ಭೂತಳದಲ್ಲೇ ಸಮಾಧಿ
ಜನಾಭಿಪ್ರಾಯಕ್ಕೆ ಮಣಿದು ತಿಮ್ಮಣ್ಮನನ್ನು ಕೊಳವೆ ಬಾವಿಯಿಂದ ಮೇಲೆತ್ತುವ...
ಬಾಗಲಕೋಟೆ: ಜನಾಭಿಪ್ರಾಯಕ್ಕೆ ಮಣಿದು ತಿಮ್ಮಣ್ಮನನ್ನು ಕೊಳವೆ ಬಾವಿಯಿಂದ ಮೇಲೆತ್ತುವ ಕಾರ್ಯಾಚರಣೆ ಸ್ಥಗಿತಗೊಳಿಸಿದ ಸರ್ಕಾರ, ಬಾಲಕನ ಅಂತ್ಯಕ್ರಿಯೆ ಸಂಬಂಧ ಅಡ್ವೋಕೇಟ್ ಜನರಲ್ ಸಲಹೆ ಪಡೆದು ಮುಂದುವರಿಯಲು ನಿರ್ಧರಿಸಿದೆ.
ಬಾಲಕ ಅಸುನೀಗಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದರೂ ಕಾರ್ಯಾಚರಣೆ ಮುಂದುವರಿಸುವ ಕುರಿತು ಸಂದಿಗ್ಹಕ್ಕೆ ಸಿಲುಕಿದ್ದ ಸರ್ಕಾರ ಕೊನೆಗೂ ಬಾಲಕನ ತಂದೆ, ಸೂಳಿಕೇರಿ ಗ್ರಾಮಸ್ಥರು ಹಾಗೂ ಜಿಲ್ಲೆಯ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿತು.
ಶುಕ್ರವಾರ ರಾತ್ರಿಯಿಂದ ತಾತ್ಕಾಲಿಕವಾಗಿ ಸ್ಧಗಿತಗೊಳಿಸಲಾಗಿದ್ದ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಘೋಷಿಸಿದೆ.
ಆದರೆ, ತಿಮ್ಮಣ್ಣನ ಮೃತದೇಹ ಕೊಳವೆ ಬಾವಿ ಆಳದಲ್ಲಿರುವುದರಿಂದ ಅಂತ್ಯಕ್ರಿಯೆ ಸಂಬಂಧ ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆಯಲು ನಿರ್ಧರಿಸಿತು.
ಸರ್ಕಾರದ ಇತರೆ ತೀರ್ಮಾನ
*ಮುಖ್ಯಮಂತ್ರಿ ಸೂಚನೆಯಂತೆ ತಿಮ್ಮಣ್ಣನ ಮೇಲೆತ್ತುವ ಸಂಬಂಧ ಕೈಗೊಂಡ ಕಾರ್ಯಾಚರಣೆಯಿಂದಾಗಿ ಹಾನಿಗೊಳಗಾದ ಭೂಮಿಯನ್ನು ಯಥಾಸ್ಥಿತಿಗೆ ತಂದು ಕೊಡಲಾಗುವುದು.
*ಕಾರ್ಯಾಚರಣೆ ವೇಳೆ ಹಾನಿಗೊಳಗಾದ ಕಬ್ಬು ಬೆಳೆಗೆ ಐದು ಲಕ್ಷ ರುಪಾಯಿ ಪರಿಹಾರ ನೀಡಲಾಗುವುದು.
*ಶಾಸಕರು ಸೇರಿದಂತೆ ಅನೇಕರು ವೈಯುಕ್ತಿಕ ಪರಿಹಾರ ಘೋಷಿಸಿದ್ದಾರೆ. ಹಣಮಂತಪ್ಪ ಹಾಗೂ ಆತನ ಪತ್ನಿ ಹೆಸರಲ್ಲಿ ಜಂಟಿ ಖಾತೆ ತೆರೆದು ಪರಿಹಾರದ ಹಣ ವರ್ಗಾಯಿಸಲಾಗುವುದು.
*ಘಟನೆಗೆ ಸಂಬಂಧಸಿ ಅಧಿಕಾರಿಗಳು ಹಾಗೂ ಕುಟುಂಬದ ಸದಸ್ಯರ ಮೇಲೆ ಹಾಕಿದ ಪ್ರಕರಣಗಳನ್ನು ವಾಪಸ್ಸು ಪಡೆಯಲಾಗುವುದು.