ಮನೆ ಮುಂದೆ ಮಗನ ಶವ ಹೂತ ತಂದೆ
ಹನೂರು: ಮಗನ ಶವವನ್ನು ತಂದೆ ಮನೆ ಮುಂದೆಯೇ ಹೂತ ಘಟನೆ ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಮಾರ್ಟಳ್ಳಿ ಗ್ರಾಮದ ಪುಷ್ಪರಾಜ್ ಎಂಬಾತನೇ ಮಗನ ಶವ ಮನೆ ಮುಂದೆ ಹೂತು ಹಾಕಿದ ವ್ಯಕ್ತಿ.
ಈತ ಕೆಲ ದಿನಗಳ ಹಿಂದೆ ಗ್ರಾಮದ ಚರ್ಚ್‌ನಲ್ಲಿ ಶಿಲುಬೆಯನ್ನು ಹೊಡೆದು ಹಾಕುವ ಮೂಲಕ ವಿವಾದ ಹುಟ್ಟು ಹಾಕಿದ್ದ. ಇದೀಗ ಮಗನ ಶವವನ್ನು ಮನೆ ಮುಂದೆಯೇ ಹೂಳುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣನಾಗಿದ್ದಾನೆ.
ಪುಷ್ಪರಾಜ್ ಪುತ್ರ ಇಲಿಯಾಪೈಲೆಟ್ (20 ) ಅನಾರೋಗ್ಯಕ್ಕೆ ಒಳಗಾಗಿದ್ದು ವಾರದ ಹಿಂದೆ ತಮಿಳುನಾಡಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದ, ಬುಧವಾರ ಬೆಳಗ್ಗೆ ಶವವನ್ನು ತಂದು ಗ್ರಾಮದ ಯಾರನ್ನೂ ಹತ್ತಿರಕ್ಕೆ ಸೇರಿಸದೆ ಮನೆ ಮುಂದೆಯೇ ಸಮಾಧಿ ಮಾಡಿದ್ದಾನೆ. ನಿವೃತ್ತ ಸೈನಿಕ ಬಿಲವೇಂದ್ರನ್ ಅವರು ಈ ಬಗ್ಗೆ ರಾಮಾಪುರ ಠಾಣೆಗೆ ದೂರು ನೀಡಿದ್ದು, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಸತೀಶ್‌ಬಾಬು, ಹನೂರು ತಹಸೀಲ್ದಾರ್ ಶಿವಲಿಂಗಮೂರ್ತಿ ಅವರಿಗೂ ಮಾಹಿತಿ ನೀಡಿದ್ದಾರೆ. ಆದರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ.