ಕೊಳವೆಬಾವಿ ದುರಂತಕ್ಕೆ ಕಡಿವಾಣ; ಪೊಲೀಸರಿಗೂ ಅಧಿಕಾರ
ರಾಜ್ಯದಲ್ಲಿ ಇನ್ನು ಅನುಮತಿ ಇಲ್ಲದೆ ಕೊಳವೆಬಾವಿ...
ಬೆಂಗಳೂರು: ರಾಜ್ಯದಲ್ಲಿ ಇನ್ನು ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯುವ ರಿಗ್ಯಂತ್ರಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದ್ದು, ತೆರೆದ ಬೋರ್ ಮುಚ್ಚಲು ಅಧಿಕಾರಿಗಳಿಗೆ ಆ.31ರ ಗಡುವು ನೀಡಲಾಗಿದೆ.
ಪಿಡಿಒ, ಗ್ರಾಮ ಲೆಕ್ಕಿಗರು, ಕಿರಿಯ ಎಂಜಿನಿಯರ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಿಗೆ ತೆರೆದ ಕೊಳವೆಬಾವಿ ಮುಚ್ಚುವ ಕೆಲಸ ವಹಿಸಲಾಗಿದೆ.
ಅನುಪಯುಕ್ತ ಬೋರ್ಗಳನ್ನು ಮುಚ್ಚಲು ಆ.31ರ ಗಡುವು ನೀಡಲಾಗಿದ್ದು, ಈ ಕಾರ್ಯ ಮುಗಿದ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿ, ಕಿರಿಯ ಎಂಜಿನಿಯರ್ ಹಾಗೂ ಗ್ರಾಮ ಲೆಕ್ಕಿಗರು ಜಂಟಿ ಪ್ರಮಾಣಪತ್ರವನ್ನು ಆಯಾ ಜಿ.ಪಂ. ಸಿಇಒಗೆ ನೀಡಲು ಸೂಚಿಸಲಾಗಿದೆ.
ತೆರೆದ/ನಿರುಪಯುಕ್ತ ಕೊಳವೆಬಾವಿಗಳ ಬಗ್ಗೆ ಪರಿಷ್ಕೃತ ಸುತ್ತೋಲೆಯನ್ನು ಸರ್ಕಾರ ಬುಧವಾರ ಹೊರಡಿಸಿದೆ. ಇದರನ್ವಯ ಅವಘಡ ತಡೆಗೆ ಕ್ರಮ ಕೈಗೊಳ್ಳುವುದು ಸ್ಥಳೀಯ ಜಿಲ್ಲಾಧಿಕಾರಿ, ಸಿಇಒ ಹಾಗೂ ಅವರ ವ್ಯಾಪ್ತಿಯ ನಿಯಂತ್ರಣಾಧಿಕಾರಿಗಳ ಕರ್ತವ್ಯ. ಜನರಲ್ಲಿ ಅರಿವು ಮೂಡಿಸಲು 'ನಿರುಪಯುಕ್ತ/ವಿಫಲ ಕೊಳವೆಬಾವಿ ಮುಚ್ಚಿಸಿ, ಮಕ್ಕಳು ಬೀಳುವುದನ್ನು ತಪ್ಪಿಸಿ' ಎಂಬ ಘೋಷವಾಕ್ಯ ಸಿದ್ಧಪಡಿಸಲಾಗಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲುಸೂಚಿಸಲಾಗಿದೆ. ಕೊಳವೆಬಾವಿಗೆ ಪೂರ್ವ ಅನುಮತಿ ಕಡ್ಡಾಯವಾಗಿದ್ದು, ಪತ್ರ ಇಲ್ಲದಿದ್ದರೆ ರಿಗ್ ಯಂತ್ರ ವಶಪಡಿಸಿಕೊಳ್ಳುವ ಅಧಿಕಾರ ಸಬ್ ಇನ್ಸ್ಪೆಕ್ಟರ್ಗೆ ನೀಡಲಾಗಿದೆ.
ಬಾಲಕನ ಹೊರ ತೆಗಿತೀವಿ
ಬಾಗಲಕೋಟೆ: ಕೊಳವೆ ಬಾವಿ ಆಳದಲ್ಲಿರುವ ಬಾಲಕ ತಿಮ್ಮಣ್ಣನನ್ನು ತಲುಪುವ ಕಾರ್ಯಾಚರಣೆಗೆ ವರುಣನ ಅಡ್ಡಿ. ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದೊಳಗೆ ನೀರು ಹೋಗದಂತೆ ನೋಡಿಕೊಳ್ಳುವ ತಾಪತ್ರಯ. ಕಾರ್ಯಾಚರಣೆ ಮುಂದುವರಿಸುವ ತೀರ್ಮಾನಕ್ಕೆ ಬಂದಿರುವ ಸರ್ಕಾರದಿಂದ 'ತಿಮ್ಮಣ್ಣನನ್ನೂ ಹೊರ ತೆಗೆಯುತ್ತೇವೆ, ರೈತನ ಜಮೀನೂ ಉಳಿಸ್ತೇವೆ' ಎನ್ನುವ ಭರವಸೆ.