ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮತದಾನಕ್ಕೂ ಮುನ್ನ ನಿರ್ಭಯಾ,

ನೀವು ಮತ ಚಲಾಯಿಸಲು ಹೋಗುವಾಗ ನಿರ್ಭಯಾ ಪ್ರಕರಣ, ನಿರುದ್ಯೋಗ, ರೈತರ ಆತ್ಮಹತ್ಯೆ,...

Mainashree
Updated On : 30 Apr 2014, 10:57 am

-ಮತಗಟ್ಟೆ ಬಳಿ ಮೋದಿಯಿಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಅಹಮದಾಬಾದ್:
ನೀವು ಮತ ಚಲಾಯಿಸಲು ಹೋಗುವಾಗ ನಿರ್ಭಯಾ ಪ್ರಕರಣ, ನಿರುದ್ಯೋಗ, ರೈತರ ಆತ್ಮಹತ್ಯೆ, ಪಾಕಿಸ್ತಾನದ ಉಗ್ರರ ಕೈಯಲ್ಲಿ ಶಿರಚ್ಛೇದಗೊಂಡ ನಮ್ಮ ಯೋಧರು, ಕಳೆದ 10 ವರ್ಷಗಳಲ್ಲಿ ನಡೆದ ದೌರ್ಜನ್ಯಗಳನ್ನು ಮರೆಯಬೇಡಿ... - ಗಾಂಧಿನಗರದ ಮತಗಟ್ಟೆಯಲ್ಲಿ ಮತಚಲಾಯಿಸಿದ ಬಳಿಕ ಮೋದಿ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆ ಇದು. ಮತಕೇಂದ್ರದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಪಕ್ಷದ ಚಿಹ್ನೆ ಹಿಡಿದುಕೊಂಡು ಮೋದಿ ಮಾಡಿದ ಈ ಆರೋಪ ಈಗ ವಿವಾದಕ್ಕೆ ಗುರಿಯಾಗಿದೆ. ಇದು ಚುನಾವಣಾ ಆಯೋಗದ ಕೆಂಗಣ್ಣಿಗೂ ಗುರಿಯಾಗಿದೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

ಮೋದಿ ಹೇಳಿದ್ದೇನು?
-    ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ನನ್ನನ್ನು ಪ್ರಧಾನಿ ಕುರ್ಚಿಯಿಂದ ದೂರ ಇಡಲಷ್ಟೇ ತೃತೀಯ ರಂಗದ ವಿಚಾರ ಪ್ರಸ್ತಾಪಿಸುತ್ತಿದೆ.
-    ಪ್ರಧಾನಿ, ಹಣಕಾಸು ಸಚಿವರಂಥ ಘಟಾನುಘಟಿ ನಾಯಕರು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್‌ನ ಪ್ರಮುಖ ನಾಯಕರು ಚುನಾವಣೆಯಿಂದ ಓಡುತ್ತಿದ್ದಾರೆ.
-    ನಮ್ಮ ಪಾಲಿಗೆ ಇದು ಕುರ್ಚಿಗಾಗಿ ನಡೆಯುತ್ತಿರುವ ಚುನಾವಣೆ ಅಲ್ಲ. ದೇಶವನ್ನು ಉಳಿಸಲು ನಡೆಸುತ್ತಿರುವ ಹೋರಾಟ.
-    ಕಳೆದ 12 ವರ್ಷಗಳಿಂದ ನಾನು ಸಿಬಿಐ ಮತ್ತು ಇತರರಿಂದ ಪ್ರಕರಣಗಳನ್ನು ಎದುರಿಸುತ್ತಲೇ ಇದ್ದೇನೆ. ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾವಣೆ ಎದುರಿಸಲು ಸಿದ್ಧರಿಲ್ಲದವರಿಗೆ ನಾನು ಶುಭಾಶಯ ತಿಳಿಸುತ್ತೇನೆ.


100 ಮೀ. ವ್ಯಾಪ್ತಿಗಿಂತ ಹೊರಗಿದ್ದರು
ಚುನಾವಣಾ ನೀತಿ ಸಂಹಿತೆ ಆರೋಪಕ್ಕೆ ಗುರಿಯಾಗಿರುವ ನರೇಂದ್ರ ಮೋದಿ ರಕ್ಷಣೆಗೆ ಬಿಜೆಪಿ ನಿಂತಿದೆ. ಮೋದಿ ಅವರು ಮಾಧ್ಯಮದ ಜತೆಗೆ ಮಾತನಾಡಿದ್ದು ಮತಗಟ್ಟೆಯ 100 ಮೀಟರ್ ಆಚೆಗೆ. ಅವರು ಯಾವುದೇ ನೀತಿ ಸಂಹಿತೆ ಉಲ್ಲಂಘಿಸಿಲ್ಲ. ಆಯೋಗದ ಸೂಚನೆಯಂತೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು  ಬಿಜೆಪಿ ಸ್ಪಷ್ಟನೆ ನೀಡಿದೆ. ಬಿಜೆಪಿಯು ಚುನಾವಣಾ ಆಯೋಗ ಹಾಗೂ ಅದರ ನಿರ್ದೇಶನವನ್ನು ಗೌರವಿಸುತ್ತದೆ ಎಂದು ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement