ನಿವೃತ್ತ ನ್ಯಾಯಮೂರ್ತಿಗಳಿಂದಲೇ ತನಿಖೆ
ಡಿನೋಟಿಫಿಕೇಶನ್ ಪ್ರಕರಣದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ...
ಬೆಂಗಳೂರು: ಡಿನೋಟಿಫಿಕೇಶನ್ ಪ್ರಕರಣದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿರುವ ಅವರು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಪ್ರಕಟಿಸಿದ್ದಾರೆ. ಆದರೆ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವುದಕ್ಕೆ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಕೊರತೆ ಇದೆ ಎಂದು ಹೇಳಿದರು.
ಈ ವಿಚಾರವೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಬುಧವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗುತ್ತೇನೆ. ನ್ಯಾಯಾಂಗ ತನಿಖೆಗೆ ಯಾರನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕೆಂಬ ಬಗ್ಗೆ ಈಗಾಗಲೇ ಐದು ಹೆಸರುಗಳು ಸರ್ಕಾರದ ಮುಂದೆ ಪ್ರಸ್ತಾಪವಾಗಿದೆ ಎಂದು ತಿಳಿಸಿದರು.
ಮೌಢ್ಯ ಮತ್ತು ಅದ್ಧೂರಿ ವಿವಾಹ ಕಾಯ್ದೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಆದರೆ ಈ ಸಂಬಂಧ ನಾನು ಇನ್ನು ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ ಈ ವಿಚಾರದ ಬಗ್ಗೆ ಅಭಿಪ್ರಾಯ ನೀಡುವಂತೆ ರಾಜ್ಯ ಕಾನೂನು ಆಯೋಗವನ್ನು ಕೋರಲಾಗಿದೆ. ಆಯೋಗದ ಅಧ್ಯಕ್ಷ ನ್ಯಾ.ಮೂ. ಎಸ್.ಆರ್.ನಾಯಕ್ ಅವರು ಅಧ್ಯಯನ ನಡೆಸುತ್ತಿದ್ದಾರೆ. ವರದಿ ಬಂದ ನಂತರ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಸಕಾಲ ವ್ಯಾಪ್ತಿಗೆ ಸಚಿವಾಲಯ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಚಿವಾಲಯವನ್ನೂ ಸಕಾಲ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯ ಹೆಚ್ಚಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದಕ್ಕೆ ಒಲವು ತೋರಿದ್ದಾರೆ. ಸಚಿವಾಲಯವನ್ನು ಸಕಾಲ ವ್ಯಾಪ್ತಿಗೆ ಸೇರಿಸುವುದು ನಮ್ಮ ಪ್ರಧಾನ ಆದ್ಯತೆಗಳಲ್ಲಿ ಒಂದು ಎಂದು ಸಚಿವರು ಹೇಳಿದರು.
ಸಕಾಲದಲ್ಲಿ 5.50 ಕೋಟಿ ಅರ್ಜಿ ಸ್ವೀಕಾರವಾಗಿದ್ದು, 5.42 ಕೋಟಿ ವಿಲೇ ಆಗಿದೆ. ಜೂನ್ ಅಂತ್ಯಕ್ಕೆ 25.51 ಲಕ್ಷ ಅರ್ಜಿ ಬಂದಿದ್ದು, 25.8 ಲಕ್ಷ ಅರ್ಜಿ ವಿಲೇವಾರಿ ನಡೆಸಿದ್ದೇವೆ. 478 ಪ್ರಕರಣಗಳಲ್ಲಿ ಸೇವೆ ನೀಡದ ಅಧಿಕಾರಿಗಳಿಗೆ ದಂಡ ವಿಧಿಸಲಾಗಿದ್ದು, ಅವರಿಂದ # 62340 ದಂಡ ವಸೂಲಿ ಮಾಡಲಾಗಿದೆ. ಪದೇ ಪದೆ ಇಂಥ ತಪ್ಪು ಮಾಡುವ ಅಧಿಕಾರಿಗಳ ಸೇವಾ ದಾಖಲೆಯಲ್ಲಿ ಇದನ್ನು ಸೇರಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಸಕಾಲ ಮಿತ್ರ: ಸಕಾಲದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಸಕಾಲ ಮಿಷನ್ ವತಿಯಿಂದ ನಾಗರಿಕರಿಗೆ ಸಕಾಲ ಮಿತ್ರ ಗುರುತಿನ ಚೀಟಿ ನೀಡಲಾಗುವುದು. ಇವರು ಯೋಜನೆಯ ರಾಯಭಾರಿಗಳ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅದೇ ರೀತಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನು ಮುಂದೆ ಸಕಾಲ ಪ್ರಗತಿ ಶ್ರೇಯಾಂಕ ಪ್ರಕಟಿಸುತ್ತೇವೆ. ಕ್ಷೇತ್ರದಲ್ಲಿ ಯಾವ ಇಲಾಖೆ ಸೇವೆ ತೃಪ್ತಿಕರವಾಗಿಲ್ಲವೋ ಆ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಡಿಸಿಎಂ ಹುದ್ದೆ ಹೈಕಮಾಂಡ್ ನಿರ್ಧರಿಸುತ್ತದೆ
ಉಪಮುಖ್ಯಮಂತ್ರಿ ಹುದ್ದೆ ಬೇಕೋ, ಬೇಡವೋ ಎಂಬುದನ್ನು ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಡಿಸಿಎಂ ಹುದ್ದೆಗೆ ಸಂವಿಧಾನದ ಮಾನ್ಯತೆ ಇಲ್ಲ. ಆದರೂ ಕೇಂದ್ರದಲ್ಲಿ ಉಪಪ್ರಧಾನಿ ಮತ್ತು ರಾಜ್ಯಗಳಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುತ್ತಾರೆ. ರಾಜಕೀಯ ಪ್ರಾತಿನಿಧ್ಯ ದೃಷ್ಟಿಯಿಂದ ಇದು ಇರುತ್ತದೆ ಎಂದರು.
ಡಿಸಿಎಂ ಹುದ್ದೆಗೆ ನಿಮ್ಮ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಹೆಸರು ಕೇಳಿ ಬರುತ್ತಿದೆ. ನೀವು ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು, ಇದನ್ನು ಪಕ್ಷ ನಿರ್ಧರಿಸುತ್ತದೆ. ನಾನು ಮತ್ತು ಪರಮೇಶ್ವರ ಸ್ನೇಹಿತರು. ಒಂದೇ ಜಿಲ್ಲೆಯವರು. ನಮ್ಮ ಮಧ್ಯೆ ಯಾವುದೇ ಶೀತಲ ಸಮರವಿಲ್ಲ. ಈ ಹುದ್ದೆಯ ಅಗತ್ಯ ಇದೆಯೋ, ಇಲ್ಲವೋ ಎಂಬ ನನ್ನ ವೈಯಕ್ತಿಕ ಅಭಿಪ್ರಾಯ ಮುಖ್ಯವಲ್ಲ ಎಂದರು.
ಗೃಹ ಸಚಿವರಿಗೆ ಕೆಲಸದ ಒತ್ತಡ ಜಾಸ್ತಿಯಾಗುತ್ತದೆ ಎಂದು ಸಲಹೆಗಾರರ ನೇಮಕ ಮಾಡಿದ್ದಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗುವುದಿಲ್ಲವೇ? ಅದಕ್ಕೆ ಡಿಸಿಎಂ ಹುದ್ದೆ ಸೃಷ್ಟಿ ಅಗತ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದೂಕಾಲು ವರ್ಷವಾಗಿದೆ. ಇದು ಕೆಲಸ ಮಾಡುವ ಸಮಯ. ಹಿಂದೆ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಎಸ್.ಎಂ.ಕೃಷ್ಣ ಉಪಮುಖ್ಯಮಂತ್ರಿಯಾಗಿದ್ದರು. ಆಗ ವ್ಯವಸ್ಥೆ ಚೆನ್ನಾಗಿಯೇ ಇತ್ತು. ನಾನು ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.