ಕೆಪಿಎಸ್‌ಸಿ ಅರ್ಜಿ ವಿಚಾರಣೆ: ಹಿಂದೆ ಸರಿದ ಪೀಠ
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ನೇಮಕ ಪ್ರಕ್ರಿಯೆ 1998,99 ಹಾಗೂ 2004ರಲ್ಲಿ ನಡೆದ ಅಕ್ರಮಕ್ಕೆ...
ಬೆಂಗಳೂರು: ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ನೇಮಕ ಪ್ರಕ್ರಿಯೆ 1998,99 ಹಾಗೂ 2004ರಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್‌ನ ಮುಖ್ಯ ನ್ಯಾ.ಡಿ.ಎಚ್ ವಾಘೇಲ ಅವರ ವಿಭಾಗೀಯ ಪೀಠ ಹಿಂದೆ ಸರಿದಿದೆ. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಅಕ್ರಮ ನೇಮಕ ವಿಷಯದಲ್ಲಿ ಅವಿಶ್ವಾಸ ವ್ಯಕ್ತಪಡಿಸಿದ ಅನಾಮಧೇಯ ಪತ್ರಗಳು ತಮಗೆ ಬಂದಿರುವುದರಿಂದ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ವಿಚಾರಣೆಯಿಂದ ಹಿಂದೆ ಸರಿದು ಅರ್ಜಿಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಿದೆ.
ಘಟನೆ ವಿವರ: ಕೆಪಿಎಸ್‌ಸಿ 1998, 99 ಹಾಗೂ 2004ರಲ್ಲಿ ಅಕ್ರಮ ಎಸಗಿರುವುದಾಗಿ ಖಲೀಲ್ ಅಹಮದ್, ಇತರೆ 24 ಜನ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಪ್ರಕಣರವನ್ನು ಸಿಐಡಿ ತನಿಖೆಗೆ ವಹಿಸಿತ್ತು. ತನಿಖೆ ಕೂಡ ಹೈಕೋರ್ಟ್ ನಿರ್ದೇಶನದಲ್ಲೇ ನಡೆದಿತ್ತು. ನೇಮಕ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ಅಕ್ರಮ ಎಸಗಿರವುದಾಗಿ ಉಲ್ಲೇಖಿಸಿ ಉದ್ಯೋಗ ವಂಚಿತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸಿಐಡಿ ವರದಿಯಲ್ಲಿ ತಿಳಿಸಿತ್ತು. ವರದಿಯ ಸತ್ಯಾ ಸತ್ಯತೆ ತಿಳಿಯಲು 2013ರ ಸೆ.20ರಂದು ಹೈಕೋರ್ಟ್ ಸತ್ಯಶೋಧನಾ ಸಮಿತಿ ರಚಿಸಿತ್ತು. ಸಮಿತಿಯೂ ಕೆಪಿಎಸ್‌ಸಿ ಅಕ್ರಮ ಎಸಗಿರುವುದಾಗಿ ಉಲ್ಲೇಖಿಸಿ ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ನ್ಯಾಯಾಪೀಠವು ತಪ್ಪಿತಸ್ಥ ಅಧಿಕಾರಿಗಳ ವಿವರ ನೀಡುವಂತೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸಿಐಡಿ ವರದಿ ಆಧಾರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಪರಿಹಾರ ನೀಡುವಂತೆ ಉದ್ಯೋಗ ವಂಚಿತ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ಅರ್ಜಿ ಕೈಗೆತ್ತಿಕೊಂಡ ಪೀಠ, ವಿಚಾರಣೆಯಿಂದ ಹಿಂದೆ ಸರಿದಿರುವುದಾಗಿ ಮುಖ್ಯ ನ್ಯಾಯಮೂರ್ತಿ ಪ್ರಕಟಿಸಿದ್ದಾರೆ.