ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾರ್ಮಿಕ ಅನ್ನಿಸಿಕೊಂಡವನಿಗೆ ಇಲ್ಲಿ ಬದುಕಿಲ್ಲ...

ನನ್ ಕಥೆ ಯಾಕ್ ಕೇಳ್ತೀರಾ ಸರ್. ಹೇಳಿದ್ರೆ ನಿಮ್ ಕಣ್ಣಲ್ಲಿ ನೀರು ಬರ್ತದೆ. ಈಗ...

Mainashree
Updated On : 1 May 2014, 11:10 am

ಬೆಂಗಳೂರು: ನನ್ ಕಥೆ ಯಾಕ್ ಕೇಳ್ತೀರಾ ಸರ್. ಹೇಳಿದ್ರೆ ನಿಮ್ ಕಣ್ಣಲ್ಲಿ ನೀರು ಬರ್ತದೆ. ಈಗ ಮೂರು ಹೊತ್ತು ಊಟ ಸಿಗ್ತಿದೆ. ಆದ್ರೆ, ಒಂದು ಹೊತ್ತಿನ ಊಟಕ್ಕೂ ಪರದಾಡಿದ ದಿನಗಳನ್ನು ನೆನಪಿಸಿಕೊಂಡರೆ ಎದೆ ನಡುಗುತ್ತೆ. ಕಾರ್ಮಿಕನಿಗೆ ಇಲ್ಲಿ ನೆಮ್ಮದಿಯಾಗಿ ಬದುಕುವ ದಿನಗಳೇ ಬರಲ್ಲವೆನೋ...
ಬಿಡುವಿಲ್ಲದ ತಮ್ಮ ಸೆಟ್ ಕೆಲಸದ ನಡುವೆಯೂ ಹೀಗೆ ಬದುಕಿನ ವ್ಯಥೆ ತೆರೆದಿಡುವ ಪ್ರಯತ್ನ ಮಾಡಿದ್ದು ಕೃಷ್ಣಮೂರ್ತಿ ಅಲಿಯಾಸ್ ಗಾಡಿ ಕೃಷ್ಣ. ಫುಟ್ ಪಾತ್‌ನಲ್ಲಿ ಗಾಡಿ ಮೇಲೆ ಹಣ್ಣಿನ ವ್ಯಾಪಾರ ಮಾಡಿಕೊಂಡೇ ಚಿತ್ರರಂಗದಲ್ಲಿ ಸೆಟ್ ವಿನ್ಯಾಸದ ಕಾರ್ಮಿಕನಾಗಿ ದುಡಿದವರು ಕೃಷ್ಣ.
38 ವರ್ಷಗಳಿಂದ ಸೆಟ್ ಬಾಯ್, ಈಗ ಸೆಟ್ ಅಸೋಸಿಯೇಟ್ ಆಗಿ 250ಕ್ಕೂ ಹೆಚ್ಚು ಚಿತ್ರಗಳ ಸೆಟ್‌ಗಳಿಗೆ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪ್ರಕಾಶ್‌ನಗರದ ಪುಟ್ಟ ಮನೆಯಲ್ಲಿ ವಾಸವಿರುವ 60 ವರ್ಷದ ಗಾಡಿ ಕೃಷ್ಣ ಅವರಿಗೆ ಇಬ್ಬರು ಮಕ್ಕಳು. ಹೆಣ್ಣು ಮಗಳಿಗೆ ಮದುವೆಯಾಗಿದೆ. ಇಡೀ ಜಗತ್ತು ಕಾರ್ಮಿಕರ ದಿನಾಚರಣೆಗೆ ಸಜ್ಜಾಗುತ್ತಿದ್ದರೆ ಅದರ ಅರಿವು ಇಲ್ಲದಂತೆ ತನ್ನ ಪಾಡಿಗೆ ತಾನು ಉರಿ ಬಿಸಿಲಿನಲ್ಲೂ ದುನಿಯಾ ವಿಜಯ್ ಅಭಿನಯದ 'ಸಿಂಹಾದ್ರಿ' ಚಿತ್ರದ ಸೆಟ್ ಕೆಲಸದಲ್ಲಿ ಬ್ಯುಸಿಯಾಗಿದ್ದರು ಕೃಷ್ಣ. ಕಾರ್ಮಿಕ ದಿನಾಚರಣೆ ವೇಳೆ ಗಾಡಿ ಕೃಷ್ಣ ಬದುಕಿನ ವ್ಯಥೆ ಹೇಳಿಕೊಂಡರು.
ಫುಟ್‌ಪಾತ್‌ನಲ್ಲಿ ಜೀವನ: ಹುಟ್ಟಿದ್ದು ಉಡುಪಿಯ ಅಲ್ಲಾಡಿಯಲ್ಲಿ. ತಂದೆ ಪೊಲೀಸ್ ಆಗಿದ್ದ ಕಾರಣ ಕುಟುಂಬ ಬೆಂಗಳೂರಿಗೆ ವರ್ಗಾವಣೆಯಾಯಿತು. ತಂದೆ ಇದ್ದಾಗ ಜೀವನ ಚೆನ್ನಾಗಿತ್ತು. ತೀರಿಕೊಂಡ ಮೇಲೆ ಕುಟುಂಬ ನಡೆಯುವುದು ಕಷ್ಟವಾಯಿತು. 5ನೇ ತರಗತಿಗೇ ಓದು ನಿಂತಿತು. ಆಗ ಕೈ ಹಿಡಿದಿದ್ದು ಫುಟ್‌ಪಾತ್. ಗಾಡಿಯಲ್ಲಿ ಹಣ್ಣು ಹಾಕಿಕೊಂಡು ಗಾಂಧಿನಗರದಲ್ಲಿ ವ್ಯಾಪಾರ ಶುರು ಮಾಡಿದೆ. ಸಿನಿಮಾಗಳ ಬಗ್ಗೆ ಆಕರ್ಷಣೆ, ಜೊತೆಗೆ ಇಲ್ಲಿ ದುಡಿದರೆ ಹಣ ಬರುತ್ತದೆ ಅಂದುಕೊಂಡು ಮದ್ರಾಸ್‌ಗೆ ಹೋದರೆ, ಇಡೀ ದಿನ ಕೆಲಸ ಮಾಡಿದರೂ ಕಾಸಿನ ಮುಖ ನೋಡುವುದೇ ಕಷ್ಟವಾಗುತ್ತಿತ್ತು. 30 ರಿಂದ 50 ರುಪಾಯಿ ಸಿಕ್ಕರೂ ದೊಡ್ಡ ಮೊತ್ತವೆ. ಆದರೆ, ಗಾಡಿ ವ್ಯಾಪಾರ  ಮಾಡಿಕೊಂಡಿದ್ದರಿಂದ ಹೇಗೋ ಒಂದು ಹೊತ್ತಿನ ಊಟಕ್ಕೆ ತೊಂದರೆ ಇರಲಿಲ್ಲ.
ಫುಟ್‌ಪಾತ್ ವ್ಯಾಪರದಲ್ಲೇ ಬದುಕು ಕಟ್ಟಿಕೊಳ್ಳುತ್ತಿದ್ದ ನಾನು ಬರು ಬರುತ್ತ ಸೆಟ್ ಕೆಲಸ ಕಲಿತೆ. ಇದನ್ನೇ ಮುಖ್ಯ ವೃತ್ತಿಯಾಗಿಸಿಕೊಂಡೆ. ಹಣ್ಣು ವ್ಯಾಪಾರ ಕಡಿಮೆಯಾಯಿತು. ಹೊಟ್ಟೆ ತುಂಬುವ ಗ್ಯಾರಂಟಿ ಇರಲಿಲ್ಲ. ಆದರೂ 38 ವರ್ಷ ಇಲ್ಲೇ ಕಳೆದೆ. ನಿರ್ದೇಶಕ ಸಾಯಿಪ್ರಕಾಶ್ ಚಿತ್ರವೊಂದರ ಹಾಡಿನ ಚಿತ್ರೀಕರಣಕ್ಕೆ ಸೆಟ್ ವಸ್ತುಗಳನ್ನು ಹೊತ್ತು ಬೆಟ್ಟ ಹತ್ತುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿತು. ಮೇಜರ್ ಆಪರೇಷನ್ ಆಯಿತು. ಆಗ ಜೀವನ ಮತ್ತಷ್ಟು ದುಸ್ತರವಾಯಿತು. ನಾನು ಈಗ ಬದುಕಿದ್ದೀನಿ ಅಂದ್ರೆ ಅದಕ್ಕೆ ಕಾರಣ ಡಾ. ದೇವಿಶೆಟ್ಟಿ.
ಚಿತ್ರಬ್ರಹ್ಮನ ನೆರವು: ಪುಟ್ಟಣ್ಣ ಕಣಗಾಲ್, ರೇಣುಕಾ ಶರ್ಮಾ, ಭಾರ್ಗವ, ಅಬ್ಬಾಯಿ ನಾಯ್ಡು ಅವರಿಂದ ಹಿಡಿದು ಈಗಿನ ಹೊಸ ನಿರ್ದೇಶಕರ ಚಿತ್ರಗಳ ತನಕ ಸೆಟ್ ಅಸೋಸಿಯೇಟ್ ಆಗಿಯೇ ಕೆಲಸ ಮಾಡುತ್ತಿದ್ದೇನೆ. ಆಗ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ನನ್ನ ತುಂಬಾ ಚೆನ್ನಾಗಿ ನೋಡಿಕೊಂಡರು. ಬಹುಶಃ ಶಂಕರ್‌ನಾಗ್, ಪುಟ್ಟಣ್ಣ, ಪ್ರಭಾಕರ್ ಅವರು ಇದ್ದಿದ್ದರೆ ಕಾರ್ಮಿಕರ ಸ್ಥಿತಿ ಸುಧಾರಿಸುತ್ತಿತ್ತು.
ನಟ ಶಂಕರ್‌ನಾಗ್ ಅವರಂತೂ ಕಾರ್ಮಿಕರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. 'ಕಾರ್ಮಿಕರು ನೆಮ್ಮದಿಯಾಗಿದ್ದರೆ ಚಿತ್ರೋದ್ಯಮ ಚೆನ್ನಾಗಿರುತ್ತದೆ' ಎನ್ನುತ್ತಿದ್ದರು. ನಾನು ಮೊದಲು ಸಂಪೂರ್ಣವಾಗಿ ಸೆಟ್ ಕೆಲಸ ಮಾಡಿದ್ದು ಅಬ್ಬಾಯಿ ನಾಯ್ಡು ಅವರ ಚಿತ್ರದ ಮೂಲಕ. ಮಸಣದ ಹೂವು, ಕೊಲ್ಲೂರು ಮೂಕಾಂಬಿಕೆ ಮುಂತಾದವು
ನನ್ನ ಆರಂಭದ ಚಿತ್ರಗಳು. ಅಜಿತ್, ಅಂತ ಚಿತ್ರಗಳು ನನಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟವು. ಅಲ್ಲಿಂದಲೇ ಈ ಫುಟ್‌ಪಾತ್ ವ್ಯಾಪಾರಿ ಸೆಟ್ ಕಾರ್ಮಿಕನಾಗಿ ಗುರುತಿಸಿಕೊಂಡ.
ಕಾರ್ಮಿಕನಿಗೆ ಬದುಕಿಲ್ಲ: ಪ್ರತಿ ವರ್ಷ ಮೇ 1 ಬಂದರೆ ಕಾರ್ಮಿಕರು, ಹಕ್ಕುಗಳು, ಸ್ವತಂತ್ರ ಅಂತೆಲ್ಲ ಮಾತನಾಡುತ್ತಾರೆ. ನಾನು ಅನಕ್ಷರಸ್ಥ. ಅಂಥ ದೊಡ್ಡ ಮಾತುಗಳು ನನಗೆ ಗೊತ್ತಿಲ್ಲ. ಸತ್ಯ ಹೇಳಬೇಕು ಅಂದ್ರೆ ಕಾರ್ಮಿಕ ಅನಿಸಿಕೊಂಡವನಿಗೆ ಇಲ್ಲಿ ಬದುಕಿಲ್ಲ. ಕೇವಲ ಸಿನಿಮಾ ಕಾರ್ಮಿಕ ಮಾತ್ರವಲ್ಲ, ಯಾವುದೇ ಕ್ಷೇತ್ರದ ಕಾರ್ಮಿಕರನ್ನು ತೆಗೆದುಕೊಳ್ಳಿ. ಅವರವರ ದುಡಿಮೆಯಲ್ಲಿ ನೆಮ್ಮದಿಯ ಬದುಕು ಕಾಣಲು ಆಗುತ್ತಿಲ್ಲ. ನಾವು ಕಾರ್ಮಿಕರಾಗಿಯೇ ಹುಟ್ಟಿದ್ದೇವೆ. ಕಾರ್ಮಿಕರಾಗಿಯೇ ಹೋಗುತ್ತೇವೆ. ಇಲ್ಲಿವರೆಗೂ ಎಷ್ಟು ಮೇ ದಿನಾಚರಣೆಗಳು ಬಂದಿವೆ ಹೇಳಿ? ಯಾರ ಬದುಕಾದರೂ ಬದಲಾಗಿದೆಯೇ? ಮೇ 1ಕ್ಕೆ ರಜೆ ಸಿಗುತ್ತದೆ ಅಷ್ಟೆ. ಒಂದು ವೇಳೆ
ಆ ದಿನ ಕೂಡ ಕೆಲಸ ಮಾಡಿದರೆ ಹೆಚ್ಚುವರಿ ಕೂಲಿ ಸಿಗುತ್ತದೆ ಎನ್ನುವುದು ಬಿಟ್ಟರೆ ಹೆಚ್ಚು ಬದಲಾವಣೆಯಾಗಿಲ್ಲ ಎನ್ನುತ್ತ ಸೆಟ್‌ಗೆ ಬಳಸುವ ವಸ್ತುಗಳನ್ನು ಹಿಡಿದು ಬಿಸಿಲನ್ನು ಲೆಕ್ಕಿಸದೆ ಕೆಲಸದಲ್ಲಿ ಮಗ್ನರಾದರು ಗಾಡಿ ಕೃಷ್ಣ.
5000 ಕಾರ್ಮಿಕ ಕುಟುಂಬ
ಆರಂಭದ ದಿನಗಳಲ್ಲಿ ಚಿತ್ರೋದ್ಯಮದಲ್ಲಿ ಕಾರ್ಮಿಕರ ಬದುಕಿಗೆ ಬೆಲೆ ಇರಲಿಲ್ಲ. ದಿನ ಪೂರ್ತಿ ದುಡಿದರೂ ಕೊಟ್ಟಷ್ಟು ಕೂಲಿ ತೆಗೆದುಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾಗ ಕಾರ್ಮಿಕರ ಒಕ್ಕೂಟ ಆರಂಭವಾಯಿತು. ನಾಲ್ಕು ವರ್ಷಗಳ ಪ್ರಯತ್ನದ ಫಲವಾಗಿ ಕರ್ನಾಟಕ ಚಲನಚಿತ್ರ ಕಾರ್ಮಿಕ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟ ಹುಟ್ಟಿಕೊಂಡಿತು. 1989ರಲ್ಲಿ ಆರಂಭದ ಒಕ್ಕೂಟಕ್ಕೆ ಇದೇ ಜುಲೈಗೆ 25ರ ಸಂಭ್ರಮ. ಪ್ರಸ್ತುತ ಕಲಾವಿದ ಅಶೋಕ್ ಅಧ್ಯಕ್ಷತೆಯಲ್ಲಿ ಒಕ್ಕೂಟ ನಡೆಯುತ್ತಿದ್ದು, ಒಟ್ಟು 22 ವಿಭಾಗಗಳು ಇದರ ವಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. 5 ಸಾವಿರ ಕಾರ್ಮಿಕ ಕುಟುಂಬಗಳು ಚಿತ್ರೋದ್ಯಮವನ್ನು ನಂಬಿಕೊಂಡಿವೆ.

 ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement