ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಸಲೀಲೆ: ದೇವಿಶ್ರೀಗೆ ಜಾಮೀನು

Mainashree
Updated On : 30 Apr 2014, 10:36 am

ಬೆಂಗಳೂರು: ಮಹಿಳೆ ಜತೆ ರಾಸಲೀಲೆ ಪ್ರಕರಣದಲ್ಲಿ ಬೆದರಿಕೆಯೊಡ್ಡಿ, ತಲೆಮರೆಸಿಕೊಂಡು ನಂತರ ಬಂಧಿತನಾಗಿರುವ ಜ್ಯೋತಿಷಿ ದೇವಿಶ್ರೀಗೆ ನಗರದ 6ನೇ ಎಸಿಎಂಎಂ ನ್ಯಾಯಾಲಯ ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ. ರಾಸಲೀಲೆ ಪ್ರಕರಣಗಳು ಮಾಧ್ಯಮದಲ್ಲಿ ಬಿತ್ತರವಾದ ನಂತರ ಭೂಗತವಾಗಿದ್ದ ಗುರೂಜಿಯನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿ, ಬುಧವಾರ ಮಧ್ಯಾಹ್ನ 6ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸಾಕ್ಷಿ ನಾಶಕ್ಕೆ ಯತ್ನಿಸಬಾರದು. ಯಾವ ಕಾರಣಕ್ಕೂ ದೂರುದಾರರಿಗೆ ಬೆದರಿಕೆ ಹಾಕಬಾರದು. ಪ್ರಕರಣದ ವಿಚಾರಣೆಗೆ ಸಹಕರಿಸಬೇಕು, ಪೊಲೀಸರ ಅನುಮತಿ ಇಲ್ಲದೆ ಯಾವ ಪ್ರವಾಸವನ್ನೂ ಕೈಗೊಳ್ಳಬಾರದು ಎಂದು ಸೂಚಿಸಿ ಷರತ್ತುಬದ್ಧ ಜಾಮೀನು ನೀಡಿದೆ.
ಪೊಲೀಸರಿಂದ ಪರಿಶೀಲನೆ: ಹೊಸೂರು ಬಳಿ ಗುರೂಜಿಯನ್ನು ಬಂಧಿಸಿ ಕರೆತಂದ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ ದೇವಿಶ್ರೀ ಗುರೂಜಿಯ ಜ್ಯೋತಿಷಿ ಕೇಂದ್ರ, ಮನೆಗಳನ್ನು ಪರಿಶೀಲಿಸಿ ಹಲವು ದಾಖಲೆ ಹಾಗೂ ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಷಡ್ಯಂತ್ರ ಆರೋಪ: ಜಾಮೀನು ಪಡೆದು ಹೊರಬಂದ ಗುರೂಜಿ ಮಾಧ್ಯಮದವರ ಜತೆ ಮಾತನಾಡಿ, ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿ ಈ ರೀತಿ ಸುಳ್ಳು ಆರೋಪ ಹೊರಿಸಿದ್ದಾರೆ. ಸಿಸಿಟಿವಿಯಲ್ಲಿನ ದೃಶ್ಯಗಳನ್ನು ಬಿಡುಗಡೆ ಮಾಡುವ ಮುನ್ನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ನಾನು ಒಪ್ಪದಿದ್ದಾಗ ಮತ್ತೆ ಬೆದರಿಸಿದರು ಹಾಗಾಗಿ ಅವರಿಗೆ ರು. 20 ಲಕ್ಷ ಹಣ ನೀಡಿದ್ದೇನೆ. ಆ ವ್ಯಕ್ತಿ ಯಾರು ಎಂಬುದನ್ನು ಹೇಳಲು ಇಚ್ಚಿಸುವುದಿಲ್ಲ. ಈ ಷಡ್ಯಂತ್ರದ ಬಗ್ಗೆ ದಾಖಲೆ ಸಮೇತ ಶೀಘ್ರವೇ ಬಹಿರಂಗಪಡಿಸುತ್ತೇನೆ ಎಂದರು. ಮತ್ತೊಂದು ದೂರು: ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಜ್ಯೋತಿಷಿ ದೇವಿಶ್ರೀ ಗುರೂಜಿ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳುವಂತೆ ಬ್ರಾಹ್ಮಣ ಮಹಾಸಭಾದ ವಾಸುದೇವರಾವ್ ಅವರು ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ನೀಡಿ: ದೇವಿಶ್ರೀ ಗುರೂಜಿಯಿಂದ ಯಾರಾದರೂ ಮೋಸ ಹೋಗಿದ್ದಲ್ಲಿ ಅಂತಹವರು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬಹುದು. ನಂತರ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಶರತ್‌ಚಂದ್ರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement