ಲೋಕ ಗದ್ದಲ
ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಕಾಂಗ್ರೆಸ್ ಈಗ ರಾಷ್ಟ್ರ ರಾಜಕಾರಣದಲ್ಲಿ ತನ್ನ ...
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಕಾಂಗ್ರೆಸ್ ಈಗ ರಾಷ್ಟ್ರ ರಾಜಕಾರಣದಲ್ಲಿ ತನ್ನ ಅಸ್ತಿತ್ವ ಪ್ರದರ್ಶಿಸಲು ಹೊಸ ಕಾರ್ಯತಂತ್ರ ರೂಪಿಸುತ್ತಿದೆ. ಲೋಕಸಭೆಯ ಬುಧವಾರದ ಕಲಾಪದ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆದುಕೊಂಡ ರೀತಿಯೇ ಇದಕ್ಕೆ ಸಾಕ್ಷಿ. ಸಂಸತ್ನಲ್ಲಿ ಕೊನೆಯ ಬೆಂಚಿಗೆ ಅಂಟಿಕೊಂಡಿದ್ದ ರಾಹುಲ್ ಒಮ್ಮಿಂದೊಮ್ಮೆಲೆ ಸದನದ ಬಾವಿಗಿಳಿದು ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಅಲ್ಲದೆ, ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಮಾತಿನ ಚಕಮಕಿಗೂ ಇದು ನಾಂದಿ ಹಾಡಿತು.
ಎದ್ದ ರಾಹುಲ್: ಇತ್ತೀಚೆಗೆ ಇಡೀ ಸದನವೇ ಬೆಲೆಯೇರಿಕೆ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾಗ ಹಾಯಾಗಿ ತೂಕಡಿಸುತ್ತಿದ್ದ ರಾಹುಲ್ ಬುಧವಾರ ನಿದ್ದೆಯಿಂದ ಎಚ್ಚೆತ್ತಿದ್ದರು. ಉತ್ತರಪ್ರದೇಶ ಸೇರಿ ದೇಶದ ಹಲವೆಡೆಯ ಕೋಮುಗಲಭೆಗಳ ಬಗ್ಗೆ ಚರ್ಚಿಸಬೇಕೆಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಕೋರಿಕೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ತಿರಸ್ಕರಿಸಿದರು. ಇದರಿಂದ ರೊಚ್ಚಿಗೆದ್ದ ರಾಹುಲ್ ಸದನದ ಬಾವಿಗಿಳಿದು ಸ್ಪೀಕರ್ ವಿರುದ್ಧ ಕಿಡಿಕಾರಿದರು. 'ಸಂಸತ್ನಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆಯೆಂದರೆ, ಒಬ್ಬ ವ್ಯಕ್ತಿಯ ಧ್ವನಿ ಮಾತ್ರವೇ ಇಲ್ಲಿ ಲೆಕ್ಕಕ್ಕೆ ಬರುತ್ತಿದೆ' ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಂಡಕಾರಿದರು. 'ಸ್ಪೀಕರ್ ಅವರು ಸಂಪೂರ್ಣ ಒಂದು ಕಡೆಗೆ ಬಾಗಿದ್ದಾರೆ. ಅವರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಇದು ಸರಿಯಲ್ಲ' ಎಂದರು. ಕಾಂಗ್ರೆಸ್ ಇತರ ಸದಸ್ಯರೂ ಧ್ವನಿಗೂಡಿಸಿದರು.
ಬಿಜೆಪಿ ಆಕ್ರೋಶ: ರಾಹುಲ್ ಮಾತಿಗೆ ಹಲವು ಬಿಜೆಪಿ ಸದಸ್ಯರು ಆಕ್ರೋಶಗೊಂಡರು. ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ರಾಜನಾಥ್ ಸಿಂಗ್, 'ಪ್ರಧಾನಿ ಮೋದಿ ಅವರು ಸರ್ವಾಧಿಕಾರಿಯೂ ಅಲ್ಲ. ಕೋಮುವಾದಿಯೂ ಅಲ್ಲ. ಇಲ್ಲದಿದ್ದರೆ ಅವರನ್ನು ಜನ ಬಹುಮತದಿಂದ ಗೆಲ್ಲಿಸುತ್ತಿರಲಿಲ್ಲ' ಎಂದರು.
ಖರ್ಗೆ ಹೇಳಿಕೆಗೆ ಖಂಡನೆ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ 'ಎನ್ಡಿಎ ಸರ್ಕಾರ ಬಂದ ಮೇಲೆ ಕೋಮುಗಲಭೆ ಹೆಚ್ಚಾಗಿದೆ. ದೇಶದಲ್ಲಿ ಶಾಂತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲೇಬೇಕು' ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯರು ರೊಚ್ಚಿಗೆದ್ದರು. ಎನ್ಡಿಎಯ 300 ಸಂಸದರೂ ಎದ್ದು ನಿಂತು ಖರ್ಗೆಗೆ ಮಾತಿನ ಚಾಟಿ ಬೀಸಿದರು. ಈ ವಿಚಾರದಲ್ಲಿ ಗದ್ದಲ ಶುರುವಾದ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯನಾಯ್ಡು ಮಾತನಾಡಿ, 'ದೇಶದಲ್ಲಿ ಎಲ್ಲೂ ಕೋಮು ಉದ್ವಿಗ್ನತೆ ಇಲ್ಲ' ಎಂದರು. ಆಗ ಸ್ಪೀಕರ್ ಸುಮಿತ್ರಾ ಮಹಾಜನ್, ಶೂನ್ಯ ವೇಳೆಯಲ್ಲಿ ಈ ಬಗ್ಗೆ ಚರ್ಚಿಸಿ ಎಂದರು. ಕಾಂಗ್ರೆಸ್, ಆರ್ಜೆಡಿ, ಎಸ್ಪಿ, ಆರ್ಎಸ್ಪಿ ಮತ್ತು ಆಪ್ ಸದಸ್ಯರು 'ಪ್ರಧಾನಮಂತ್ರಿ ಕಹಾಂ ಗಯೇ, ಭಾಗ್ ಗಯೇ, ಭಾಗ್ ಗಯೇ' (ಪ್ರಧಾನ ಮಂತ್ರಿ ಎಲ್ಲಿ ಹೋದರು ಓಡಿ ಹೋದರು, ಓಡಿ ಹೋದರು) ಎನ್ನುತ್ತಾ ಘೋಷಣೆಗಳನ್ನು ಕೂಗತೊಡಗಿದರು. ಇಷ್ಟೆಲ್ಲ ಕಸರತ್ತುಗಳು ನಡೆಯುವಾಗ ಪ್ರಧಾನಿ ಮೋದಿ ಅವರು ಸದನದಲ್ಲೇ ಮೌನವಾಗಿ ಕುಳಿತಿದ್ದರು.