ಹೇಯ ಕೃತ್ಯಗಳಲ್ಲಿ ಬಾಲಾಪರಾಧಿಗೂ ಗಂಭೀರ ಶಿಕ್ಷೆ
ಬಾಲಾಪರಾಧಿ ಕಾಯ್ದೆ ತಿದ್ದುಪಡಿ ವಿಧೇಯಕದ ಕರಡು ಇದೇ ವಾರದಲ್ಲಿ ಕೇಂದ್ರ ಸಂಪುಟ...
ನವದೆಹಲಿ: ಬಾಲಾಪರಾಧಿ ಕಾಯ್ದೆ ತಿದ್ದುಪಡಿ ವಿಧೇಯಕದ ಕರಡು ಇದೇ ವಾರದಲ್ಲಿ ಕೇಂದ್ರ ಸಂಪುಟದಿಂದ ಅಂತಿಮಗೊಳ್ಳುವ ಸಾಧ್ಯತೆಯಿದೆ. ಚಾಲ್ತಿಯಲ್ಲಿರುವ ಸಂಸತ್ ಅಧಿವೇಶನ ಆ. 14ರಂದು ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ವಿಧೇಯಕವನ್ನು ಮಂಡಿಸಲು ಕೇಂದ್ರ ಉತ್ಸುಕವಾಗಿದ್ದು, ಈ ಸಂಬಂಧ ಪ್ರಕ್ರಿಯೆಗಳನ್ನು ಸರ್ಕಾರ ಚುರುಕಾಗಿಸಿದೆ.
16ರ ವಯಸ್ಸಿನೊಳಗಿನ ವ್ಯಕ್ತಿಗಳು ಕೊಲೆ ಅಥವಾ ಅತ್ಯಾಚಾರ ಮುಂತಾದ ಹೇಯ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಅವರನ್ನು ವಯಸ್ಕರಂತೆ ಶಿಕ್ಷಾರ್ಹರೆಂದು ಪರಿಗಣಿಸಲು ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಆದರೆ, ಅಪರಾಧ ಸಾಬೀತಾದದಲ್ಲಿ ಬಾಲಾಪರಾಧಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ಹೊರತುಪಡಿಸಿ, ಇನ್ನಿತರ ಶಿಕ್ಷೆ ವಿಧಿಸಲು ಉಲ್ಲೇಖಿಸಲಾಗಿದೆ. ಅಲ್ಲದೆ, ಆರೋಪಿಗಳ ವಿಚಾರಣೆ ನಡೆಸುವ ಹಾಗೂ ಶಿಕ್ಷೆ ನೀಡುವ ಹೊಣೆಯನ್ನು ಬಾಲ ನ್ಯಾಯಮಂಡಳಿ (ಜೆಜೆ)ಗೆ ನೀಡಲು ಸೂಚಿಸಲಾಗಿದೆ.
ರ್ಯಾಂಗಿಂಗ್ ಸಹ ಸೇರ್ಪಡೆ: ವಿಧೇಯಕದಲ್ಲಿ ಬಾಲಾಪರಾಧಿ ಕಾಯ್ದೆ ವ್ಯಾಪ್ತಿಗೆ ಸಾಮಾಜಿಕ ಪಿಡುಗುಗಳಾದ ಶಾಲೆಗಳಲ್ಲಿ ದಂಡನೆ ಹಾಗೂ ರ್ಯಾಗಿಂಗ್ ಪ್ರಕರಣಗಳನ್ನೂ ಸೇರಿಸಲು ಸಲಹೆ ಮಾಡಲಾಗಿದೆ. ಹಾಲಿ ಬಾಲಾಪರಾಧ ಕಾಯ್ದೆಯಲ್ಲಿ, ಈ ಅಂಶಗಳು ಇರಲಿಲ್ಲ.
ಶಾಲೆಗಳಲ್ಲಿ ದಂಡನೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಮೂರು ವರ್ಷ ಜೈಲು ಹಾಗೂ ಸೇವೆಯಿಂದ ವಜಾ ಶಿಕ್ಷೆ ಮತ್ತು ರ್ಯಾಗಿಂಗ್ ಪ್ರಕರಣಗಳಲ್ಲಿ ಮೂರು ವರ್ಷ ಜೈಲುವಾಸ ಹಾಗೂ ರು. 10 ಸಾವಿರ ದಂಡ ವಿಧಿಸಬೇಕೆಂದು ಉಲ್ಲೇಖಿಸಲಾಗಿದೆ. ಇನ್ನು, ವಿದ್ಯಾಸಂಸ್ಥೆಗಳ ಸಿಬ್ಬಂದಿ ರ್ಯಾಗಿಂಗ್ ಮಾಡಿರುವುದು ಸಾಬೀತಾದರೆ, ಅವರನ್ನು ಸೇವೆಯಿಂದ ವಜಾ ಮಾಡಬೇಕು ಹಾಗೂ ಭವಿಷ್ಯದಲ್ಲಿ ಅವರಿಗೆ ವಿದ್ಯಾರ್ಥಿಗಳೊಂದಿಗೆ ಕಾರ್ಯ ನಿರ್ವಹಿಸುವ ಎಲ್ಲ ಅವಕಾಶಗಳನ್ನು ಕಿತ್ತುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ವಿಧೇಯಕ ಏನು ಹೇಳುತ್ತೆ?
ಹತ್ಯೆ ಅಥವಾ ಅತ್ಯಾಚಾರಗಳಂಥ ಹೇಯ ಕೃತ್ಯಗಳಲ್ಲಿ ಭಾಗಿಯಾಗಿರುವ 16ರ ವಯೋವುತಿಯೊಳಗಿನ ವ್ಯಕ್ತಿಗಳನ್ನು ವಯಸ್ಕರೆಂದು ಪರಿಗಣಿಸಬೇಕು.
ಬಾಲಾಪರಾಧಿಗಳ ಪ್ರಕರಗಳ ವಿಚಾರಣೆಯನ್ನು ಬಾಲನ್ಯಾಯ ಮಂಡಳಿ ಸುಪರ್ದಿಗೆ ವಹಿಸಬೇಕು.
ಆರೋಪ ಸಾಬೀತಾದಲ್ಲಿ, ಗಲ್ಲು, ಜೀವಾವಧಿ ಶಿಕ್ಷೆ ಹೊರತುಪಡಿಸಿ ಇನ್ನಿತರ ಶಿಕ್ಷೆ ವಿಧಿಸಬಹುದು.
ರ್ಯಾಗಿಂಗ್ ಹಾಗೂ ಶಾಲೆಗಳಲ್ಲಿ ದಂಡನೆ ಪ್ರಕರಣಗಳೂ ಬಾಲಾಪರಾಧಿ ಕಾಯ್ದೆಗೆ ಹೊಸ ಸೇರ್ಪಡೆ.