ಯುಪಿಎಸ್‌ಸಿ ಪರೀಕ್ಷೆ ದಿನಾಂಕ ಬದಲಿಲ್ಲ
ಯುಪಿಎಸ್‌ಸಿ ವಿವಾದಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ದಾಳಿಗೆ ತುತ್ತಾಗಿದ್ದರೂ, ಕೇಂದ್ರ ಸರ್ಕಾರ ಮಾತ್ರ ...
ನವದೆಹಲಿ: ಯುಪಿಎಸ್‌ಸಿ ವಿವಾದಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ದಾಳಿಗೆ ತುತ್ತಾಗಿದ್ದರೂ, ಕೇಂದ್ರ ಸರ್ಕಾರ ಮಾತ್ರ ಲೋಕಸೇವಾ ಆಯೋಗದ ಪ್ರಾಥಮಿಕ ಪರೀಕ್ಷೆಯನ್ನು ಮುಂದೂಡದಿರಲು ನಿರ್ಧರಿಸಿದೆ. ಪರೀಕ್ಷೆ ಈ ಮೊದಲು ನಿಗದಿಪಡಿಸಿದಂತೆ ಆ.24ರಂದೇ ನಡೆಯಲಿದೆ. ಆದರೆ ವಿವಾದದ ಬಗ್ಗೆ ಚರ್ಚಿಸಲು ಇನ್ನೊಮ್ಮೆ ಸರ್ವಪಕ್ಷ ಸಭೆ ನಡೆಸಲಾಗುವುದು ಎಂದು ಸರ್ಕಾರ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದೆ.
24ರಂದು 9 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಿಗೆಲ್ಲರೂ ಶುಭ ಕೋರೋಣ ಎನ್ನುವ ಮೂಲಕ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಪ್ರಕಾಶ್ ಜಾವಡೇಕರ್ ಪರೀಕ್ಷೆ ದಿನಾಂಕದಲ್ಲಿ
ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದೇ ವೇಳೆ, ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ವಪಕ್ಷ ಸಭೆ ನಡೆಸಲಾಗುವುದು. ಅಗತ್ಯಬಿದ್ದರೆ ಇಂತಹ ಇನ್ನಷ್ಟು ಸಭೆಗಳನ್ನು ಕರೆಯಲಾಗುವುದು ಎಂದೂ ಅವರು ಹೇಳಿದರು. ಇದೇ ವೇಳೆ ಯುಪಿಎಸ್‌ಸಿ ವಿವಾದಕ್ಕೆ ಸಂಬಂಧಿಸಿ ಸಿಪಿಎಂ, ಸಿಪಿಐ, ಎಸ್ಪಿ ಮತ್ತು ಬಿಎಸ್ಪಿ ಸದಸ್ಯರು ಸದನದಿಂದ ಹೊರನಡೆದವು.