ಮಕ್ಕಳ ವಿರುದ್ಧ ವೃದ್ಧ ದಂಪತಿ ದೂರು
ಕೋಲಾರ: ಒಂಬತ್ತು ಮಂದಿ ಮಕ್ಕಳಿದ್ದರೂ ಒಂದೊತ್ತಿನ ಊಟ ನೀಡುತ್ತಿಲ್ಲ, ವಯಸ್ಸಾಗಿ, ಜೀವನ ನಡೆಸಲು ಕಷ್ಟವಾಗಿದೆ ದಯಮಾಡಿ ಮಕ್ಕಳ ಒಡೆತನದಲ್ಲಿರುವ ಮನೆ ಬಿಡಿಸಿಕೊಡಿ...
ಹೀಗೆಂದು ಜಿಲ್ಲಾಧಿಕಾರಿಗಳ ಮುಂದೆ ವೃದ್ಧ ದಂಪತಿಗಳು ಅಂಗಲಾಚಿದ ಹೃದಯ ವಿದ್ರಾವಕ ಘಟನೆ ಕೋಲಾರದಲ್ಲಿ ನಡೆಯಿತು. ನಗರದ ಉಪ್ಪಾರಪೇಟೆಯ ವೃದ್ಧರಾದ ಕೃಷ್ಣಪ್ಪ ಮತ್ತು ಮುನಿರತ್ನಮ್ಮ ಎಂಬುವರು ತಮ್ಮ ಕೊನೆಯ ಮಗನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು 8 ಮಕ್ಕಳ ವಿರುದ್ಧ ದೂರು ನೀಡಿ, ನ್ಯಾಯ ಕೊಡಿಸಲು ಕೋರಿದರು.
ನಮ್ಮೊಂದಿಗೆ ಬುದ್ಧಿ ಮಾಂದ್ಯನಾದ ಕೊನೆ ಮಗ ಮಾತ್ರ ಇದ್ದು, ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ ಹಾಗೂ ಕಡೆ ಮಗನಿಗೆ ಸಿಗುವ ಅಂಗವಿಕಲ ವೇತನದಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ ಎಂದು ಗೋಳಾಡಿದರು. ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ನಿರ್ಮಿಸಿಕೊಡಲಾಗಿದೆ. ಉಳಿದ ಒಂದು ಮನೆಯನ್ನು ಒಬ್ಬ ಮಗ ತನ್ನ ವಶದಲ್ಲಿಟ್ಟುಕೊಂಡಿದ್ದಾನೆ, ಅದನ್ನು ಕೊಡಿಸಿ ಎಂದು ಮನವಿ ಮಾಡಿದರು.
ಪತಿ ಅನಾರೋಗ್ಯದಿಂದ ಬಳಲುವುದರಿಂದ ಚಿಕಿತ್ಸೆಗೆ ಹಣವಿಲ್ಲದೆ ತೊಂದರೆಯಾಗಿದೆ. ಮಗನ ವಶದಲ್ಲಿರುವ ಮನೆ ನೀಡಿದರೆ ಅದರ ಬಾಡಿಗೆ ಹಣದಿಂದ ಚಿಕಿತ್ಸೆ ಕೊಡಿಸುವುದಾಗಿ ಮುನಿರತ್ನಮ್ಮ ಬೇಡಿದರು. ವೃದ್ಧರ ಮಾತನ್ನಾಲಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ತೊಂದರೆ ಬಗ್ಗೆ ದೂರು ನೀಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ವಿಭಾಗಾಧಿಕಾರಿಗಳಿಗೆ ದೂರವಾಣಿ ಮೂಲಕ ಸದರಿ ವೃದ್ಧ ದಂಪತಿಗಳ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.