ಸುದೀಪ್, ರಮೇಶ್, ಗಣೇಶ್ ನಿಷೇಧಕ್ಕೆ ನಿರ್ಮಾಪಕರ ಆಗ್ರಹ
'ಬಿಗ್ ಬಾಸ್' ಮನೆಯಲ್ಲಿ ಭಾರಿ ಸುದ್ದಿ ಮಾಡುತ್ತಿರುವ ನಟ ಸುದೀಪ್, 'ವೀಕೆಂಡ್ ವಿತ್ ರಮೇಶ್''ನೊಂದಿಗೆ ವೀಕೆಂಡ್...
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಭಾರಿ ಸುದ್ದಿ ಮಾಡುತ್ತಿರುವ ನಟ ಸುದೀಪ್, 'ವೀಕೆಂಡ್ ವಿತ್ ರಮೇಶ್'ನೊಂದಿಗೆ ವೀಕೆಂಡ್ ಕಳೆಯುತ್ತಿರುವ ರಮೇಶ್ ಅರವಿಂದ್ ಹಾಗೂ 'ಸೂಪರ್ ಮೀನಿಟ್'ನೊಂದಿಗೆ ಕಿರುತೆರೆಗೆ ಕಾಲಿಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ನಿಷೇಧಿಸಬೇಕು ಎಂದು ಚಲನಚಿತ್ರ ನಿರ್ಮಾಪಕ ಸಂಘ ಪರೋಕ್ಷವಾಗಿ ಆಗ್ರಹಿಸಿದೆ.
ಸದ್ಯ ಸಿನಿಮಾಗಳಿಂದ ದೂರ ಉಳಿದು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಈ ಸ್ಟಾರ್ ನಟರು ನಡೆಸಿ ಕೊಡುವ ಕಾರ್ಯಕ್ರಮಗಳಿಂದ ನಿರ್ಮಾಪಕರಿಗೆ ಹಾಗೂ ವಿತರಕರಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿರುವ ನಿರ್ಮಾಪಕರ ಸಂಘ, ಈ ಕುರಿತು ಚರ್ಚೆ ನಡೆಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದೆ. ಅಲ್ಲದೆ ಈ ಕುರಿತು ಸೋಮವಾರ ನಡೆದ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಸ್ಟಾರ್ ನಟರು ಸಿನಿಮಾದಿಂದ ದೂರ ಉಳಿಯುವುದರಿಂದ ಉದ್ಯಮದ ಏಳಿಗೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಅವರ ಸಿನಿಮಾಗಳನ್ನು ನಿಷೇಧಿಸುವ ಕುರಿತು ಚರ್ಚೆ ನಡೆಯಿತು ಎನ್ನಲಾಗಿದೆ.
ವಾರಾಂತ್ಯದಲ್ಲಿ ಸ್ಟಾರ್ ನಟರು ಕಿರುತೆರೆ ಕಾರ್ಯಕ್ರಮಗಳನ್ನು ನಡೆಸಿಕೊಡುವುದರಿಂದ ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬರುತ್ತಿಲ್ಲ. ಇದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆ. ಈ ಸಂಬಂಧ ಕಿರುತೆರೆಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ನಟರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಇನ್ನು ಸಂಘದ ದೂರಿಗೆ ಹಲವು ನಿರ್ಮಾಪಕರು ಧ್ವನಿಗೂಡಿಸಿದ್ದು, ಸ್ಟಾರ್ ನಟರಿಗೆ ಕಿರುತೆರೆಯಲ್ಲಿ ಕಾರ್ಯಕ್ರಮ ನಡೆಸಿಕೊಡದಂತೆ ನಿಷೇಧ ಹೇರಬೇಕು, ಇಲ್ಲವೇ ಚಿತ್ರರಂಗದಿಂದ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
ನಿರ್ಮಾಪಕರ ಈ ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಟ ರಮೇಶ್ ಅವರು, ನಮಗೂ ಸ್ವಾತಂತ್ರ್ಯ ಇದೆ. ಅಲ್ಲದೆ ನಾನು ಒಬ್ಬ ನಟನಾಗಿ, ನಿರೂಪಕನಾಗಿ, ನಿರ್ದೇಶಕನಾಗಿ, ರೇಡಿಯೋ ಜಾಕಿಯಾಗಿ ಗುರಿತಿಸಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.
ವಾರಾಂತ್ಯ ದಿನಗಳಾದ ಶನಿವಾರ ಮತ್ತು ಭಾನುವಾರ ಈ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು, ಬಿಗ್ಬಾಸ್ನಲ್ಲಿ ಸುದೀಪ್, ಟೈಮ್ನಲ್ಲಿ ಗಣೇಶ್ ಹಾಗೂ ವೀಕೆಂಡ್ ವಿತ್ ರಮೇಶ್ನಲ್ಲಿ ರಮೇಶ್ ಅರವಿಂದ್ ಭಾಗವಹಿಸುತ್ತಿದ್ದು, ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಸಿನಿಮಾ ಪ್ರದರ್ಶನಕ್ಕೆ ಪ್ರೇಕ್ಷಕರು ಬರುವುದು ಕಡಿಮೆಯಾಗಿದೆ. ಇದರಿಂದ ನಿರ್ಮಾಪಕರಿಗೆ ಅಪಾರ ನಷ್ಟವಾಗುತ್ತಿದೆ ಎನ್ನುವುದು ನಿರ್ಮಾಪಕರ ವಾದ.