ಸೋಮಾರಿ ಗ್ರಾಪಂಗಳ ಅನುದಾನಕ್ಕೆ ಕತ್ತರಿ
ತೆರಿಗೆ ಹಾಗೂ ನೀರಿನ ಕರ ಸಂಗ್ರಹದಲ್ಲಿ ಉದಾಸೀನ ಮಾಡುವ ಗ್ರಾಮ ಪಂಚಾಯಿತಿಗಳ ಅನುದಾನ ...
ಶಿವಮೊಗ್ಗ: ತೆರಿಗೆ ಹಾಗೂ ನೀರಿನ ಕರ ಸಂಗ್ರಹದಲ್ಲಿ ಉದಾಸೀನ ಮಾಡುವ ಗ್ರಾಮ ಪಂಚಾಯಿತಿಗಳ ಅನುದಾನ ಕಡಿತಗೊಳಿಸುವ ಮೂಲಕ ಸರ್ಕಾರ ಪಾಠ ಕಲಿಸಿದೆ. ಅಲ್ಲದೇ, ಉತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಪಂಗಳಿಗೆ ಪುರಸ್ಕಾರ ನೀಡಲಾಗಿದ್ದು, ಈ ಮೂಲಕ ತೆರಿಗೆ ಸಂಗ್ರಹಣೆ ಹೆಚ್ಚಿಸುವ ನಿಟ್ಟಿನಲ್ಲಿ ಕಠಿಣ ಹೆಜ್ಜೆ ಇರಿಸಿದೆ.
2013-14ನೇ ಸಾಲಿನ ಶಾಸನಬದ್ಧ ಅನುದಾನದ 4ನೇ ತ್ರೈಮಾಸಿಕ ಕಂತಿನ ಮೊತ್ತವನ್ನು 5629 ಗ್ರಾಪಂಗಳಿಗೆ ಈಗ ಬಿಡುಗಡೆ ಮಾಡಿರುವ ಸರ್ಕಾರ, ಈ ಕಠಿಣ ನಿಲುವು ಪ್ರಕಟಿಸಿದೆ.
ಹಿಂದೆಯೇ ಘೋಷಿಸಲಾಗಿತ್ತು: ಹಿಂದಿನ ಬಾಕಿ ಹೊರತುಪಡಿಸಿ ಶೇ. 50ರಷ್ಟೂ ಕರ ವಸೂಲಿ ಮಾಡದ ಗ್ರಾಮ ಪಂಚಾಯಿತಿಗೆ 4ನೇ ತ್ರೈಮಾಸಿಕ ಕಂತಿನ ಅನುದಾನ ತಡೆಹಿಡಿಯುವಂತೆ ಹಾಗೂ ತಡೆ ಹಿಡಿಯಲಾಗಿರುವ ಗ್ರಾಮ ಪಂಚಾಯಿತಿಯ ಅನುದಾನದ ಪಾಲಿನ ರು. 1 ಲಕ್ಷ ಹಣವನ್ನು ಅದೇ ತಾಲೂಕಿನಲ್ಲಿ ಒಳ್ಳೆಯ ಆಡಳಿತ ನೀಡಿರುವ ಗ್ರಾಮ ಪಂಚಾಯಿತಿಗೆ ನೀಡುವುದಾಗಿ ಸರ್ಕಾರ ಮುಂಚೆಯೇ ಘೋಷಿಸಿತ್ತು.
ನಂತರ ರಾಜ್ಯದಲ್ಲಿರುವ ಬರಗಾಲ ಪರಿಸ್ಥಿತಿ, ಜಿಲ್ಲೆಯ ಆರ್ಥಿಕ ಸಾಮಾಜಿಕ ಪರಿಸ್ಥಿತಿ ವರ್ಗೀಕರಣೆ ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯಗಳ ಸ್ಥಿತಿಗನುಗುಣವಾಗಿ ಶೇ. 50ರ ಡಿಸಿಬಿ ವಸೂಲಾತಿ ಸಡಿಲಿಸಿ ಜಿಲ್ಲಾವಾರು ಗುರಿಗಳನ್ನು ನೀಡಲಾಗಿತ್ತು.
ಜಿಲ್ಲಾ ಪಂಚಾಯಿತಿಗಳು ಸಲ್ಲಿಸಿರುವ ಅಂಕಿ-ಅಂಶಗಳ ಆಧಾರದ ಮೇಲೆ ಶೇಕಡಾವಾರು ತೆರಿಗೆ ವಸೂಲಾತಿಯಂತೆ ವರ್ಗೀಕರಿಸಿದ ಗ್ರಾಮ ಪಂಚಾಯಿತಿಗಳಿಗೆ ಈಗ ಅನುದಾನ ಬಿಡುಗಡೆ ಮಾಡಿದೆ. ನಿಗದಿಪಡಿಸಿರುವ ಗುರಿಗಿಂತ ಕಡಿಮೆ ತೆರಿಗೆ ವಸೂಲಾತಿ ಮಾಡಿರುವ ಗ್ರಾಮ ಪಂಚಾಯಿತಿಗಳ ಅನುದಾನದಿಂದ ರು. 1 ಲಕ್ಷ ಅನುದಾನ ಕಟಾಯಿಸಿ, ಗುರಿ ಸಾಧನೆ ಮಾಡಿರುವ ಗ್ರಾಮ ಪಂಚಾಯಿತಿಗಳಿಗೆ ಹಂಚಲಾಗಿದೆ. ಹೆಚ್ಚುವರಿಯಾಗಿ ಬಂದಿರುವ ಅನುದಾನವನ್ನು ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಸೂಚಿಸಿದೆ. ರಾಜ್ಯದ 30 ಜಿಲ್ಲೆಗಳಲ್ಲಿ 8 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 1418 ಗ್ರಾಮ ಪಂಚಾಯಿತಿಗಳಿದ್ದರೆ, 8000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 4211 ಗ್ರಾಮ ಪಂಚಾಯಿತಿಗಳಿವೆ. 8 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ, ತೆರಿಗೆ ಗುರಿ ಸಾಧನೆ ರು. 1 ಲಕ್ಷ ಮೊತ್ತದ ಅನುದಾನಕ್ಕೆ ಕತ್ತರಿ ಹಾಕಲಾಗಿದೆ.
ಅನುದಾನ ಕಡಿತ: ಜಿಲ್ಲಾವಾರು ವಿವರ
ಬೆಂಗಳೂರು 33
ಬೆಂ.ಗ್ರಾ, ರಾಮನಗರ 53
ಕೋಲಾರ 64
ಚಿಕ್ಕಬಳ್ಳಾಪುರ 48
ತುಮಕೂರು 73
ಶಿವಮೊಗ್ಗ 89
ಚಿತ್ರದುರ್ಗ 93
ದಾವಣಗೆರೆ 114
ಮೈಸೂರು 50
ಮಂಡ್ಯ 100
ಹಾಸನ 132
ದಕ್ಷಿಣ ಕನ್ನಡ 6
ಚಿಕ್ಕಮಗಳೂರು 100
ಬಿಜಾಪುರ 163
ಬೆಳಗಾವಿ 117
ಉಡುಪಿ 2
ಚಾಮರಾಜನಗರ 26
ಕೊಡಗು 1
ಗದಗ 42
ಬಾಗಲಕೋಟೆ 57
ಉತ್ತರ ಕನ್ನಡ 19
ಧಾರವಾಡ 51
ರಾಯಚೂರು 82
ಕೊಪ್ಪಳ 62
ಬೀದರ್ 87
ಬಳ್ಳಾರಿ 101
ಗುಲ್ಬರ್ಗ 62
ಯಾದಗಿರಿ 109
-ಶ್ರೀಕಾಂತ ಭಟ್