ಲಾಲ್ಬಾಗ್ಗೆ ಬಂದಿದೆ ಮೈಸೂರು ಅರಮನೆ!
ಜಗತ್ಪ್ರಸಿದ್ಧ ಮೈಸೂರು ಅರಮನೆಯ ವಿಶಿಷ್ಟತೆ ಯಾರಿಗೆ ತಾನೆ ಗೊತ್ತಿಲ್ಲ? ರಾಜ ಮಹಾರಾಜರ ಕಾಲದ...
ಬೆಂಗಳೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ವಿಶಿಷ್ಟತೆ ಯಾರಿಗೆ ತಾನೆ ಗೊತ್ತಿಲ್ಲ? ರಾಜ ಮಹಾರಾಜರ ಕಾಲದ ಗತ ವೈಭವವನ್ನು ಕಣ್ಣಿಂದ ಕಾಣದಿದ್ದರೂ ಕೇಳಿರುತ್ತೇವೆ.
ಅದೇ ಅರಮನೆ ನಗರದಲ್ಲಿ ಉದ್ಭವಿಸದರೆ ಹೇಗೆ? ನಂಬಲಾಗದಿದ್ದರೂ ಇದು ಸತ್ಯ. ಮೈಸೂರಿನ ಅರಮನೆಯನ್ನೇ ಹೋಲುವ, ಅದೇ ವೈಭವವನ್ನು ಮರುಕಳಿಸುವ ಅರಮನೆಯೊಂದು ಲಾಲ್ಬಾಗ್ನಲ್ಲಿ ಸಿದ್ಧವಾಗಿದೆ.
ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಂದು ಫಲಪುಷ್ಪ ಪ್ರದರ್ಶನ ನಡೆಯುವ ಹಾಗೆ ಈ ಬಾರಿ 200ನೇ ಫಲಪುಷ್ಪ ಪ್ರದರ್ಶನವನ್ನು ಆ.8-17ರವರೆಗೆ ಅದ್ಧೂರಿಯಿಂದ ನಡೆಸಲಾಗುತ್ತಿದೆ. ಹೂವಿನಿಂದ ತಯಾರಿಸುತ್ತಿರುವ ಅರಮನೆ, ಅದಕ್ಕೆ ಇನ್ನಷ್ಟು ಮೆರುಗು ತರಲು ಹೂವಿನ ಅಶ್ವಗಳು, ಆನೆಗಳು ನಿಲ್ಲುತ್ತಿವೆ. ಹೀಗೆ ಎಲ್ಲವನ್ನೂ ಹೂವುಗಳಿಂದ ನಿರ್ಮಿಸುತ್ತಿರುವ ಸಿಬ್ಬಂದಿ ಸಾರ್ವಜನಿಕರಿಗೆ ವಿಶಿಷ್ಟವಾದ ಅನುಭವನೀಡುವ ತವಕದಲ್ಲಿದ್ದಾರೆ. 45ಅಡಿ ಉದ್ದ, 27 ಅಡಿ ಎತ್ತರ ಹಾಗೂ 12ಅಡಿ ಅಗಲದ ಪ್ರದೇಶದಲ್ಲಿ 30 ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಬಳಸಿ ಪ್ರದರ್ಶನಕ್ಕೆ ವಿನೂತನ ತಯಾರಿ ನಡೆಸುತ್ತಿರುವುದಾಗಿ ಮೈಸೂರು ಉದ್ಯಾನ ಕಲಾ ಸಂಘದ ಅಧ್ಯಕ್ಷ ಡಾ. ಕೆ. ರಾಮಕೃಷ್ಣಪ್ಪ ತಿಳಿಸಿದ್ದಾರೆ.
ಪುಷ್ಪಾಲಂಕೃತ ಮೈಸೂರು ಅರಮನೆ ಹಾಗೂ ದಸರಾ ಮೆರವಣಿಗೆಯ ಪುಷ್ಪ ದೃಶ್ಯಾವಳಿ, ಪುಷ್ಪದಲ್ಲಿ ಅರಳಿದ ಅನಾನಸ್, ಅಲಂಕಾರಿಕ ಹೂವಿನ ಗಿಡಗಳ ಬೃಹತ್ ವಿನ್ಯಾಸ, ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಅಲಂಕಾರಿಕ ಪುಷ್ಪಗಳ ಜೋಡಣೆ, ಗಾಜಿನ ಮನೆಯಲ್ಲಿ ವೈವಿಧ್ಯಮಯ ಪುಷ್ಪಗಳ ಪ್ರದರ್ಶನ ನಡೆಯಲಿದೆ.
ಪ್ರವಾಸಿಗರು ಕ್ಯಮರಾಗಳನ್ನು ಗಾಜಿನ ಮನೆ ಒಳಗೊಂಡಂತೆ ಲಾಲ್ಬಾಗ್ನ ಎಲ್ಲ ಪ್ರದೇಶಗಳಲ್ಲೂ ಮುಕ್ತವಾಗಿ ಬಳಸಬಹುದಾಗಿದೆ. ಒಳಗಿನ ಯಾವುದೇ ಮಳಿಗೆದಾರರು ಹಾಗೂ ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಲಾಗಿದೆ.
ಆ.13 ಹಾಗೂ 14ರಂದು ಖಾಸಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗ್ಗೆ 9ರಿಂದ 5ರವರೆಗೆ ಉತಿಚ ಪ್ರವೇಶ ಕಲ್ಪಿಸಲಾಗಿದೆ. ಆಗಸ್ಟ್ 7ರಿಂದ 15ರವರೆಗೆ ಪ್ರವೇಶ ಶುಲ್ಕ ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 40, 12ವರ್ಷದೊಳಗಿನ ಮಕ್ಕಳಿಗೆ 10, ರಜಾ ದಿನಗಳಲ್ಲಿ ವಯಸ್ಕರಿಗೆ 50, ಮಕ್ಕಳಿಗೆ 10ನ್ನು ಪಾವತಿಸಬೇಕು.
ಸಿಎಂ ಉದ್ಘಾಟನೆ
ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಆ.8ರಂದು ಬೆ.11.30ಕ್ಕೆ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಸಚಿವ ಶಾಮನೂರು ಶಿವಶಂಕರಪ್ಪ, ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಸದಸ್ಯ ಎಸ್. ಅನಿಲ್ಕುಮಾರ್ ಪಾಲ್ಗೊಳ್ಳಲಿದ್ದಾರೆ.