ಅತ್ಯಾಚಾರಿಗೆ 17 ವರ್ಷ ಜೈಲು ಶಿಕ್ಷೆ
ಚಿತ್ರದುರ್ಗ: ಬಾಲಕಿಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ನಡೆಸಿದ ಆರೋಪ ಹೊತ್ತಿದ್ದ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಗೋಸಿಕೆರೆ ಗ್ರಾಮದ ಗೌಡಪ್ಪ (25) ಎಂಬಾತನಿಗೆ 17 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿಧಿಸಿದೆ.
ಅಪಹರಣಕ್ಕಾಗಿ ಏಳು ವರ್ಷ ಕಠಿಣ ಶಿಕ್ಷೆ, ಒಂದು ಸಾವಿರ ದಂಡ ಹಾಗೂ ಅತ್ಯಾಚಾರ ಎಸಗಿದ್ದಕ್ಕಾಗಿ 10 ವರ್ಷ ಕಠಿಣ ಶಿಕ್ಷೆ, ಎರಡು ಸಾವಿರ ದಂಡ, ದಂಡ ಕೊಡಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಹಂಚಾಟೆ ಸಂಜೀವ್‌ಕುಮಾರ್ ತೀರ್ಪು ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಗೋಸಿಕೆರೆ ಗ್ರಾಮದ ಬಾಲಕಿ ಟಿ.ಎನ್. ಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ಸೈಕಲ್ ಮೇಲೆ ಶಾಲೆಗೆ ಹೋಗುತ್ತಿದ್ದಳು. ಆಗ ಆಕೆಯನ್ನು ಬಿಂಬಾಲಿಸುತ್ತಿದ್ದ ಗೌಡಪ್ಪ, ಮದುವೆಯಾಗುವಂತೆ ಎಂದು ಪೀಡಿಸುತ್ತಿದ್ದ.
ಅಪಹರಿಸಿ ಅತ್ಯಾಚಾರ: 2010ರ ಡಿಸೆಂಬರ್ 10 ರ ಬೆಳಗ್ಗೆ 10.15 ಗಂಟೆ ಸುಮಾರಿಗೆ ಯುವತಿಯನ್ನು ಅಪಹರಿಸಿ ಹೇಮಾವತಿ ಹೆಂಜಾರಿ ಕೆರೆಯ ಏರಿ ಮೇಲೆ ಅತ್ಯಾಚಾರ ನಡೆಸಿದ್ದ. ಅಲ್ಲಿಂದ ಆಂಧ್ರಪ್ರದೇಶದ ರಾಮಯ್ಯನಹಟ್ಟಿಯ ಪರಿಚಯದವರ ಮನೆಯಲ್ಲಿ 11 ದಿನ ಕೂಡಿಟ್ಟಿದ್ದ.
ತನಿಖೆ ನಡೆಸಿದ ಚಳ್ಳಕೆರೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಡಿ. ನಾರಾಯಣ ವಾದ ಮಂಡಿಸಿದ್ದರು.