ಸರ್ಕಾರದ ನಿಲುವು ಬದಲಿಲ್ಲ
ಕೆಪಿಎಸ್ಸಿ ಆಯ್ಕೆಪಟ್ಟಿ ರದ್ದು ಹಿನ್ನೆಲೆಯಲ್ಲಿ ಪರ ವಿರೋಧಿ ಬಣಗಳ ಅಭ್ಯರ್ಥಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ...
ಕನ್ನಡಪ್ರಭ ವಾರ್ತೆ.ಬೆಂಗಳೂರು. ಆ.9: ಕೆಪಿಎಸ್ಸಿ ಆಯ್ಕೆಪಟ್ಟಿ ರದ್ದು ಹಿನ್ನೆಲೆಯಲ್ಲಿ ಪರ ವಿರೋಧಿ ಬಣಗಳ ಅಭ್ಯರ್ಥಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ. ಆದರೆ ಸರ್ಕಾರದ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದೂರುದಾರರಾದ ಮೈತ್ರಿ ಮತ್ತವರ 150 ಬೆಂಬಲಿಗರು, ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿ ಆಯ್ಕೆ ಪಟ್ಟಿ ರದ್ದು ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಸರ್ಕಾರ ಭ್ರಷ್ಟಾಚಾರದ ವಿರುದ್ಧ ದಿಟ್ಟ ನಿಲುವು ತೆಗೆದುಕೊಂಡಿದೆ. ಅರ್ಹರಿಗೆ ಈ ಪಟ್ಟಿಯಿಂದ ಅನ್ಯಾಯವಾಗಿತ್ತು. ನಾವೆಲ್ಲರೂ ಸರ್ಕಾರದ ಪರ ಇದ್ದೇವೆ ಎಂದರು.
ಸವಾಲು: ಈ ಸಂದರ್ಭದಲ್ಲಿ ಮಾತನಾಡಿದ ಮೈತ್ರಿ, ಆಯ್ಕೆರದ್ದು ಖಂಡಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನಿರಶನ ನಡೆಸುತ್ತಿರುವುದು ದುರದೃಷ್ಟಕರ, ಅವರು ಯಾರ ಪರ ಇದ್ದಾರೆ? ಭ್ರಷ್ಟಾಚಾರ ಸಂಬಂಧ ಅಳರ ನಿಲುವು ಏನು? ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. ನನ್ನ ತಂದೆಯ ವಿರುದ್ಧ ಲೋಕಾಯುಕ್ತ ದಾಳಿ ನಡೆದಿತ್ತು. ಎಂದವರು ಆರೋಪಿಸುತ್ತಿದ್ದಾರೆ. ಆದರೆ ಅದಕ್ಕೂ, ನನ್ನ ಪ್ರಕರಣಕ್ಕೂ ಸಂಬಂಧವಿಲ್ಲ. ಬೇಕಿದ್ದರೆ ನನ್ನ ಜತೆ ಚರ್ಚೆಗೆ ಬರಲಿ. ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ಸವಾಲೆಸದರು.
ಬಂಧನ: ಇದೇ ಸಂದರ್ಭದಲ್ಲಿ ಪ್ರತಿಭಟನಾ ನಿರತರ ಪರ ಕೃಷ್ಣಾಕ್ಕೆ ಬಂದ ಸುಷ್ಮಾ ಎಂಬುವರು, ಸಿಎಂ ಭೇಟಿ ಮಾಡುವುದಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದರು. ಆದರೆ ಪೊಲೀಸರು ಅವಕಾಶ ನೀಡಲಿಲ್ಲ. ಈ ತಾರತಮ್ಯ ಪ್ರಶ್ನಿಸಿದಾಗ ಗದ್ದಲ ನಡೆದು, ಪೊಲೀಸರು ಸುಷ್ಮಾರನ್ನು ಬಂಧಿಸಿ ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು.
ನಿರ್ಧಾರ ಬದಲಿಲ್ಲ: ಕೊನೆಗೆ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಕೊನೆಗೂ ಪ್ರತಿಭಟನಾಕಾರರಿಗೆ ಸಿದ್ದರಾಮಯ್ಯನವರ ಭೇಟಿಗೆ ಅವಕಾಶ ಕಲ್ಪಿಸಿದರು.
ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ನಿಮ್ಮ ಕಷ್ಟ ನಮಗೆ ಅರ್ಥವಾಗುತ್ತದೆ. ಆದರೆ ಕಾನೂನಿಗೆ ವಿರುದ್ಧವಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಿಮ್ಮ ಶ್ರಮಕ್ಕೆ ಬೆಲೆ ಸಿಗುತ್ತದೆ. ಆದಷ್ಟು ಬೇಗ ಮತ್ತೊಂದು ಪರೀಕ್ಷೆಗೆ ಅಧಿಸೂಚನೆ ಹೊರಡಿಸುತ್ತೇವೆ. ಆಗ ನಿಮಗೆಲ್ಲರಿಗೂ ಯಶಸ್ಸು ಸಿಗಲಿ. ಪ್ರತಿಭಟನೆ ನಡೆಸುವುದರ ಬದಲು ಮುಂದಿನ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.