ಬಸವ ಸ್ಮಾರಕ, ಈಗ ಆಕರ್ಷಕ
ಕ.ಪ್ರ. ವಾರ್ತೆ ಬಸವನಬಾಗೇವಾಡಿ ಏ.30
ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಜನಿಸಿದ ಮನೆಯನ್ನು ರಾಜ್ಯ ಸರ್ಕಾರ 1.50 ಕೋಟಿ ವೆಚ್ಚದಲ್ಲಿ ಸ್ಮಾರಕವಾಗಿ ಅಭಿವೃದ್ಧಿಪಡಿಸಿದೆ.
90 ಅಡಿ ಎತ್ತರದ ಇಂಡೋಸಾರ್ಸನಿಕ್ ಶೈಲಿಯ ಬಸವ ಸ್ಮಾರಕ ನಿರ್ಮಿಸಲಾಗಿದೆ. ಐತಿಹಾಸಿಕ ಮಹತ್ವ ಸಾರುವ ಅಂದಿನ ಕಾಲದ ಕಂಚು, ಕಟ್ಟಿಗೆ, ಗಾಜು, ಕಲ್ಲು ನಿರ್ಮಿತ ಚಿತ್ರಣಗಳನ್ನು ಅಳವಡಿಸಲಾಗಿದೆ. ಸ್ಮಾರಕದ ಮುಂದೆ ಉದ್ಯಾನ, ಕೆಳ ಮಹಡಿಯಲ್ಲಿ ಮಾದರಸ ಸಭಾಭವನ, ಮಾದಲಾಂಬಿಕೆ ಗ್ರಂಥಾಲಯ ಇದೆ.
ಇಲ್ಲಿಗೆ ಬರುವ ಪ್ರವಾಸಿಗರಿಗೆ ದ್ವಿಪಥ ರಸ್ತೆ ನಿರ್ಮಿಸಲಾಗಿದೆ. ಬಿಜಾಪುರ ರಸ್ತೆಯಲ್ಲಿರುವ ಬಸವ ಜನ್ಮ ಸ್ಮಾರಕ ಮಹಾದ್ವಾರದ ಎದುರು ರು. 1 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಚಾಲುಕ್ಯರ ಶೈಲಿಯ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನವು ಮೂಲ ಸ್ವರೂಪದಲ್ಲಿ ಜೀರ್ಣೋದ್ಧಾರಗೊಂಡು ಆಕರ್ಷಿಸುತ್ತಿದೆ.
ಈ ಸ್ಮಾರಕದ ನಿರ್ಮಾಣದಲ್ಲಿ ಅಂದಿನ ಕೂಡಲ ಸಂಗಮ ಮಂಡಳಿಯ ವಿಶೇಷಾಧಿಕಾರಿ ಡಾ. ಎಸ್.ಎಂ. ಜಾಮದಾರ ಅವರ ವಿಶೇಷ ಕಾಳಜಿ ಪರಿಶ್ರಮವಿದ್ದು, 2010ರ ಮೇ16 ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ಸ್ಮಾರಕದ ಶಂಕುಸ್ಥಾಪನೆ ನೆರವೇರಿಸಿದ್ದರು.
ಸರಳ ಆಚರಣೆ
ಪ್ರಸ್ತುತ ಲೋಕಸಭೆ ಚುನಾವಣೆ ಎದುರಾಗಿರುವುದರಿಂದ ಈ ಬಾರಿಯ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಮೇ 2ರಂದು ಬೆಳಗ್ಗೆ 7.30ಕ್ಕೆ ಮುರುಘೇಂದ್ರ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣ, 10.30ಕ್ಕೆ ಬಸವೇಶ್ವರರ ತೊಟ್ಟಿಲು ಸೇವೆ, ಸಂಜೆ 6.30ಕ್ಕೆ ವಚನ ಸಂಗೀತ ಕಾರ್ಯಕ್ರಮ, ಸಂಜೆ 7.30ಕ್ಕೆ ಬಸವ ತತ್ವ ಚಿಂತನಾ ಸಮಾವೇಶ ನಡೆಯಲಿದೆ. ರಾತ್ರಿ 8.30ಕ್ಕೆ ಪಲ್ಲಕ್ಕಿ ಹಾಗೂ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.
ಮೂರು ದಿನಗಳ ಕಾರ್ಯಕ್ರಮ ಯಾವಾಗ?
ಬಸವ ಜಯಂತಿಯನ್ನು ನವರಸಪುರ ಉತ್ಸವ ಮಾದರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿ ಮೂರು ದಿನಗಳ ಕಾಲ ಆಚರಿಸಲಾಗುವುದು ಎಂದು ಎಸ್.ಕೆ. ಬೆಳ್ಳುಬ್ಬಿ ಸಚಿವರಾಗಿದ್ದಾಗ ಭರವಸೆ ನೀಡಿದ್ದರು. ಅದು ಕೇವಲ ಹೇಳಿಕೆಯಾಗಿಯೇ ಉಳಿದಿದೆ. ಅಲ್ಲದೆ ಬಸವ ಜಯಂತಿಯನ್ನು ಸರ್ಕಾರದಿಂದ ಆದ್ಧೂರಿಯಾಗಿ ಆಚರಿಸಲಾಗುವುದು ಎಂದು ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದ್ದರು. ಆದರೆ ಇವರಿಬ್ಬರ ಹೇಳಿಕೆಗಳು ಈವರೆಗೂ ಸಾಕಾರಗೊಂಡಿಲ್ಲ.
- ಬಸವರಾಜ ನಂದಿಹಾಳ