ಹಗರಣಗಳ ಕೂಪ ಕೆಪಿಎಸ್ಸಿ: ವಿಚಾರಣೆಯಿಂದ ಹಿಂದೆ ಸರಿದ ಸಿಜೆ
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಅಕ್ಷರ ಸಹ ಹಗರಣಗಳ ಕೂಪವಾಗಿದೆ. 1998, 99 ಹಾಗೂ 2004ರಲ್ಲಿ..
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಅಕ್ಷರ ಸಹ ಹಗರಣಗಳ ಕೂಪವಾಗಿದೆ. 1998, 99 ಹಾಗೂ 2004ರಲ್ಲಿ ಗೆಜೆಟೆಡ್ ಪ್ರೊಬೆಷನರಿ ನೇಮಕ ಪ್ರಕ್ರಿಯೆಲ್ಲಿ ಅಕ್ರಮಗಳು ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆ. ಅದರೆ ಇದುವರೆಗೂ ಸರ್ಕಾರ ಅಕ್ರಮವಾಗಿ ಆಯ್ಕೆಯಾದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸಂಬಂಧ ಹೈಕೋರ್ಟ್ ಹಲವು ಬಾರಿ ಸರ್ಕಾರಕ್ಕೆ ಛೀಮಾರಿ ಸಹ ಹಾಕಿದೆ.
1998, 99 ಹಾಗೂ 2004ರ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ನಡುವೆ ಸಿಐಡಿ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ 2011ರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
1998ರಲ್ಲಿ 383 ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ 292 ಅಭ್ಯರ್ಥಿಗಳು ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಇನ್ನು 99ರಲ್ಲಿ 191 ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ 95 ಮಂದಿ ಹಾಗೂ 2004ರಲ್ಲಿ 152 ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ 97 ಮಂದಿ ಅಕ್ರಮವಾಗಿ ಆಯ್ಕೆಯಾಗಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಈ ಮಧ್ಯೆ, 1998ರಲ್ಲಿ, 99 ಹಾಗೂ 2004ರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಾಘೇಲ ಅವರ ವಿಭಾಗಿಯ ಪೀಠ ವಿಚಾರಣೆಯಿಂದ ಹಿಂದೆ ಸರಿದಿದೆ. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಅಕ್ರಮ ನೇಮಕ ವಿಷಯದಲ್ಲಿ ಅವಿಶ್ವಾಸ ವ್ಯಕ್ತಪಡಿಸಿದ ಅನಾಮಧೇಯ ಪತ್ರಗಳು ತಮಗೆ ಬಂದಿರುವುದರಿಂದ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ವಿಚಾರಣೆಯಿಂದ ಹಿಂದೆ ಸರಿದು ಅರ್ಜಿಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಿದೆ.
ಘಟನೆ ವಿವರ: ಕೆಪಿಎಸ್ಸಿ 1998, 99 ಹಾಗೂ 2004ರಲ್ಲಿ ಅಕ್ರಮ ಎಸಗಿರುವುದಾಗಿ ಖಲೀಲ್ ಅಹಮದ್, ಇತರೆ 24 ಜನ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಪ್ರಕಣರವನ್ನು ಸಿಐಡಿ ತನಿಖೆಗೆ ವಹಿಸಿತ್ತು. ತನಿಖೆ ಕೂಡ ಹೈಕೋರ್ಟ್ ನಿರ್ದೇಶನದಲ್ಲೇ ನಡೆದಿತ್ತು. ನೇಮಕ ಪ್ರಕ್ರಿಯೆಯಲ್ಲಿ ಕೆಪಿಎಸ್ಸಿ ಅಕ್ರಮ ಎಸಗಿರವುದಾಗಿ ಉಲ್ಲೇಖಿಸಿ ಉದ್ಯೋಗ ವಂಚಿತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸಿಐಡಿ ವರದಿಯಲ್ಲಿ ತಿಳಿಸಿತ್ತು. ವರದಿಯ ಸತ್ಯಾ ಸತ್ಯತೆ ತಿಳಿಯಲು 2013ರ ಸೆ.20ರಂದು ಹೈಕೋರ್ಟ್ ಸತ್ಯಶೋಧನಾ ಸಮಿತಿ ರಚಿಸಿತ್ತು. ಸಮಿತಿಯೂ ಕೆಪಿಎಸ್ಸಿ ಅಕ್ರಮ ಎಸಗಿರುವುದಾಗಿ ಉಲ್ಲೇಖಿಸಿ ಹೈಕೋರ್ಟ್ಗೆ ವರದಿ ಸಲ್ಲಿಸಿತ್ತು. ನ್ಯಾಯಾಪೀಠವು ತಪ್ಪಿತಸ್ಥ ಅಧಿಕಾರಿಗಳ ವಿವರ ನೀಡುವಂತೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸಿಐಡಿ ವರದಿ ಆಧಾರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಪರಿಹಾರ ನೀಡುವಂತೆ ಉದ್ಯೋಗ ವಂಚಿತ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ಅರ್ಜಿ ಕೈಗೆತ್ತಿಕೊಂಡ ಪೀಠ, ವಿಚಾರಣೆಯಿಂದ ಹಿಂದೆ ಸರಿದಿರುವುದಾಗಿ ಮುಖ್ಯ ನ್ಯಾಯಮೂರ್ತಿ ಪ್ರಕಟಿಸಿದ್ದಾರೆ.