ಪುರುಷತ್ವ ಪರೀಕ್ಷೆ ಮುಂದೂಡಿಕೆ; ನಿತ್ಯಾನಂದಗೆ ತಾತ್ಕಾಲಿಕ ರಿಲೀಫ್
ಆ.6ರಂದು ಪುರುಷತ್ವ ಮತ್ತು ಧ್ವನಿ ಪರೀಕ್ಷೆಗೆ ಒಳಗಾಗಬೇಕಿದ್ದ ನಿತ್ಯಾನಂದನಿಗೆ ಸುಪ್ರೀಂ ...
ಕನ್ನಡಪ್ರಭ ಪ್ರತಿನಿಧಿಯಿದ, ನವದೆಹಲಿ
ಆ.6ರಂದು ಪುರುಷತ್ವ ಮತ್ತು ಧ್ವನಿ ಪರೀಕ್ಷೆಗೆ ಒಳಗಾಗಬೇಕಿದ್ದ ನಿತ್ಯಾನಂದನಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಆದರೆ, ನ್ಯಾಯಾಲಯಕ್ಕೆ ಹಾಜರಾಗದೆ ವಿವಿಧ ಕಾರಣ ಒಡ್ಡಿ ತಪ್ಪಿಸಿಕೊಳ್ಳುತ್ತಿದ್ದ ನಿತ್ಯಾನಂದ ಹಾಗೂ ಇತರ ಆರು ಮಂದಿ ಆರೋಪಿಗಳು ಆಗಸ್ಟ್ 18ರೊಳಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಕೋರ್ಟ್ ತಾಕೀತು ಮಾಡಿದೆ.
ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ನಡೆದ ನಂತರ, ನಿತ್ಯಾನಂದನಿಗೆ ಪುರುಷತ್ವ ಮತ್ತು ಧ್ವನಿ ಪರೀಕ್ಷೆ ನಡೆಸುವಂತೆ ಸೂಚಿಸಿದೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಹಿಂದೆ ಆ. 6ರಂದು ಪುರುಷತ್ವ ಪರೀಕ್ಷೆಗೆ ಹಾಜರಾಗಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ನಿತ್ಯಾನಂದನ ವಕೀಲರು ಹೈಕೋರ್ಟ್ನಲ್ಲಿ ಅದಕ್ಕೆ ಒಪ್ಪಿದ್ದರು. ಆದರೆ, ಹೈಕೋರ್ಟ್ ಆ.28ರಂದು ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಮುಂಚಿತವಾಗಿಯೇ ವಿಚಾರಣೆ ನಡೆಸಿದ್ದನ್ನು ಪ್ರಶ್ನಿಸಿ ನಿತ್ಯಾನಂದ ಪರ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಮುಂಚಿತವಾಗಿ ನಡೆಸಿದ್ದರಲ್ಲಿ ಯಾವುದೇ ಲೋಪ ಇಲ್ಲ. ಆದರೆ, ನಿಮ್ಮ ಕಕ್ಷಿದಾರರು ಪದೇ ಪದೆ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವುದು ಸರಿಯಲ್ಲ. ಅದಕ್ಕೆ ನೀಡುತ್ತಿರುವ ಕಾರಣಗಳೂ ಸಮರ್ಥನೀಯವಲ್ಲ. ಆದ್ದರಿಂದ ನಿತ್ಯಾನಂದ ಮತ್ತು ಇತರ ಆರು ಆರೋಪಿಗಳು ಆಗಸ್ಟ್ 18ರೊಳಗೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲೇಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.