ಜನ್ಮದಿನ ಬಿಟ್ಟು ಪಕ್ಷ ಕಟ್ಟಲು ಹೊರಟ ಸಿಎಂ
ಹುಟ್ಟು ಹಬ್ಬದ ಆಚರಣೆ ಬದಿಗಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕಾರಿಪುರ...
ಕನ್ನಡಪ್ರಭವಾರ್ತೆ ಬೆಂಗಳೂರು ಆ.11
ಹುಟ್ಟು ಹಬ್ಬದ ಆಚರಣೆ ಬದಿಗಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ತೆರಳಲಿದ್ದಾರೆ...!
ಹೌದು, ಸಿದ್ದರಾಮಯ್ಯ 67ನೇ ಜನ್ಮದಿನ ಮಂಗಳವಾರ. ತನ್ನಿಮಿತ್ತ ಅವರ ಬೆಂಬಲಿಗರು, ಸಚಿವ ಸಂಪುಟದ ಸಹೋದ್ಯೋಗಿಗಳು ಅಧ್ಧೂರಿ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದರು. ಆದರೆ ಇದೆಲ್ಲವನ್ನು ಬದಿಗೊತ್ತಿರುವ ಸಿಎಂ ಮಗಂಳವಾರ ಬೆಳಗ್ಗೆ ಶಿಕಾರಿಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಎಲ್ಲಿಯೂ ಕೇಕ್ ಕಟ್ ಮಾಡುವುದು, ಸಿಹಿ ವಿತರಿಸುವುದು ಸೇರಿದಂತೆ ಸಂಭ್ರಮಾಚರಣೆ ನಡೆಸಕೂಡದು ಎಂದು ಫರ್ಮಾನು ಹೊರಡಿಸಿದ್ದಾರೆ.
ಮೆರವಣಿಗೆ, ಫ್ಲೆಕ್ಸ್: ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬೆಂಬಲಿಗರು ರಾಜಧಾನಿಯಾದ್ಯಂತ ಫ್ಲೆಕ್ಸ್ ಹಾಕಲು ನಿರ್ಧರಿಸಿದ್ದರು. ಆದಕ್ಕೂ ಇದಕ್ಕೂ ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದರು. 'ಒಂದೆಡೆ ನಗರದಲ್ಲಿ ಫ್ಲೆಕ್ಸ್ ತೆಗೆಸುವ ಅಭಿಯಾನಕ್ಕೆ ನಮ್ಮ ಸರ್ಕಾರವೇ ಚಾಲನೆ ನೀಡಿದೆ. ಆದರೆ ನನ್ನ ಭಾವಚಿತ್ರ ಇರುವ ಫ್ಲೆಕ್ಸ್ನ್ನೇ ಹಾಕುವುದು ವಿರೋಧಾಭಾಸಕ್ಕೆ ಕಾರಣವಾಗುತ್ತದೆ' ಎಂದಿದ್ದರು. ಆದರೂ ಅಭಿಮಾನಿಗಳು ಅಲ್ಲಲ್ಲಿ ಫ್ಲೆಕ್ಸ್ ಹಾಕಿರುವುದು ತುಸು ಕೋಪವನ್ನುಂಟು ಮಾಡಿದೆ.
ಅಲ್ಲದೇ ಸಚಿವ ಎಚ್.ಆಂಜನೇಯ ಬೆಂಗಳೂರಿನಲ್ಲಿ ಮೆರವಣಿಗೆ ಆಯೋಜಿಸಿದ್ದರು. ಇದನ್ನೂ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಸಿಎಂ ಹುಟ್ಟೂರಾದ ಮೈಸೂರಿನ ಅದ್ದೂರಿ ಕಾರ್ಯಕ್ರಮಕ್ಕೂ ಕಡಿವಾಣ ಬಿದ್ದಿದೆ. 'ಉಪ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಕಾಂಗ್ರೆಸ್ ಶಕ್ತಿ ಪ್ರದರ್ಶನ ಅನಿವಾರ್ಯ. ಮೂರು ಕ್ಷೇತ್ರಗಳಲ್ಲೂ ಪ್ರಬಲ ಪೈಪೋಟಿ ಇರುವುದರಿಂದ ನಾವೆಲ್ಲರೂ ಖುದ್ದು ಭಾಗವಹಿಸಬೇಕಾಗುತ್ತದೆ. ಇದರಿಂದ ಅವರಿಗೆ ನೈತಿಕ ಬಲ ಬರುತ್ತದೆ. ಎಲ್ಲೆಡೆ ಕಾಂಗ್ರೆಸ್ ಸಾಧನೆ, ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಹುಟ್ಟು ಹಬ್ಬಕ್ಕಿಂತ ಪಕ್ಷದ ಗೆಲುವು ನನ್ನ ಆದ್ಯತೆ' ಎಂದು ಸೂಚನೆ ನೀಡಿದ್ದಾರೆ.