ರ ಸಮಸ್ಯೆ ಎದುರಾಗಿದೆ. ಮೇವಿನ ಬೆಳೆ ಕಡಿಮೆಯಾಗಿದ್ದರಿಂದ ಬೆಲೆ ಏರಿದೆ. 1500-2000ಕ್ಕೆ ಸಿಗುತ್ತಿದ್ದ ಪ್ರತಿ ಟ್ರ್ಯಾಕ್ಟರ್ ಬಿಳಿಜೋಳದ ಮೇವಿಗೆ ಈಗ 7ರಿಂದ 8 ಸಾವಿರ. ಹೆಚ್ಚಿನ ಬೆಲೆ ತೆರುವುದು ಅನಿವಾರ್ಯವಾಗಿದೆ. ಕೆಲವು ಬಾರಿ ಹಣ ಕೊಟ್ಟರೂ ಮೇವು ಸಿಗದ ಸ್ಥಿತಿ. ಕಳೆದ ವರ್ಷವೂ ಜಿಲ್ಲೆಯಲ್ಲಿ ಮೇವಿನ ಕೊರತೆ ಎದುರಾಗಿತ್ತು. ಆಗ ಜಿಲ್ಲಾಡಳಿತ ಕುಂದಗೋಳ, ಯರಗುಪ್ಪಿ ಸೇರಿ ಐದಾರು ಕಡೆ ಮೇವು ಬ್ಯಾಂಕ್ ತೆರೆದಿತ್ತು. ಈ ಬಾರಿ ಮೇವು ಬ್ಯಾಂಕ್ ಆರಂಭಿಸಿಲ್ಲ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲ ತಿಳಿಸಿದ್ದು, ಅಗತ್ಯ ಪರಿಶೀಲಿಸಿ ಮೇವು ಬ್ಯಾಂಕ್ ತೆರೆಯಲಾಗುವುದು ಎಂದಿದ್ದಾರೆ.
ಸಮಸ್ಯೆ ಇದೆ, ಕ್ರಮವಿಲ್ಲ
- ಬರ ಘೋಷಣೆಯಾದಾಗ ಹೊರ ಜಿಲ್ಲೆಗೆ ಸಾಗಾಟ ನಿಷೇಧ
-ಈ ಬಾರಿ ಮಾತ್ರ ಆಗದ ಅಂಥ ಪ್ರಯತ್ನ
-ಸೋಮರಡ್ಡಿ ಅಳವಂಡಿ
ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ತಾಲೂಕಿನ ನೀರಾವರಿ ಭಾಗ ಹೊರತುಪಡಿಸಿ, ಉಳಿದವನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದರೂ ಜಿಲ್ಲಾಡಳಿತದ ತಯಾರಿ ಮಾತ್ರ ಸೊನ್ನೆ! ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದೆ. ಜಿಲ್ಲಾಡಳಿತ ಮಾತ್ರ ಅಂತಹ ಸಮಸ್ಯೆ ಇಲ್ಲ ಎನ್ನುತ್ತಿದೆ. ಮೇವಿನ ಕೊರತೆ ಆಗಬಹುದು ಎಂದು ಈಗ ಮೇವಿನ ಬೀಜ ವಿತರಣೆ ಮಾಡುತ್ತಿದೆ. ಮೂರು ವರ್ಷಗಳಿಂದ ಸತತವಾಗಿ ಬರ ಎದುರಿಸುತ್ತಿರುವ ಜಿಲ್ಲೆಯಲ್ಲಿ ಕಳೆದ ವರ್ಷವಷ್ಟೇ ಅಲ್ಪಸ್ವಲ್ಪ ಮಳೆಯಾಗಿದೆ. ತೆರೆದಿದ್ದ ಗೋಶಾಲೆಯನ್ನು ಕಳೆದ ಮಳೆಗಾಲದಲ್ಲಿ ಮುಚ್ಚಲಾಯಿತು. ಆದರೆ, ಈ ಸಲ ಆಗಲೇ ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿದ್ದರೂ ಗೋಶಾಲೆ ತೆರೆಯುವ ಅಥವಾ ಮೇವು ಸಂಗ್ರಹ ಮಾಡಿಟ್ಟುಕೊಳ್ಳುವ ಯಾವುದೇ ತಯಾರಿ ನಡೆದಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ ಕಟಾವು ಮಾಡುವ ಸಮಯವಿದು. ಜಿಲ್ಲಾಡಳಿತ ಕೊಂಚ ಗಮನ ಹರಿಸಿದರೂ ವರ್ಷಪೂರ್ತಿ ಆಗುವಷ್ಟು ಮೇವು ಸಂಗ್ರಹಿಸಬಹುದು. ಹಾಗಾಗದೇ ಮೇವು ನೆರೆಯ ರಾಜ್ಯ ಮತ್ತು ಜಿಲ್ಲೆಗಳಿಗೆ ರವಾನೆಯಾಗುತ್ತಿದೆ. ನಿತ್ಯವೂ ನೂರಾರು ಗಾಡಿ ಸಾಗಾಟವಾಗುತ್ತಿದೆ.
ಅಗ್ಗದ ದರಕ್ಕೆ ಜಾನುವಾರು ಮಾರಾಟ
- ಮೇವಿನ ಕೊರತೆ ಹಿನ್ನೆಲೆಯಲ್ಲಿ ಇನ್ನೂ ವಿಶೇಷ ಯೋಜನೆ ಜಾರಿಯಾಗಿಲ್ಲ
- ಮೇಲ್ನೋಟಕ್ಕೆ ಜಿಲ್ಲೆಯಲ್ಲಿ ಕೊರತೆ ಇಲ್ಲ ಎನ್ನುತ್ತಿದ್ದರೂ, ವಾಸ್ತವ ಬೇರೆ ಇದೆ
- ಶಿವಕುಮಾರ ಕುಷ್ಟಗಿ
ಗದಗ ಜಿಲ್ಲೆಯಲ್ಲಿ ಮೇವಿನ ತತ್ವಾರ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದರ ಬಿಸಿ. ಹೆಚ್ಚಿನ ಬೆಲೆ ತೆತ್ತು ಖರೀದಿಸಿದ ಜಾನುವಾರುಗಳ ಮಾರಾಟ. ಇದು ಸದ್ಯದ ಇಲ್ಲಿಯ ಚಿತ್ರಣ. ಕಳೆದ ಹಿಂಗಾರು ಹಂಗಾಮಿನಲ್ಲಿ ಅಲ್ಪ ಮಳೆಯಾಗಿದ್ದರಿಂದ ಜಿಲ್ಲೆಯ ಐದು ತಾಲೂಕುಗಳ 19,410 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿತ್ತು. ಜಿಲ್ಲೆಯ ದೊಡ್ಡ ರೈತರಿಗೆ ಉತ್ತಮ ಮೇವು ಲಭ್ಯವಾಗಿತ್ತು. ಆದರೆ ಸಣ್ಣ, ಮಧ್ಯಮ ರೈತರಿಗೆ ತೊಂದರೆಯಾಗಿದೆ. 5 ತಾಲೂಕುಗಳ ವ್ಯಾಪ್ತಿಯಲ್ಲಿ 3.58 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ. ಅದರಲ್ಲಿ ಲಕ್ಷಕ್ಕೂ ಅಧಿಕ ಎತ್ತುಗಳಿವೆ. ಪಶುಸಂಗೋಪನಾ ಇಲಾಖೆಯ ಮಾಹಿತಿ ಪ್ರಕಾರ ಇನ್ನು 3 ತಿಂಗಳಿಗಾಗುವಷ್ಟು ಮೇವು ಇದೆ. ಇಲಾಖೆ ದೊಡ್ಡ ರೈತರನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ ಎಂಬುದು ಕೆಲವರ ಅಸಮಾಧಾನ. ಗದಗ ನಗರದ ಕಳಸಾಪುರ ರಸ್ತೆಯಲ್ಲಿ ಜೈನ ಸಂಸ್ಥೆ ಸಹಯೋಗದಲ್ಲಿ ಪ್ರತಿ ವರ್ಷ ಗೋಶಾಲೆ ನಡೆಸಲಾಗುತ್ತಿದೆ. ಇದುವರೆಗೂ ಮೇವಿನ ಕೊರತೆ ಇಲ್ಲದ್ದರಿಂದ ಇನ್ನೂ ಪ್ರಾರಂಭಿಸಿಲ್ಲ. ಕಪ್ಪತ್ತಗುಡ್ಡದ ಮಧ್ಯ ಭಾಗದಲ್ಲಿರುವ ನಂದಿವೇರಿ ಮಠದಲ್ಲಿ ಹಾಗೂ ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ಮಠದ ಶ್ರೀಗಳು ತಮ್ಮ ಮಠದಲ್ಲಿ ಉಚಿತ ಗೋಶಾಲೆಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಕೆಲ ಜಾನುವಾರುಗಳು ಆಶ್ರಯ ಪಡೆದಿವೆ.
ಕಸಾಯಿಖಾನೆಯತ್ತ ಜಾನುವಾರುಗಳು!
- ಈಗ 14 ಹೋಬಳಿಗಳಲ್ಲಿ ಸಾಧಾರಣ ಮಳೆ
- ಉಳಿದ 22 ಹೋಬಳಿಗಳಲ್ಲಿ ಮಳೆಯಾಗಿಲ್ಲ
- ಮಳೆಯಾದ ಕಡೆ ಹಸಿರು ಮೇವಿಗೆ ಬೀಜ ವಿತರಣೆ
- ಮಳೆ ಪರಿಸ್ಥಿತಿ ನೋಡಿ ಗೋಶಾಲೆಗೆ ಜಿಲ್ಲಾಡಳಿತ ನಿರ್ಧಾರ
- ದಯಾಶಂಕರ ಮೈಲಿ
ಹಾಸನ ಜಿಲ್ಲೆಯಾದ್ಯಂತ ಕಳೆದ ಬಾರಿ ಮುಂಗಾರು ನಿರೀಕ್ಷೆಯ ಕೃಪೆ ತೋರಿಲ್ಲ. ಹೀಗಾಗಿ ಕೆರೆ, ಕಟ್ಟೆಗಳು ಭರ್ತಿಯಾಗಲಿಲ್ಲ. ಬೆಳೆಯೂ ಸರಿಯಾಗಿಲ್ಲ. ಇದರ ಎಫೆಕ್ಟ್ ಈ ಬೇಸಿಗೆಯಲ್ಲಿ ಆಗಿದೆ. ಕುಡಿಯುವ ನೀರಿನ ಜೊತೆ ಜಾನುವಾರುಗಳಿಗೆ ಈಗ ಮೇವಿನ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಬೇರೆ ಜಿಲ್ಲೆಗಳಿಗೆ ಬತ್ತದ ಒಣ ಹುಲ್ಲು ಸೇರಿ ಜಾನುವಾರುಗಳಿಗೆ ಸಂಬಂಧಿಸಿದ ಎಲ್ಲ ಪ್ರಕಾರದ ಮೇವುಗಳನ್ನು ಹೊರ ರಾಜ್ಯಗಳಿಗೆ ಸಾಗಾಣಿಕೆ ಮಾಡುವುದನ್ನು ನಿಷೇಧಿಸಿದ್ದಾರೆ. ಅರಸೀಕೆರೆ ತಾಲೂಕಿನ ಬಾಣಾವರ, ಜಾವಗಲ್ ಹೋಬಳಿಗಳು, ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಮತ್ತು ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗೋಶಾಲೆಗಳನ್ನು ತೆರೆದು ಅಲ್ಲಿ ದನಕರುಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಚಿಂತನೆ ನಡೆಸಿದೆ. ಅಗತ್ಯ ಮೇವು ಸಿಗದ ಕಡೆ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಲಾಗುತ್ತಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡರೂ ನಿಂತಿಲ್ಲ. ಆದರೆ ಇದು ಪರಿಹಾರವಲ್ಲ. ಮೇವು ಒದಗಿಸುವ ನಿಟ್ಟಿನಲ್ಲೂ ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಮೇವು ಸಿಗದಿದ್ದರಿಂದ ಹಾಲು ಉತ್ಪಾದನೆ ಕುಸಿದಿದೆ.
ಇನ್ನು ಎರಡೂವರೆ ತಿಂಗಳು ನೋ ಪ್ರಾಬ್ಲಂ
- ಒಂದು ವೇಳೆ ತೀರಾ ಅನಿವಾರ್ಯವಾದಲ್ಲಿ ಏಳು ಕಡೆ ಗೋಶಾಲೆ ತೆರೆಯಬೇಕು
- ಮೈಸೂರು ತಾಲೂಕಲ್ಲಿ 2, ನಂಜನಗೂಡು - 3, ಕೆ.ಆರ್. ನಗರ ಹಾಗೂ ಟಿ.ನರಸೀಪುರ ತಾಲೂಕಿನಲ್ಲಿ ತಲಾ ಒಂದು ಗೋಶಾಲೆ ತೆರೆಯಲು ಉದ್ದೇಶಿಸಲಾಗಿದೆ
- ಅಂಶಿ ಪ್ರಸನ್ನಕುಮಾರ್
ಬಿರುಬಿಸಿಲು, ಕೈಕೊಟ್ಟಿರುವ ಮಳೆ, ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೆ ತೊಂದರೆಯಾಗಿದ್ದರೂ ಸಹ ಮೈಸೂರು ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಕೊರತೆ ಕಂಡುಬಂದಿಲ್ಲ. ಇನ್ನೂ ಎರಡೂವರೆ ತಿಂಗಳಿಗಾಗುವಷ್ಟು ಮೇವಿನ ಸಂಗ್ರಹ ಇದೆ. ಜಿಲ್ಲೆಯಲ್ಲಿ 5.60 ಲಕ್ಷ ಜಾನುವಾರುಗಳಿವೆ. ಇವುಗಳಿಗೆ ಪ್ರತಿನಿತ್ಯ 2,800 ಟನ್ ಮೇವು ಬೇಕು ಎನ್ನುತ್ತಾರೆ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ದೇವದಾಸ್. ಕಳೆದೆರಡು ವರ್ಷ ಸಕಾಲದಲ್ಲಿ ಮಳೆಯಾಗದ್ದರಿಂದ ಮೇವಿನ ಕೊರತೆ ತೀವ್ರವಾಗಿತ್ತು. ಕೆಲವು ಕಡೆ ಗೋಶಾಲೆಗಳನ್ನು ಆರಂಭಿಸಲಾಗಿತ್ತು. ಆದರೆ ಈ ವರ್ಷ ಈವರೆಗೆ ಅಂತಹ ಸ್ಥಿತಿ ಎಲ್ಲಿಯೂ ಕಂಡು ಬಂದಿಲ್ಲ. ಒಂದು ವೇಳೆ ಮಳೆ ಕೈಕೊಟ್ಟರೆ ಇರಲಿ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಸೂಚನೆ ಮೇರೆಗೆ ಪಶುಸಂಗೋಪನಾ ಇಲಾಖೆಯು ಸಂಭಾವ್ಯ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಅದರ ಪ್ರಕಾರ ಮೈಸೂರು, ನಂಜನಗೂಡು, ಕೆ.ಆರ್. ನಗರ ಹಾಗೂ ಟಿ.ನರಸೀಪುರ ತಾಲೂಕುಗಳಲ್ಲಿ ತಲಾ 2000 ಮೇವಿನ ಕಿರು ಕಿಟ್ ವಿತರಿಸಬೇಕು. ಇದಕ್ಕೆ 23.60 ಲಕ್ಷ ವೆಚ್ಚವಾಗುತ್ತದೆ. ಈ ಮೇವು ಬೆಳೆಸಿದಲ್ಲಿ ಜಾನುವಾರುಗಳಿಗೆ ಅನುಕೂಲವಾಗುತ್ತದೆ.
ಹಸಿರು ಆಹಾರ ಇಲ್ಲವೇ ಇಲ್ಲ
- ರೈತರಿಗೆ ಮೇವಿನ ಬೀಜದ ಪ್ಯಾಕೆಟ್ ವಿತರಣೆಗೆ ನಿರ್ಧಾರ
- ವಾರದಲ್ಲಿ ಮೇವಿನ ಬೀಜ ವಿತರಿಸಲು ಕ್ರಮ, ಸದ್ಯಕ್ಕೆ ಗೋಶಾಲೆ ತೆರೆದಿಲ್ಲ
- ರುದ್ರಪ್ಪ ಆಸಂಗಿ
ಬಿಜಾಪುರ ಜಿಲ್ಲೆಯಲ್ಲಿ ಮೊದಲೇ ಕುಡಿಯಲು ನೀರಿಲ್ಲ. ಈಗ ಜಾನುವಾರುಗಳ ಮೇವಿಗೂ ತತ್ವಾರ. ಜಾನುವಾರುಗಳಿಗೆ ಕಣಿಕೆ, ಹೊಟ್ಟು, ಹಸಿರು ಮೇವಿಗಾಗಿ ಈಗಲೇ ಅನ್ವೇಷಣೆ ಶುರುವಾಗಿದೆ. ತೀವ್ರ ಮೇವಿನ ಕೊರತೆ ಉಂಟಾದರೆ ಜಾನುವಾರುಗಳ ಗತಿ ಏನು ಎಂಬುದು ರೈತರ ಚಿಂತೆ. ಆದರೆ ಜಿಲ್ಲಾಡಳಿತದಿಂದ ಮಾತ್ರ ಯಾವುದೇ ಸಮಸ್ಯೆ ಇಲ್ಲ. ಸಕಾಲಕ್ಕೆ ಮಳೆಯಾದರೆ ಮೇವಿಗಿಲ್ಲ ಸಮಸ್ಯೆ. ಬಿಸಿಲಿನ ತಾಪ ಹೆಚ್ಚುತ್ತಿದೆ. ಹಳ್ಳ, ಕೊಳ್ಳ, ತೆರೆದ ಬಾವಿ, ಕೊಳವೆಬಾವಿ ಬತ್ತಿದ್ದು, ಹನಿ ನೀರಿಗಾಗಿ ಜನ ಪರಿತಪಿಸಬೇಕಾಗಿದೆ. ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿಳಿಜೋಳದ ಉತ್ತಮ ಫಸಲು ಬಂದಿತ್ತು. ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿಯೇ ಅಕಾಲಿಕ ಮಳೆಯಾಗಿದ್ದಕ್ಕೆ ಬಿಳಿಜೋಳ ಕಣಿಕೆ ಒದ್ದೆಯಾಗಿ ಕಪ್ಪಿಟ್ಟಿದೆ. ಇದನ್ನು ದನಕರುಗಳು ತಿನ್ನುತ್ತಿಲ್ಲ.
ಇಲ್ಲಿ ಇದ್ದರೂ ಇಲ್ಲದಂತೆ!
- ಜಿಲ್ಲೆಯಲ್ಲಿ 4 ಲಕ್ಷ ಜಾನುವಾರುಗಳಿವೆ: ಡಾ. ನಾರಾಯಣರಾವ್
- ಹೆಚ್ಚಿನ ಪ್ರಮಾಣದಲ್ಲಿ ಮೇವು ಸಂಗ್ರಹ ಇದೆ: ಅಧಿಕಾರಿಗಳು
- ಮಂಜುನಾಥ ಸ್ವಾಮಿ
ಯಾದಗಿರಿ ಜಿಲ್ಲೆಯಲ್ಲಿ ಮಳೆಯಿಲ್ಲದೆ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಹ ಪರಸ್ಥಿತಿ ಎದುರಾಗಿದೆ. ದಿನದಿಂದ ದಿನಕ್ಕೆ ಮೇವೂ ಸಿಗದಾಗಿದೆ. ಜಿಲ್ಲೆಯಲ್ಲಿ 4 ಲಕ್ಷ ಜಾನುವಾರುಗಳಿವೆ. ಅವುಗಳಿಗೆ ತಿಂಗಳಿಗೆ ಸುಮಾರು 1 ಲಕ್ಷ ಟನ್ ಮೇವು ಬೇಕು. ಈಗ ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಟನ್ಗಳಷ್ಟು ಹೆಚ್ಚುವರಿ ಸಂಗ್ರಹವಿದೆ. ಇದನ್ನು ಇನ್ನೂ 140-150 ದಿನ ಬಳಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಶಹಾಪುರ ತಾಲೂಕಿನ ಜನರು ಈ ಬಾರಿ ಜೋಳದ ಬದಲು ಹತ್ತಿ ಹೆಚ್ಚು ಬೆಳೆದು ಮೇವಿಗಾಗಿ ಬೇರೆ ತಾಲೂಕನ್ನು ಅವಲಂಬಿಸಿದ್ದಾರೆ. ಹೀಗಾಗಿ ಒಂದು ಟ್ರ್ಯಾಕ್ಟರ್ ಮೇವಿಗೆ 5ರಿಂದ 6 ಸಾವಿರ ಹಣ ನೀಡಿ ಖರೀದಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಕೊರತೆ ಇಲ್ಲ ಎಂಬ ಮಾತಿಗೆ ಬದ್ಧರಾಗಿದ್ದಾರೆ. ಆದರೆ ಮೇವನ್ನು ನೆರೆ ರಾಜ್ಯಕ್ಕೆ ಸಾಗಿಸಲಾಗುತ್ತಿದೆ ಎಂಬ ಆರೋಪ ಇದೆ.
ರೈತರಿಂದಲೇ ದಾಸ್ತಾನು,ಕಷ್ಟ
- ಇನ್ನೂ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ
-ರೈತರ ಸಮಸ್ಯೆ ವಿಚಾರಿಸುವ ಗೋಜಿಗೆ ಹೋಗಿಲ್ಲ
-ನಾರಾಯಣ ಹೆಗಡೆ
ಗುಲ್ಬರ್ಗದಲ್ಲಿ ಮೇವಿನ ಸಮಸ್ಯೆ ತೀವ್ರವಾಗಿದೆ. ಆದರೆ 16 ವಾರಗಳಿಗೆ ಆಗವಷ್ಟು ಮೇವು ದಾಸ್ತಾನು ಇದೆ ಎಂಬುದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ. ವಾಸ್ತವದಲ್ಲಿ ರೈತರೇ ತಮಗಾದಷ್ಟು ಮಟ್ಟಿಗೆ ದಾಸ್ತಾನು ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 6.50 ಲಕ್ಷ ಜಾನುವಾರುಗಳಿವೆ. 4 ತಾಲೂಕುಗಳಾದ ಸೇಡಂ, ಗುಲ್ಬರ್ಗ, ಜೇವರ್ಗಿ, ಆಳಂದವನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ನೀರಾವರಿ ಪ್ರದೇಶಗಳ ರೈತರಿಗೆ ಮೇವು ಬೆಳೆಯಲು ಬೀಜಗಳನ್ನು ವಿತರಣೆ ಮಾಡಲಾಗಿದೆ. ಆದರೆ ಹಲವೆಡೆ ಮೇವಿನ ಸಮಸ್ಯೆ ಇದೆ. ಆದರೆ ಗೋಶಾಲೆಗಳನ್ನು ಮಾತ್ರ ತೆರೆಯಲಾಗಿಲ್ಲ. ಮೇವು ಬ್ಯಾಂಕ್ಗಳನ್ನೂ ಆರಂಭಿಸಿಲ್ಲ. ಸಂಗ್ರಹವನ್ನು ಮಾಡುವ ನಿಟ್ಟಿನಲ್ಲೂ ಚಿಂತನೆ ನಡೆಸಿರುವ ಬಗ್ಗೆ ಮಾಹಿತಿ ದೊರಕಿಲ್ಲ. ಆದರೆ ಹೋಬಳಿಗೆ ಒಂದರಂತೆ ಮೇವು ಬ್ಯಾಂಕ್ ತೆರೆಯಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗ ಅಧಿಕಾರಿಗಳ ಲೆಕ್ಕಾಚಾರದಲ್ಲಿ ತೊಂದರೆ ಇಲ್ಲದಿದ್ದರೂ ಮುಂಗಾರು ಬರುವುದು ವಿಳಂಬವಾದರೆ ಮಾತ್ರ ಮೇವಿಗೆ ತೀವ್ರ ತರದ ಕಷ್ಟ ಎದುರಿಸಬೇಕಿದೆ.
ಅಕ್ರಮ ಸಾಗಾಟವಿದೆ!
- ಗದ್ದೆ, ಗುಡ್ಡ ಇರುವುದರಿಂದ ಮೇವಿನ ಕೊರತೆ ಕಾಣುತ್ತಿಲ್ಲ
- ಖಾಸಗಿ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ
-ಆತ್ಮಭೂಷಣ್
ದ.ಕ.ಜಿಲ್ಲೆಯಲ್ಲಿ ಮೇವಿನ ಬವಣೆ ಇಲ್ಲ. ಜಾನುವಾರು ವಲಸೆ ಪ್ರಮೇಯವೂ ಇಲ್ಲ. ಹೀಗಿದ್ದರೂ ಮುಂಜಾಗ್ರತೆಯಾಗಿ ಆಫ್ರಿಕನ್ ಜೋಳವನ್ನು ಪ್ರತಿ ತಾಲೂಕಿಗೆ 386 ಕಿಟ್ (ಒಂದು ಕಿಟ್ನಲ್ಲಿ 6 ಕಿಲೋ), ಯಶಸ್ವಿ ಜೋಳ 800 ಕಿಟ್, ಬಾಜ್ರಾ ಜೋಳ 1,100 ಕಿಟ್ ಸೇರಿ ಒಟ್ಟು 11 ಸಾವಿರ ಕಿಟ್ ಮೇವಿನ ಬೀಜವನ್ನು ಜಿಲ್ಲೆಗೆ ಪೂರೈಸಲಾಗುತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಗದ್ದೆ ಹಾಗೂ ಗುಡ್ಡಗಳು ಇರುವುದರಿಂದ ಜಾನುವಾರು ಮೇವಿಗೆ ತೊಡಕಾಗುವುದಿಲ್ಲ. ಮೇವಿನ ಬರ ಕಾರಣಕ್ಕೆ ಜಾನುವಾರು ವಲಸೆ ಇಲ್ಲ. ಹಾಗಾಗಿ ಸರ್ಕಾರದಿಂದ ಗೋಶಾಲೆ ತೆರೆಯುವ ಪ್ರಮೇಯ ಇಲ್ಲ. ಆದರೆ ಈಗಾಗಲೇ ಖಾಸಗಿ ಗೋಶಾಲೆಗಳು ಇವೆ. ಅಲ್ಲಿಗೆ ಅಕ್ರಮ ಜಾನುವಾರು ಸಾಗಾಟದಲ್ಲಿ ವಶಪಡಿಸಿದ ಜಾನುವಾರನ್ನು ತಂದು ಸಾಕುತ್ತಾರೆ. 'ಜಿಲ್ಲೆಯಲ್ಲಿ ಜಾನುವಾರು ಮೇವಿಗೆ ತೊಂದರೆ ಇಲ್ಲ. ಆದರೆ ಈಗಷ್ಟೇ ಕೆಲವು ಕಡೆ ನೀರಿನ ಕೊರತೆ ವರದಿಯಾಗಿದೆ. ಒಟ್ಟಾರೆ ಬರ ಪರಿಸ್ಥಿತಿ ನೀಗಿಸಲು ರು. 4 ಕೋಟಿ ಮೊತ್ತ ಜಿಲ್ಲಾಡಳಿತದಲ್ಲಿ ಇದೆ' ಎನ್ನುತ್ತಾರೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ.
ಗೋಮಾಳದ್ದೇ ಸಮಸ್ಯೆ
- ಜಿಲ್ಲೆಯಲ್ಲಿದೆ ಅಗತ್ಯ ಪ್ರಮಾಣದ ಮೇವು
-ಗೋಮಾಳಗಳ ಒತ್ತುವರಿಯೇ ಇಲ್ಲಿನ ಬಹುದೊಡ್ಡ ಸಮಸ್ಯೆ
-ಅನಿಲ್ ಎಚ್.ಟಿ.
ಕೊಡಗು ಜಿಲ್ಲೆಯಲ್ಲಿ ಮೇವಿಗೆ ಸದ್ಯಕ್ಕೆ ಸಮಸ್ಯೆಯಿಲ್ಲ. ಸಕಾಲಿಕ ಮಳೆಯಿಂದ ಮೇವಿನ ಸಂಗ್ರಹ ಸಮರ್ಪಕವಾಗಿದೆ. 2.40 ಲಕ್ಷ ಕೋಳಿ, 80 ಸಾವಿರ ಆಡು, ಮೇಕೆ, 1,03 ಲಕ್ಷದಷ್ಟು ಜಾನುವಾರುಗಳು ಮತ್ತು 18 ಸಾವಿರದಷ್ಟು ಹಂದಿ ಸಾಕಾಣೆ ಮಾಡಲಾಗುತ್ತಿದೆ. ಈ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವಿನ ದಾಸ್ತಾನು ಕೊಡಗು ಜಿಲ್ಲೆಯಲ್ಲಿದ್ದು, ಕೊಡಗಿನ ಪಶುಸಂಗೋಪನಾ ಇಲಾಖೆಗೆ ದಾಖಲೆಯಲ್ಲಿ 13 ಸಾವಿರ ಹೆಕ್ಟೇರ್ಗಳಷ್ಟು ಗೋಮಾಳವಿದ್ದರೂ, ಹಲವು ವರ್ಷಗಳಿಂದ ಈ ಭೂಮಿ ಒತ್ತುವರಿಯಾಗಿ ಈಗ ಕೇವಲ 200 ಎಕರೆಗಳಷ್ಟೇ ಭೂಮಿ ಇಲಾಖೆ ವಶದಲ್ಲಿದೆ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಅಯ್ಯಪ್ಪ ತಿಳಿಸಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 22, ವಿರಾಜಪೇಟೆ ತಾಲೂಕಿನಲ್ಲಿ 29 ಎಕರೆಗಳಷ್ಟು ಗೋಮಾಳ ಜಾಗ ಪಶುಸಂಗೋಪನಾ ಇಲಾಖೆ ವಶದಲ್ಲಿದೆ.
ಜಾನುವಾರು ತತ್ತರ
- ಕೃಷಿ ಇಲಾಖೆ ರೈತರಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ
- ತಮ್ಮ ಜಾನುವಾರುಗಳಿಗೆ ಮೇವು ಸಂಗ್ರಹಿಸಿಟ್ಟಿರುವ ರೈತರು
- ನಾರಾಯಣ ಹೆಗಡೆ
ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ ಹಾಹಾಕಾರ. ಜಾನುವಾರುಗಳಿಗೆ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ನದಿ, ಕೆರೆಗಳು ಒಣಗಿವೆ. ಹಸಿರು ಕಾಣದಾಗಿದೆ. ಇದು ಹೈನುಗಾರಿಕೆಗೆ ಹೊಡೆತ ಕೊಟ್ಟಿದೆ. ಮೇವಿಗಾಗಿ ಜಾನುವಾರುಗಳು ಅಲೆದಾಡಿದರೂ ಏನೂ ಸಿಗದಂತಾಗಿದೆ. ಜಿಲ್ಲೆಯ ಆರು ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ನೀರು, ಮೇವಿನ ಸಮಸ್ಯೆಗೆ ಸಾಕ್ಷಿಯಾಗಿದೆ. ಬರಗಾಲ ಹಾಗೂ ಮೇವಿನ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ 18 ವಾರಗಳಿಗೆ ಸಾಕಾಗುವಷ್ಟು (3 ಲಕ್ಷ ಮೆಟ್ರಿಕ್ ಟನ್) ಮೇವು ಸಂಗ್ರಹವಿದೆ. ಆದ್ದರಿಂದ ಮೇವಿನ ಕೊರತೆ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಇದುವರೆಗೆ ಜಿಲ್ಲಾಡಳಿತ ಹಾಗೂ ಪಶುಸಂಗೋಪನಾ ಇಲಾಖೆ ಗೋಶಾಲೆ ತೆರೆದಿಲ್ಲ. ಮೇವು ಬ್ಯಾಂಕ್ ಅನ್ನೂ ಆರಂಭಿಸಿಲ್ಲ. ಜಿಲ್ಲೆಯಲ್ಲಿ 3.86 ಲಕ್ಷ ಜಾನುವಾರಗಳಿದ್ದು, ಮಳೆಗಾಲ ಆರಂಭವಾಗುವವರೆಗೆ ಸಂಗ್ರಹವಿರುವ ಮೇವು ಸಾಕಾಕಬಹುದೇ ಎಂಬುದು ಪ್ರಶ್ನೆ.
ಮೇವಿಗೆ ಬರವಿಲ್ಲ
- ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸರ್ಕಾರದ ಗೋಶಾಲೆ ಇಲ್ಲ
- ಕೆಲವೆಡೆ ವರ್ಷದ ಹನ್ನೆರಡು ತಿಂಗಳು ಖಾಸಗಿ ಗೋಶಾಲೆ ಕಾರ್ಯನಿರ್ವಹಣೆ
- ಚಿಕ್ಕಪ್ಪನಹಳ್ಳಿ ಷಣ್ಮುಖ
ಮೂರು ನದಿಗಳು ಹರಿಯುವ ಮುಳುಗಡೆ ನಾಡು ಬಾಗಲಕೋಟೆ ಜಿಲ್ಲೆಯಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಜಾನುವಾರು ಮೇವಿಗೆ ಯಾವುದೇ ಬರ ಇಲ್ಲ. ಪಶು ಸಂಗೋಪನೆ ಇಲಾಖೆ ಪ್ರಕಾರ ಏಪ್ರಿಲ್ 24ರ ವರೆಗೆ ಜಿಲ್ಲೆಯಲ್ಲಿ 4.59 ಲಕ್ಷ ಮೆಟ್ರಿಕ್ ಟನ್ ಮೇವಿನ ದಾಸ್ತಾನು ಲಭ್ಯವಿದ್ದು, ಮುಂದಿನ 26 ವಾರ ಅಂದರೆ, ನಾಲ್ಕು ತಿಂಗಳವರೆಗೆ ಯಾವುದೇ ಸಮಸ್ಯೆ ಎದುರಾಗದು ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಹೇಳುತ್ತಾರೆ. ಆದರೆ, ಬಾದಾಮಿ ಮತ್ತು ಮುಧೋಳ ತಾಲೂಕಿನಲ್ಲಿ ತುಸು ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿವೆ. ಸಾವಿರಾರು ಎಕರೆಯಲ್ಲಿ ಬೆಳೆಯಲಾದ ಕಬ್ಬು ಕಟಾವಿಗೆ ಬರಲು ಸಾಕಷ್ಟು ಸಮಯವಿದೆ. ಹೀಗಾಗಿ ಕಬ್ಬಿನ ಹಸಿ ಮೇವು ಲಭ್ಯವಿದೆ. ಬೇರೆ ಜಿಲ್ಲೆಗಳಲ್ಲಿ ಇರುವಂತೆ ಬಾಗಲಕೋಟೆಯಲ್ಲಿ ಅಪಾರ ಜಾನುವಾರು ಸಂಪತ್ತು ಇಲ್ಲ. ಕುರಿ, ಮೇಕೆ ಜಾಸ್ತಿ. ಕಬ್ಬಿನ ಹಸಿ ಮೇವನ್ನು ಇವುಗಳಿಗೆ ಹಾಕಲಾಗುತ್ತದೆ. ರೈತರ ಬಳಿ ಶೇಂಗಾ, ಮೆಕ್ಕೇಜೋಳ, ಜೋಳದ ಮೇವು ಸಾಕಷ್ಟು ಪ್ರಮಾಣ ಸಂಗ್ರಹವಿದೆ. ಬಾಗಲಕೋಟೆ ತಾಲೂಕಿನಲ್ಲಿ 55566 ಮೆಟ್ರಿಕ್ ಟನ್, ಬಾದಾಮಿಯಲ್ಲಿ 85779 ಮೆಟ್ರಿಕ್ ಟನ್, ಬೀಳಗಿ - 45292 ಮೆಟ್ರಿಕ್ ಟನ್, ಹುನಗುಂದ-103754 ಮೆಟ್ರಿಕ್ ಟನ್ , ಜಮಖಂಡಿ-88684 ಮೆಟ್ರಿಕ್ ಟನ್, ಮುಧೋಳ-80150 ಮೆಟ್ರಿಕ್ ಟನ್ ಮೇವು ಇದೆ.
13 ಸಾವಿರ ಮಿನಿ ಕಿಟ್
- ಸದ್ಯಕ್ಕೆ ಮೇವಿಗೆ ಸಮಸ್ಯೆ ಇಲ್ಲ: ಡಿ.ಕೆ. ರವಿ, ಜಿಲ್ಲಾಧಿಕಾರಿ
- ಕೊರತೆ ಕಂಡಲ್ಲಿ ಜಿಲ್ಲಾಡಳಿತ ಸಿದ್ಧವಿದೆ, ಹಣಕ್ಕೂ ಸಮಸ್ಯೆ ಇಲ್ಲ
- ಪಾ.ಶ್ರೀ.ಅನಂತರಾಮ್
ರಾಜ್ಯ ಸರ್ಕಾರ ಕೋಲಾರ ಜಿಲ್ಲೆಯ 5 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಜನ ಮತ್ತು ಜಾನುವಾರುಗಳ ರಕ್ಷಣೆಗಾಗಿ ಕೆಲವು ಕಾರ್ಯಕ್ರಮ ರೂಪಿಸಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಮೇವಿನ ಕೊರತೆ ಕಾಣುತ್ತಿಲ್ಲ. ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಇನ್ನು ಹನ್ನೊಂದು ದಿನಗಳಿಗೆ ಬೇಕಾಗುವಷ್ಟು ಮೇವು ಸಂಗ್ರಹಣೆ ಮಾಡಿದೆ. ಖಾಸಗಿಯವರು ಸಹ ಹಸಿ ಜೋಳದ ಕಡ್ಡಿಯನ್ನು ಒಂದು ಕಟ್ಟಿಗೆ 10 ನಂತೆ ಮಾರಾಟ ಮಾಡುತ್ತಿದ್ದಾರೆ. ಮಳೆ ಅಭಾವದಿಂದ ಮೇವು ಸಮಸ್ಯೆ ಕಾಡಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತವು 13 ಸಾವಿರ ಮಿನಿ ಕಿಟ್ಗಳನ್ನು ವಿತರಿಸಿದ್ದು, ಈಗಾಗಲೇ ಶೇ. 80ರಷ್ಟು ಕಡೆ ಮೇವು ಬೆಳೆಯಲಾಗುತ್ತಿದೆ. ಮೇ ತಿಂಗಳಿಂದ ಆಗಸ್ಟ್ ವರೆಗೆ ಮೇವಿಗೆ ಕೊರತೆ ಉಂಟಾಗದಂತೆ ಎಚ್ಚರವಹಿಸಲಾಗಿದೆ. ಒಂದು ವೇಳೆ ಅಭಾವ ಉಂಟಾದಲ್ಲಿ ತುರ್ತು ಸಂದರ್ಭದಲ್ಲಿ ಮೇವು ಬ್ಯಾಂಕ್ಗಳ ಮೂಲಕ ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತದೆ. ಜಿಲ್ಲೆಯಲ್ಲಿ 2,43,050 ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಬೇಸಿಗೆ ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದಿದ್ದು ಸುಗ್ಗಿ ಮುಗಿದ ಬಳಿಕ ರಾಗಿ ತೆನೆಯನ್ನು ಒಣಗಿಸಿ ರೈತರು ಒಣ ಮೇವನ್ನು ಜಾನುವಾರುಗಳಿಗೆ ನೀಡುತ್ತಿದ್ದಾರೆ.
ಕೊರತೆ ಇಲ್ಲ; ಜಿಲ್ಲಾಡಳಿತ
- ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿಲ್ಲ: ಎನ್. ಜಯರಾಂ
- ಶ್ರೀಶೈಲ ಮಠದ
ಬೆಳಗಾವಿ ಜಿಲ್ಲೆಯಲ್ಲಿ ಬಿಸಿಲಿನ ಪ್ರತಾಪ ಇದ್ದರೂ ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ಕೊರತೆ ಉಂಟಾಗಿಲ್ಲ. ಬಿಸಿಲಿನ ತೀವ್ರತೆ ಹೆಚ್ಚಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆಯೂ ಏರುತ್ತಿದೆ. ಆದರೆ ಇಂಥ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ ಸುಮಾರು 250 ಕೋಟಿ ಮೌಲ್ಯದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ. ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದರೂ ತಮ್ಮ ಜಾನುವಾರುಗಳಿಗೆ ಅಗತ್ಯ ಮೇವು ಸಂಗ್ರಹಿಸುವ ಕಾರ್ಯವನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಕೂಡ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಂಡಿದೆ. ಇನ್ನು 15 ವಾರಕ್ಕಾಗುವಷ್ಟು ಮೇವಿದೆ ಎಂದು ಹೇಳಿದೆ. ಜೋಳದ ಕಣಿಕೆ ಒಂದು ಟ್ರ್ಯಾಕ್ಟರ್ಗೆ 5 ಸಾವಿರ ದರ ಇದೆ. ಅದರಂತೆ ಬತ್ತ, ಗೋವಿನಜೋಳದ ಕಣಕಿಯನ್ನು ರೈತರು ಖರೀದಿಸುವುದು ಸರ್ವೇ ಸಾಮಾನ್ಯ.
ಮುಂಜಾಗ್ರತೆ ತಂದ ನೆಮ್ಮದಿ
-ಬಹುತೇಕ ಎಲ್ಲ ಕೆರೆಗಳಲ್ಲಿ ಜಾನುವಾರುಗಳಿಗೆ ಸಾಲುವಷ್ಟು ನೀರಿದೆ.
-ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
-ಕೆ.ಎನ್. ರವಿ
ಮಂಡ್ಯ ಜಿಲ್ಲೆಯಲ್ಲಿ ಬಿಸಿಲಿದ್ದರೂ ಜಾನುವಾರುಗಳಿಗೆ ಮೇವಿನ ಅಭಾವವಿಲ್ಲ. ಕಳೆದ ವರ್ಷ ಸರಿಯಾಗಿ ಮಳೆಯಾಗದ್ದರಿಂದ ಇಡೀ ಜಿಲ್ಲೆಯನ್ನು ಬರ ಪೀಡಿತವೆಂದು ಸರ್ಕಾರ ಘೋಷಿಸಿತ್ತು. ಆದರೆ ಮೇವಿಗೆ ಸಾಕಾಗುವಷ್ಟು ಮಳೆಯಾಗಿದ್ದರಿಂದ ಬೇಡಿಕೆಯಷ್ಟು ರೈತರೇ ಬೆಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಶೇ. 48 ರಷ್ಟು ಭೂಪ್ರದೇಶ ನೀರಾವರಿಯಿಂದ ಕೂಡಿದೆ. ಇಳಿದ ಶೇ. 51ರಷ್ಟು ಪ್ರದೇಶ ಮಳೆಯಾಶ್ರಿತ. ನೀರಾವರಿ ಪ್ರದೇಶದಲ್ಲಿ ವರ್ಷವಿಡಿ ಹಸಿ ಮೇವನ್ನು ಬೆಳೆಯಲಾಗುತ್ತಿದೆ. ಕಳೆದ ವರ್ಷ ಬೆಳೆದ (ಒಣ) ಮೇವು ಸಂಗ್ರಹವಾಗಿದೆ. ಹೀಗಾಗಿ ಸಮಸ್ಯೆ ಇಲ್ಲ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಪ್ರತಾಪ್ಮೂರ್ತಿ ಹೇಳುತ್ತಾರೆ.
ಅಲ್ಲಲ್ಲಿ ಐತೆ ಸಮಸ್ಯೆ
- ಶಶಿಧರ ಮೇಟಿ
ಬಳ್ಳಾರಿ ಜಿಲ್ಲೆಯಲ್ಲಿ 2-3 ವರ್ಷಗಳಿಂದ ಬರ ಹೆಚ್ಚಾಗಿದ್ದಕ್ಕೆ ಮೇವಿನ ಸಮಸ್ಯೆ ಉಲ್ಬಣಿಸಿತ್ತು. ಆದರೆ, ಈ ವರ್ಷ ಸಮಸ್ಯೆ ಅಷ್ಟಾಗಿ ಇಲ್ಲ. ಆದರೂ ಗ್ರಾಮಾಂತರ ಮಟ್ಟದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿವೆ.
ಪಶು ಸಂಗೋಪನಾ ಇಲಾಖೆ ಮೂಲಕ ಜಿಲ್ಲೆಯಲ್ಲಿ ಎಷ್ಟು ಮೇವನ್ನು ಸಂಗ್ರಹಿಸಲಾಗಿದೆ. ಏ. 19ರಂದು ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 5,52,287 ಜಾನುವಾರಗಳಿದ್ದು, 7,61,783 ಟನ್ ಮೇವು ಲಭ್ಯವಿದೆ. ಸಂಗ್ರಹವಿರುವ ಮೇವು 39 ವಾರಕ್ಕೆ ಸಾಕು. ಕೆಲವು ತಾಲೂಕುಗಳು ಬರಪೀಡಿತವಾಗಿದ್ದರಿಂದ ನೀರು ಮತ್ತು ಮೇವಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತದ ಬಳಿ ರು. 2.91 ಕೋಟಿ ಅನುದಾನವಿದೆ. ಜಿಲ್ಲಾಡಳಿತವು ಪಶುಸಂಗೋಪನಾ ಇಲಾಖೆ ಮೂಲಕ ಮೇವು ಬೀಜ ವಿತರಿಸಲು ಸಿದ್ಧತೆ ನಡೆಸಿದೆ. ಅಗತ್ಯವಿರುವ ರೈತರಿಗೆ ಸಹಕಾರ ನೀಡಲು ಮುಂದಾಗಿದೆ.
ಬರಪೀಡಿತದಲ್ಲೂ ಬರವಿಲ್ಲ
-ತಾಲೂಕಿನ ಕೃಷಿ ಫಾರಂಗಳಲ್ಲಿ ಅಗತ್ಯ ಮೇವು ಬೆಳೆಯಲು ಸೂಚನೆ
- ಫಾರಂನ 10 ಎಕರೆ ಜಾಗದಲ್ಲಿ ಮೇವು ಬೆಳೆ
-ನಾಗರಾಜ ಬಡದಾಳ್
ದಾವಣಗೆರೆ ಜಿಲ್ಲೆಯಲ್ಲಿ ಬರಪೀಡಿತ ತಾಲೂಕುಗಳಾದ ಜಗಳೂರು, ಹರಪನಹಳ್ಳಿ ಹಾಗೂ ದಾವಣಗೆರೆ ತಾಲೂಕಿನ ಬಸುರಿನಲ್ಲಿ ಸದ್ಯಕ್ಕೆ ಮೇವಿಗೆ ಬರವಿಲ್ಲ. ಇನ್ನೂ 27 ವಾರಕ್ಕಾಗುವಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಜಿಲ್ಲೆಯಲ್ಲಿ 618724 ಜಾನುವಾರು ಇದ್ದು, 21655 ಮೆಟ್ರಿಕ್ ಟನ್ ಮೇವು ಪ್ರತಿ ವಾರಕ್ಕೆ ಬೇಕು. ಸದ್ಯಕ್ಕೆ 623293 ಮೆಟ್ರಿಕ್ ಟನ್ನಷ್ಟು ಮೇವು ಇದ್ದು, ಇನ್ನೂ 29 ವಾರಕ್ಕೆ ಸಾಕು. ಅಕಸ್ಮಾತ್ ಜಿಲ್ಲೆಯ ಯಾವುದೇ ಭಾಗದಲ್ಲಿ ಮೇವಿನ ಕೊರತೆಯಾದರೆ, ಮೇವು ಪೂರೈಸಲು, ಗೋ ಶಾಲೆಗಳನ್ನು ಸ್ಥಾಪಿಸಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ.
ಅಭಾವದ ಆತಂಕ
- ಅಭಾವವಾದರೆ 10 ಸಾವಿರ ಮೇವಿನ ಕಿಟ್ ವಿತರಣೆಗೆ ಯೋಜನೆ
- ಇದಕ್ಕಾಗಿ 30 ಲಕ್ಷ ನೀಡಲು ಸರ್ಕಾರಕ್ಕೆ ಕೋರಿಕೆ
- ಜಗನ್ನಾಥ ಆರ್. ದೇಸಾಯಿ
ರಾಯಚೂರು ಜಿಲ್ಲೆಯಲ್ಲಿ ಮೇವಿಗೆ ಎಲ್ಲಿಲ್ಲದ ಬೇಡಿಕೆ. ಜಿಲ್ಲಾಡಳಿತದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 6,24,503 ಜಾನುವಾರುಗಳಿವೆ. ಸದ್ಯ 5,42,575 ಟನ್ ಮೇವಿದೆ. ಈಚೆಗಷ್ಟೇ ಬತ್ತದ ಕಟಾವು ನಡೆದಿದೆ. ಮೇವು ಅಗತ್ಯ ಪ್ರಮಾಣದಲ್ಲಿದೆ. ಮುಂದಿನ 16 ವಾರಗಳವರೆಗೆ ಮೇವಿನ ಸಮಸ್ಯೆಯಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ತಿಳಿಸಿದ್ದಾರೆ. ಆದರೆ ವಾಸ್ತವಾಂಶ ವಿಭಿನ್ನ. ಮಳೆಯಾಧಾರಿತ ಪ್ರದೇಶದ ರೈತರು ವಾಣಿಜ್ಯ ಬೆಳೆ ಬೆಳೆಯುವುದರಿಂದ ಅಂಥಲ್ಲಿ ಮೇವಿನ ಕೊರತೆ ಅಪಾರ. ಈ ಪ್ರದೇಶದ ರೈತರು ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ ಲಭ್ಯವಿರುವ ಬತ್ತದ ಹುಲ್ಲು 7 ರಿಂದ 8 ಸಾವಿರವನ್ನು ಪ್ರತಿ ಟ್ರಾಕ್ಟರ್ ಲೋಡ್ಗೆ ಪಾವತಿಸಿ ಕೊಳ್ಳುತ್ತಿದ್ದಾರೆ.
ಕಾಫಿಯ ನಾಡಲ್ಲೂ ಬರ
- 1 ರಾಗಿಯ ಸಿವುಡಿಗೆ (ಕಂತೆ)ಗೆ 15, ದಿನಕ್ಕೆ 5-10 ಸಿವುಡು ಮೇವು ಬೇಕು,
- ದಿನಕ್ಕೆ 100ರಿಂದ 150 ಪ್ರತಿ ಹಸುವಿಗೆ ಖರ್ಚು
- ಆರ್. ತಾರಾನಾಥ್
ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಪ್ರದೇಶದಲ್ಲಿ ಜಾನುವಾರುಗಳು ಕುಡಿಯುವ ನೀರಿನ ಜತೆಗೆ ಮೇವಿನ ಕೊರತೆ ಎದುರಿಸುತ್ತಿವೆ. ಈ ವೇದನೆ ಸರ್ಕಾರಕ್ಕಾಗಲೀ, ಅಧಿಕಾರಿಗಳಿಗಾಗಲೀ ಅರ್ಥವಾಗುತ್ತಿಲ್ಲ. ಜಾನುವಾರುಗಳ ವಾರಸುದಾರರಿಗೆ ಮಾತ್ರ ಈ ಮೂಕ ರೋದನೆ ಕೇಳುತ್ತಿದೆ. ರಾಜ್ಯ ಸರ್ಕಾರ ಕಡೂರನ್ನು ಬರಪೀಡಿತ ತಾಲೂಕೆಂದು ಘೋಷಿಸಿದೆ. ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವೆಡೆ ಬರಪೀಡಿತವೆಂದು ಘೋಷಿಸುವಂತೆ ಜಿಲ್ಲಾ ಪಂಚಾಯ್ತಿ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು. ಆದರೆ, ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಈ ಮೂರು ತಾಲೂಕುಗಳ ಪೈಕಿ ಸದ್ಯ ಮೇವಿನ ಕೊರತೆ ಇರುವುದು ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯಲ್ಲಿ ಜಾನುವಾರುಗಳ ಮೇವಿನ ಕೊರತೆ ಇದ್ದು, ಮೇವು ಖರೀದಿಗೆ ಹಣ ನೀಡುವಂತೆ ಪಶು ಸಂಗೋಪನಾ ಇಲಾಖೆಯವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
2 ತಾಲೂಕುಗಳಲ್ಲಿ ಸಮಸ್ಯೆ
- ಚಳ್ಳಕೆರೆ ತಾಲೂಕಿನ ಹಿರೇಕೆರೆ ಕಾವಲ್ನಲ್ಲಿ ಗೋಶಾಲೆ ಆರಂಭಕ್ಕೆ ಬೇಡಿಕೆ
- ಬೇಡಿಕೆ ಆಧರಿಸಿ ಗೋಶಾಲೆ ಪ್ರಾರಂಭಕ್ಕೆ ಕ್ರಮ
- ಕ.ಮ. ರವಿಶಂಕರ
ಚಿತ್ರದುರ್ಗ ಜಿಲ್ಲೆಯಲ್ಲಿ 2 ತಾಲೂಕುಗಳನ್ನು ಹೊರತುಪಡಿಸಿದರೆ ಉಳಿದ ತಾಲೂಕುಗಳಲ್ಲಿ ಸಮಸ್ಯೆ ಕಂಡುಬಂದಿಲ್ಲ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಮೇವಿನ ಸಮಸ್ಯೆ ಇದೆ. ಜಿಲ್ಲೆಯಲ್ಲಿ ಒಟ್ಟು 4.26 ಲಕ್ಷ ಎಮ್ಮೆ, ಕರು, ದನ ಇತ್ಯಾದಿ ರಾಸುಗಳಿವೆ. ಮೊಳಕಾಲ್ಮೂರು ತಾಲೂಕಿನ ಮುತ್ತಿಗರಹಳ್ಳಿ ಮ್ಯಾಸರಹಟ್ಟಿ ಮತ್ತು ರಾಂಪುರ ಗ್ರಾಮಗಳಲ್ಲಿ ಮೇವಿನ ಸಮಸ್ಯೆ ಕಂಡುಬಂದಿದೆ. ಈ ಗ್ರಾಮಗಳಲ್ಲಿ ಈಗಾಗಲೇ ಗೋಶಾಲೆ ಪ್ರಾರಂಭ ಮಾಡಲಾಗಿದೆ. ಮ್ಯಾಸರಹಟ್ಟಿ ಗ್ರಾಮದ ಗೋಶಾಲೆಗೆ ಪ್ರತಿನಿತ್ಯ 1200ರಷ್ಟು ರಾಸುಗಳು ಪ್ರತಿನಿತ್ಯ ದಾಖಲಾಗುತ್ತಿವೆ. ರಾಂಪುರ ಗ್ರಾಮದ ಗೋಶಾಲೆಯಲ್ಲಿ ನಿತ್ಯ 800ರಷ್ಟು ಗೋವುಗಳು ದಾಖಲಾಗುತ್ತಿವೆ.
ಲೆಕ್ಕಾಚಾರವೇ ಸರಿ ಇಲ್ಲ
- ಔರಾದ್ನಲ್ಲಿ ಮೇವಿನ ಕೊರತೆ ಬಗ್ಗೆ ಇಲಾಖೆಯಿಂದ ಮಾಹಿತಿ ಇಲ್ಲ
- ಮಾಹಿತಿ ಬಂದರೆ ಕ್ರಮ ಕೈಗೊಳ್ಳುತ್ತೇವೆ: ತಹಸೀಲ್ದಾರ್ ವೆಂಕಣ್ಣ
- ಅಪ್ಪಾರಾವ್ ಸೌದಿ
ಬೀದರ್ ಜಿಲ್ಲೆಯಲ್ಲಿ ಅಧಿಕಾರಿಗಳ ಪ್ರಕಾರ ಇನ್ನು 50 ದಿನಕ್ಕಾಗುವಷ್ಟು ಮೇವು ದಾಸ್ತಾನು ಇದೆ. ಆದರೆ ರೈತರ ಪ್ರಕಾರ ಕೊರತೆ ಇದೆ. ಅಧಿಕಾರಿಗಳಲ್ಲಿ ಸಮನ್ವಯತೆಯ ಕೊರತೆಯೂ ಇಲ್ಲಿ ಕಾಡುತ್ತಿದೆ. ಔರಾದ್ ತಾಲೂಕಿನಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವು, ಪೌಷ್ಟಿಕಾಂಶಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕಾದ ತಾಲೂಕು ಆಡಳಿತಕ್ಕೆ ಪಶು ಸಂಗೋಪನಾ ಇಲಾಖೆ ಮಾಹಿತಿ ನೀಡಿಲ್ಲ ಎಂಬ ಆರೋಪ. ಇಂಥ ಸಮನ್ವಯತೆಯ ಕೊರತೆ ಬಸವಕಲ್ಯಾಣದಲ್ಲೂ ಇದೆ. ಜಿಲ್ಲೆಯಲ್ಲಿ 4,55,183 ಜಾನುವಾರುಗಳಿವೆ. 1,15,966 ಮೆಟ್ರಿಕ್ ಟನ್ ಮೇವು ಸಂಗ್ರಹವಿದೆ. ಹೀಗಾಗಿ ಅನುದಾನ ಬಂದಿಲ್ಲ ಎಂದು ಇಲಾಖೆಯ ಉಪನಿರ್ದೇಶಕ ಡಾ. ನರಸಪ್ಪ ತಿಳಿಸಿದ್ದಾರೆ.
ಗಂಭೀರವಾಗಿಲ್ಲ ಸಮಸ್ಯೆ
- ಸದ್ಯಕ್ಕೆ ಮೇವಿನ ಸಮಸ್ಯೆ ಇಲ್ಲ: ವಿಜಯ ಮಹಾಂತೇಶ, ಜಿಲ್ಲಾಧಿಕಾರಿ
- ಹೀಗಾಗಿ ಮೇವಿಗಾಗಿ ಪರ್ಯಾಯ ಕ್ರಮ ಕೈಗೊಂಡಿಲ್ಲ
- ವಸಂತಕುಮಾರ್ ಕತಗಾಲ
ಉತ್ತರ ಕನ್ನಡದಲ್ಲಿ ಮೇವಿನ ಸಮಸ್ಯೆ ಸದ್ಯಕ್ಕಂತೂ ಗಂಭೀರವಾಗಿಲ್ಲ. ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಗೋಶಾಲೆ ಸ್ಥಾಪಿಸಿರುವುದು ಸಮಸ್ಯೆ ಪರಿಹಾರಕ್ಕೆ ದೊಡ್ಡ ಕೊಡುಗೆಯಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಸಮಸ್ಯೆ ಅಷ್ಟಿಲ್ಲದಿದ್ದರೂ, ಕೆಲವೆಡೆ ಅಲ್ಪ ಸಮಸ್ಯೆ ಇದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಕುಮಟಾ ತಾಲೂಕಿನ ಹೊಸಾಡ ಎಂಬಲ್ಲಿ ಸ್ಥಾಪಿಸಿದ ಅಮೃತಧಾರಾ ಗೋಶಾಲೆ ದೊಡ್ಡ ಪ್ರಮಾಣದಲ್ಲಿ ದನಕರುಗಳಿಗೆ ಆಶ್ರಯ ಒದಗಿಸಿದೆ. ಮೇವಿಲ್ಲದೆ ತೊಂದರೆಗೊಳಗಾಗಿದ್ದಲ್ಲಿ ರೈತರ ದನಕರುಗಳನ್ನು ಗೋಶಾಲೆ ನೋಡಿಕೊಳ್ಳಲಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಸ್ಥಾಪಿಸಿರುವ ಗೋಶಾಲೆಯಿಂದ ಅದೆಷ್ಟೋ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಸಲಹಲಾಗದೇ ಕಸಾಯಿಖಾನೆಗೆ ಹೋಗುವ ಜಾನುವಾರು ಗೋಶಾಲೆಯತ್ತ ಮುಖ ಮಾಡುತ್ತಿವೆ.