ಮುಂದುವರಿದ ಯಾಂತ್ರಿಕ ಕಾರ್ಯಾಚರಣೆ
ಮಗ ಕೈ ತಪ್ಪಿಹೋದ ಎನ್ನುವ ಹತಾಶೆ. ಕಣ್ಣ ಮುಂದಿರುವ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯ...
ಬಾಗಲಕೋಟೆ: ಮಗ ಕೈ ತಪ್ಪಿಹೋದ ಎನ್ನುವ ಹತಾಶೆ. ಕಣ್ಣ ಮುಂದಿರುವ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯ ನೆನೆದು ಭೀತಿ. ಇಂಥ ಅಸಹಾಯಕ ಸ್ಥಿತಿಯಲ್ಲಿರುವ ತಂದೆಯಿಂದ 'ಕಾರ್ಯಾಚರಣೆ ನಿಲ್ಲಿಸ್ರಪ್ಪೊ' ಎನ್ನುವ ಯಾಚನೆ. ಇದರ ನಡುವೆಯೇ ಬಾಲಕ ತಿಮ್ಮಣ್ಣನ ರಕ್ಷಣಾ ಕಾರ್ಯಾಚರಣೆ ಅಹೋರಾತ್ರಿ ಮೂರನೇ ದಿನವೂ ಮುಂದುವರಿದಿದೆ.
ಸೂಳೀಕೇರಿಯಲ್ಲಿ ಕೊಳವೆಬಾವಿಗೆ ಬಿದ್ದಿರುವ ತಿಮ್ಮಣ್ಣ ಬದುಕಿ ಬರುವುದು ಅಸಾಧ್ಯ ಎನ್ನುವುದು ಬಾಲಕನ ತಂದೆ ಹಣಮಂತಪ್ಪ ಅವರಿಗೇ ಮನವರಿಕೆಯಾಗಿದೆ. ಹೀಗಾಗಿಯೇ ಕಾರ್ಯಾಚರಣೆ ನಿಲ್ಲಿಸುವಂತೆ ಗೊಗರೆಯುತ್ತಿದ್ದಾರೆ. ಬೆಳೆದು ನಿಂತಿದ್ದ ಕಬ್ಬಿನ ಹೊಲವೂ ಈಗ ಅಗೆದ ಮಣ್ಣಿನ ಗುಡ್ಡವಾಗಿರುವುದು ಅವರನ್ನು ಇನ್ನಷ್ಟು ಕಂಗೆಡಿಸಿದೆ.
160 ಅಡಿ ಆಳದಲ್ಲಿರುವ ಮಗುವನ್ನು ಮೇಲೆತ್ತಲು ನಾಲ್ಕು ಹಿಟಾಚಿ ಹಾಗೂ ಎರಡು ಜೆಸಿಬಿ ಯಂತ್ರಗಳಿಂದ ಗುಂಡಿ ತೋಡಲಾಗುತ್ತಿದೆ. ಭಾನುವಾರ ಸಂಜೆಯಿಂದ ಮಂಗಳವಾರ ರಾತ್ರಿಯವರೆಗೆ 80 ಅಡಿ ಮಾತ್ರ ತೋಡಲು ಸಾಧ್ಯವಾಗಿದೆ. ಗುಂಡಿ ತೋಡುವ ಕಾರ್ಯ ಇನ್ನುಮೇಲೆ ಮತ್ತಷ್ಟು ಕಠಿಣವಾಗಲಿದೆ. ಕೆಳಭಾಗದಲ್ಲಿ ಗಟ್ಟಿ ಕಲ್ಲು ಸಿಗಬಹುದೇ, ನೀರು ಉಕ್ಕಬಹುದೇ ಎಂಬ ಆತಂಕ ರಕ್ಷಣಾ ತಂಡಕ್ಕೆ ಎದುರಾಗಿದೆ. ಇದೇ ವೇಗದಲ್ಲಿ ನಡೆದರೆ 160 ಅಡಿ ಆಳಕ್ಕೆ ಇಳಿಯಲು ಇನ್ನೂ ಮೂರು ದಿನಗಳಾದರೂ ಬೇಕು ಎನ್ನುವುದು ತಜ್ಞರ ಅಭಿಪ್ರಾಯ.
ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊಳವೆ ಬಾವಿಗೆ ಮೇಲ್ಮುಖವಾಗಿ ಜಾರಿರುವ ತಿಮ್ಮಣ್ಣನಿಂದ ಈಗ ಯಾವ ಬಗೆಯ ಪ್ರತಿಕ್ರಿಯೆಗಳೂ ಬರುತ್ತಿಲ್ಲ. ಎರಡು ದಿನಗಳಿಂದ ಕ್ಯಾಮೆರಾ ಕೇವಲ ಆತನ ಮುಂಗೈಯನ್ನು ಮಾತ್ರ ತೋರಿಸುತ್ತಿದೆ. ಈ ಮಧ್ಯೆ ಹೊರ ಭಾಗದಲ್ಲಿ ಜೆಸಿಬಿ ಯಂತ್ರಗಳು ಆಳವಾದ ಗುಂಡಿ ತೋಡಲು ನಿರತವಾದಾಗ ಭೂಮಿ ಕಂಪಿಸಿ ಮೂರು ಕೆಜಿಯಷ್ಟು ಮಣ್ಣು ತಿಮ್ಮಣ್ಣನ ಮೇಲೆ ಬಿದ್ದಿತ್ತು. ಸೋಮವಾರ ಮಧ್ಯರಾತ್ರಿ ಬಾಗಲಕೋಟೆ ನಗರಸಭೆಯಲ್ಲಿದ್ದ ಸಕ್ಕಿಂಗ್ ಯಂತ್ರಕ್ಕೆ ಒಂದೂವರೆ ಇಂಚಿನ ಪೈಪು ಅಳವಡಿಸಿ ತಿಮ್ಮಣ್ಣನ ಮೇಲೆ ಬಿದ್ದ ಮಣ್ಣನ್ನು ಹೊರತೆಗೆದಾಗ ಮತ್ತೆ ಕೈಗಳು ಗೋಚರಿಸಿದವು. ಮಂಗಳವಾರದ ಕಾರ್ಯಾಚರಣೆಗೆ ಮಳೆಯೂ ಅಡ್ಡಿಯಾಗಿದೆ. ಅಂತಿಮ ಪ್ರಯತ್ನವಾಗಿ ಜಿಲ್ಲಾಡಳಿತ ಚೆನ್ನೈನ ರೋಬೋ ತಜ್ಞ ಮಣಿಕಂಠ ಅವರ ನೆರವು ಬಯಸಿದೆ. ರಾತ್ರಿ ಮಣಿಕಂಠ ಬಾಗಲಕೋಟೆಗೆ ಆಗಮಿಸಿದ್ದಾರೆ.