ಸಚಿವ ಡಾ. ಮಹಾದೇವಪ್ಪ ಮನೆ ಈಗ ಜಗಮಗ!
ರಾಜ್ಯದ ರಸ್ತೆಗಳು ಗುಂಡಿಮಯ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಸಚಿವರು, ತಮ್ಮ ಮನೆಗೆ...
ಕ.ಪ್ರ.ವಾರ್ತೆ | ಬೆಂಗಳೂರು | ಏ. 29
ರಾಜ್ಯದ ರಸ್ತೆಗಳು ಗುಂಡಿಮಯ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಸಚಿವರು, ತಮ್ಮ ಮನೆಗೆ ಕೋಟ್ಯಂತರ ವೆಚ್ಚಮಾಡಿ ಐಷಾರಾಮಿ ಬಂಗಲೆಯಾಗಿಸಿದ್ದಾರೆ.
ರಾಜ್ಯದ ರಸ್ತೆಗಳನ್ನು ಗುಣಮಟ್ಟಕ್ಕೆ ತರುವ ಭರವಸೆಯನ್ನು 10 ತಿಂಗಳಿಂದ ನೀಡುತ್ತಿರುವ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ರಸ್ತೆ ಸರಿಪಡಿಸುವ ಸುದ್ದಿಗೇ ಹೋಗಿಲ್ಲ. ಆದರೆ, ನಗರದಲ್ಲಿರುವ ಸರ್ಕಾರಿ ಬಂಗಲೆಯನ್ನು ಮಾತ್ರ ರೆಸಾರ್ಟ್ ಆಗಿ ನವೀಕರಿಸಿದ್ದಾರೆ.
ಇದಕ್ಕಾಗಿ ಖರ್ಚು ಮಾಡಿರುವ ಹಣ ಬರೋಬ್ಬರಿ ರು. 2.5 ಕೋಟಿಗೂ ಹೆಚ್ಚು. ಈ ಹಣ ಅವರ ಸ್ವಂತ ಗಳಿಕೆಯದ್ದಲ್ಲ. ರಾಜ್ಯದ ನಾಗರಿಕರ ತೆರಿಗೆ ಹಣ. ಹೀಗಾಗಿ ಬೇಕಾಬಿಟ್ಟಿ ಬಿಲ್ ಬರೆದಿದ್ದಾರೆ. 'ಲೋಕೋಪಯೋಗ'ಕ್ಕೆ ಉಪಯೋಗವಾಗಬೇಕಾದ ಹಣ ಸಚಿವರ 'ಅನುಭೋಗ'ಕ್ಕೆ ಬಳಕೆಯಾಗಿದೆ.
ಸಚಿವರು ಮನೆ ದುರಸ್ತಿ ಮಾಡಿಕೊಂಡಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ ಸಚಿವ ಮಹಾದೇವಪ್ಪ ಮಾತ್ರ ತಮ್ಮ ಕ್ರಮ ಸಮರ್ಥಿಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಈ ಮನೆ ನವೀಕರಣವಾಗಿರಲಿಲ್ಲ. ಈಗ ಮಾಡಿದ್ದೇವೆ. ಅದರಲ್ಲಿ ತಪ್ಪೇನು? ಎಂಬರ್ಥದಲ್ಲಿ ಸುದ್ದಿಗಾರರಿಗೆ ಪ್ರತ್ರಿಕ್ರಿಯೆ ನೀಡಿದ್ದಾರೆ.
ಸರ್ಕಾರಿ ಬಂಗಲೆ ಹಾಗೂ ಕಚೇರಿಗಳನ್ನು ಬೃಹತ್ ಮಟ್ಟದಲ್ಲಿ ನವೀಕರಣ ಅಥವಾ ವಿರೋಪಗೊಳಿಸಬಾರದು ಎಂದು ಜೆಡಿಎಸ್ ಹಿರಿಯ ನಾಯಕ ಎಂ.ಸಿ. ನಾಣಯ್ಯ ವಿಧಾನಪರಿಷತ್ನಲ್ಲಿ ಖಾಸಗಿ ವಿಧೇಯಕ ಮಂಡಿಸಿದ್ದರು. ಈ ವೇಳೆ ಡಾ. ಮಹದೇವಪ್ಪ, ಸರ್ಕಾರವೇ ಇಂತಹ ವಿಧೇಯಕ ಮುಂದಿನ ಅಧಿವೇಶನದಲ್ಲಿ ಮಂಡಿಸಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಅವರೇ ಇದೀಗ ತಮ್ಮ ಬಂಗಲೆ ನವೀಕರಣಕ್ಕೆ ಸರ್ಕಾರದ ಖಜಾನೆಯಿಂದ ಭಾರೀ ಹಣ ವೆಚ್ಚ ಮಾಡಿದ್ದಾರೆ.
ಯಾವ ಮನೆ? : ಕುಮಾರಕೃಪಾ ಪಶ್ಚಿಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ವಾಸವಿದ್ದ ಬಂಗಲೆಯನ್ನು ಡಾ. ಮಹಾದೇವಪ್ಪ ಅವರಿಗೆ ನೀಡಲಾಗಿದೆ. ಸಿದ್ದರಾಮಯ್ಯನವರು ಹೆಚ್ಚು ಕಡಿಮೆ ಐದು ತಿಂಗಳು ಕಾಲ ಇಲ್ಲಿಯೇ ವಾಸವಿದ್ದರು. ಕಾವೇರಿಗೆ ಅವರು ಸ್ಥಳಾಂತರಗೊಂಡ ನಂತರ ಮಹಾದೇವಪ್ಪ ಇಲ್ಲಿಗೆ ಬಂದಿದ್ದಾರೆ.
ಲೋಕೋಪಯೋಗಿ ಸಚಿವರು ಇಲ್ಲಿಗೆ ಬರುತ್ತಿದ್ದಂತೆ ರಿಪೇರಿ ಕೆಲಸ ಆರಂಭಿಸಿದರು. ಮನೆಯೊಳಗೆ ಏನು ನಡೆಯುತ್ತಿದೆ ಎಂಬುದು ಕಾಣದಂತೆ ಎತ್ತರದ ಕಾಂಪೌಂಡ್ ಹಾಕಿಸಿದ್ದರು. ಒಳಗಡೆ ವಿಶಾಲವಾದ ಗಾರ್ಡನ್, ಅಲ್ಲಿ ಆರಾಮವಾಗಿ ಕುಳಿತು ತಂಪು 'ಪಾನೀಯ' ಸ್ವೀಕರಿಸುವುದಕ್ಕೆ ಯೋಗ್ಯ ಸ್ಥಳ, ಸುಸಜ್ಜಿತ ರಸ್ತೆ, ಅಷ್ಟೇ ಏಕೆ ಮನೆ ಗೋಡೆಗಳ ಮೇಲೆ ಮೊಮ್ಮಕ್ಕಳ ಮನರಂಜನೆಗಾಗಿ ಕಾರ್ಟೂನ್ಗಳು. ಹೀಗೆ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಏನೇನು ಬೇಕೋ ಎಲ್ಲವನ್ನೂ ಸೃಷ್ಟಿಸಿದ್ದಾರೆ. ಸಚಿವರ ಆಸಕ್ತಿ ಹಾಗೂ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಚಿಕ್ಕರಾಯಪ್ಪನವರೇ ಈ ನವೀಕರಣ ಕಾರ್ಯದ ಹೊಣೆ ಹೊತ್ತಿದ್ದರು ಎನ್ನಲಾಗಿದೆ.
ರಾಜೀನಾಮೆಗೆ ಆಗ್ರಹ: ಇಷ್ಟೊಂದು ವೆಚ್ಚದಲ್ಲಿ ಮನೆ ನವೀಕರಣ ಮಾಡಿಕೊಂಡಿರುವುದಕ್ಕೆ ಮಾಜಿ ಸಚಿವ, ಜೆಡಿಎಸ್ ಮುಖಂಡ ಎಂ.ಸಿ.ನಾಣಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಳ ಜೀವನವನ್ನು ಪ್ರತಿಪಾದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇಂಥ ದುಂದುವೆಚ್ಚ ಮಾಡಿರುವ ಲೋಕೋಪಯೋಗಿ ಸಚಿವರ ರಾಜಿನಾಮೆ ಪಡೆಯುವಂತೆ ಆಗ್ರಹಿಸಿದ್ದಾರೆ.
ವಿಧಾನಸೌಧ ಹಾಗೂ ಸರ್ಕಾರಿ ಕಟ್ಟಡಗಳನ್ನು ಇವರು ಮೋಜಿನ ತಾಣವಾಗಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಇವರೆಲ್ಲರೂ ಇಂಥದ್ದೇ ಮನೆಯಲ್ಲಿ ವಾಸವಿದ್ದರೆ? ಮನೆ ನವೀಕರಣದ ಹೆಸರಿನಲ್ಲಿ ಖರ್ಚಾಗುವ ಸರ್ಕಾರಿ ಹಣದಲ್ಲಿ ಅರ್ಧದಷ್ಟು ಇವರ ಜೇಬು ಸೇರುತ್ತದೆ ಎಂದು ನಾಣಯ್ಯ ಕಿಡಿಕಾರಿದ್ದಾರೆ.