ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖರೀದಿ ಸಾಮರ್ಥ್ಯ ಹೆಚ್ಚಾದ್ರೆ ಬಡವರ ಸಂಖ್ಯೆ ಕಡಿಮೆ!

ಬಡತನದ ಬಗ್ಗೆ ಮತ್ತೊಮ್ಮೆ ವ್ಯಾಖ್ಯಾನ ಶುರುವಾಗಿದೆ. ಈ ಬಾರಿಯ ಸರದಿ ವಿಶ್ವಬ್ಯಾಂಕ್ನದ್ದು...

Rashmi Kasaragodu
Updated On : 6 Aug 2014, 12:25 pm

ನವದೆಹಲಿ: ಬಡತನದ ಬಗ್ಗೆ ಮತ್ತೊಮ್ಮೆ ವ್ಯಾಖ್ಯಾನ ಶುರುವಾಗಿದೆ. ಈ ಬಾರಿಯ ಸರದಿ ವಿಶ್ವಬ್ಯಾಂಕ್ನದ್ದು. ಜನರ ಖರೀದಿ ಸಾಮರ್ಥ್ಯ (ಪರ್ಚೇಸ್ ಪವರ್ ಪ್ಯಾರಿಟಿ) ಆಧರಿಸಿ ಹೊಸ ವ್ಯಾಖ್ಯೆ ನೀಡಲು ಮುಂದಾಗಿದೆ. ಇಂಥ ವರದಿಯ ಮೂಲಕ ಬಡವರಿಗೆ ಅವಮಾನ ಮಾಡಲು ಮುಂದಾಗಿದೆ.
 ಕೆಲ ಸಮಯದ ಹಿಂದೆ  ರಂಗರಾಜನ್ ಸಮಿತಿ ನಗರದಲ್ಲಿ 47 ಮತ್ತು 32 ವೆಚ್ಚ ಮಾಡುವವರನ್ನು ಬಡವರಲ್ಲ ಎಂದು ಪ್ರತಿಪಾದಿಸಿತ್ತು. ಈ ವಿಚಾರ ಕೋಲಾಹಲಕ್ಕೆ ಕಾರಣವಾಗಿತ್ತು.
ವಿಶ್ವಬ್ಯಾಂಕಿನ ಶಿಫಾರಸೂ ಅದೇ ರೀತಿ ಇದೆ. ಅದರ ಪ್ರಕಾರ ದೇಶದಲ್ಲಿನ ಬಡವರ ಸಂಖ್ಯೆ 10 ಕೋಟಿಗೆ ಇಳಿಯಲಿದೆಯಂತೆ. 2004-2005ನೇ ಸಾಲಿನಲ್ಲಿ ಬಡವರ ಸಂಖ್ಯೆ 40 ಕೋಟಿ ಇತ್ತು.
ಅಮೆರಿಕ ಮಾದರಿ!:  ನಿರ್ದಿಷ್ಟ ಸರಕು ಮತ್ತು ಸೇವೆಗಳನ್ನು ಖರೀದಿಸಲು ಅಮೆರಿಕದಲ್ಲಿ ಎಷ್ಟು ಡಾಲರ್ ಖರ್ಚಾಗುತ್ತದೋ, ದೇಶೀಯ ಮಾರುಕಟ್ಟೆಯಲ್ಲಿ ಅವೇ ಸರಕು ಮತ್ತು ಸೇವೆಗಳನ್ನು ಖರೀದಿಸಲು ತಗಲುವ ಆಯಾ ರಾಷ್ಟ್ರದ ಕರೆನ್ಸಿ ಮೊತ್ತವನ್ನು ತುಲನೆ ಮಾಡಿ 'ಖರೀದಿ ಸಾಮರ್ಥ್ಯ' ರೇಖೆಯನ್ನು ವಿಶ್ವಬ್ಯಾಂಕ್ ರೂಪಿಸಿದೆ. ಈ ಮಾನದಂಡವನ್ನಿಟ್ಟುಕೊಂಡು,  ಜಾಗತಿಕ ಬಡತನ ರೇಖೆಯ ಮಿತಿಯನ್ನು ಪ್ರತಿ ವ್ಯಕ್ತಿಗೆ 1.25 ಡಾಲರ್ ( 76 )  ಎಂದು ನಿಗದಿ ಮಾಡಿದೆ.
ಆದರೆ ಇದು ಭಾರತಕ್ಕೆ ಸೂಕ್ತವಾಗಿದೆಯೇ ಎನ್ನುವ ಪ್ರಶ್ನೆ ಏಳುವುದು ಸಹಜ. ಸಿ. ರಂಗರಾಜನ್ ಸಮಿತಿ ಕಳೆದ ತಿಂಗಳಷ್ಟೇ ಪ್ರತೀ 10 ಭಾರತೀಯರಲ್ಲಿ ಮೂವರು ಬಡವರಿದ್ದಾರೆ (2011-12ರಲ್ಲಿ 36.3 ಕೋಟಿ ಜನ) ಎಂದು ಹೇಳಿದೆ. ಇನ್ನು ಅದೇ ಸಮಯದಲ್ಲೇ ಪ್ರಕಟವಾದ ತೆಂಡೂಲ್ಕರ್ ಸಮಿತಿ ದೇಶದಲ್ಲಿರುವುದು 27 ಕೋಟಿ ಬಡವರು ಎಂದು ಹೇಳುತ್ತಿದೆ.
ಕಡಿಮೆಯಾಗಿಲ್ಲ: ಆರ್ಥಿಕ ಏರಿಕೆ ಹೊರತಾಗಿಯೂ ಅಪೌಷ್ಟಿಕತೆ ಮತ್ತು ಶಿಶುಮರಣ ಪ್ರಮಾಣ ದೇಶದಲ್ಲಿ ಹೆಚ್ಚುತ್ತಿರುವುದು ಬಡವರ ಸಂಖ್ಯೆ ಕಡಿಮೆಯಾಗಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ವಿಶ್ವಬ್ಯಾಂಕ್ನ ಹೊಸ ಮಾನದಂಡ, ಬಡವರ ಸಂಖ್ಯೆ ಕಡಿಮೆಗೊಳಿಸಲು (ಹಾಳೆಯ ಮೇಲೆ) ಹೊರಟಿರುವುದರಿಂದ, ನಿಜಕ್ಕೂ ಆರ್ಥಿಕ ನೆರವಿನ ಅಗತ್ಯವಿದ್ದವರು ತೊಂದರೆಗೀಡಾಗಲಿದ್ದಾರೆ.
70 ಸಾಕೇ?: ವಿಶ್ವಬ್ಯಾಂಕ್ ದಿನಕ್ಕೆ 70 ಇದ್ದರೆ ವ್ಯಕ್ತಿಯ ಅನುಕೂಲಕ್ಕೆ ಸಾಕು ಎಂದು ವಿಶ್ವಬ್ಯಾಂಕ್ ತಿಳಿಸಿದೆ. ಆದರೆ ನಮ್ಮ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ.



ತಜ್ಞರ ಆಕ್ಷೇಪ
ಜಿಡಿಪಿ ಮತ್ತು ಖರೀದಿ ಸಾಮರ್ಥ್ಯದ ಹೆಚ್ಚಳವನ್ನು ಮುಂದಿಟ್ಟುಕೊಂಡು ಬಡತನ ಕಡಿಮೆಯಾಗಿದೆ ಎಂದು ಹೇಳುವುದಕ್ಕಾಗದು ಎನ್ನುತ್ತಾರೆ ಹಣಕಾಸು ಕ್ಷೇತ್ರದ ತಜ್ಞರು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಖರೀದಿ ಸಾಮರ್ಥ್ಯ ಹೆಚ್ಚಾಗಿರುವ ಜನರ ಸಂಖ್ಯೆ ಭಾರತದಲ್ಲಿ ವೃದ್ಧಿಯಾಗಿರಬಹುದು. ಆದರೆ ಅದರ ಅರ್ಥ ಬಡವರ ಸಂಖ್ಯೆ ಕಡಿಮೆಯಾಗಿದೆ ಎಂದೇನಲ್ಲ ಎಂದು ವಿಶ್ವಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement