ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಆಲಮೇಲ ಬಂದ್
ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲಮೇಲದಲ್ಲಿರುವ
ಬಿಜಾಪುರ: ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲಮೇಲದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಶತಿ ಶಾಲೆಯ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಘಟನೆ ಖಂಡಿಸಿ ಆಲಮೇಲ ಪಟ್ಟಣದಲ್ಲಿ ಇಂದು ಸ್ವಯಂ ಘೋಷಿತ ಬಂದ್‌ಗೆ ಕರೆ ನೀಡಲಾಗಿದೆ.
ಪಟ್ಟಣದ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಕನ್ನಡಪರ ಸಂಘಟನೆಗಳು ಸೇರಿದಂತೆ ವಿದ್ಯಾರ್ಥಿ ಸಂಘಟೆಗಳು ಸಹ ಬಂದ್‌ಗೆ ಬಂಬಲ ನೀಡಿದ್ದು, ಸ್ವಯಂ ಘೋಷಿತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಶಾಂತಿಯುತವಾಗಿ ನಡೆಯುತ್ತಿದ್ದು, ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗ ವರದಿಯಾಗಿಲ್ಲ.
ವಸತಿ ಶಾಲೆಯ ಅಡಿಗೆ ಸಹಾಯಕ ವಿಜಕುಮಾರ್ ಎಂಚಮಾನೆ ಎಂಬ ಕಾಮುಕ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು. ಅಲ್ಲದೆ ಕಾಮುಕ ವಿಜಯಕುಮಾರ್ ಹಲವು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿ, ಬಳಿಕ ಅವರಿಗೆ ಗರ್ಭನಿರೋಧ ಮಾತ್ರೆ ನೀಡಿರುವ ಆಘಾತಕಾರಿ ಸಂಗತಿಯೂ ಹೊರಬಂದಿತ್ತು.
ವಸತಿ ಶಾಲೆಯ ವಾರ್ಡನ್ ಜ್ಯೋತಿ ಅವರ ಸಹಕಾರದಿಂದಲೇ ವಿಜಯಕುಮಾರ್ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎಂದು ಶಾಲೆಯ ವಿದ್ಯಾರ್ಥಿನಿಯರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಜ್ಯೋತಿಯನ್ನು ಹಾಗೂ ಪ್ರಮುಖ ಆರೋಪಿ ವಿಜಯಕುಮಾರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ವಿದ್ಯಾರ್ಥಿನಿಯರಿಂದ ಕಾಲು ಒತ್ತಿಸಿಕೊಳ್ಳುತ್ತಿದ್ದ ಕಾಮುಕ: ತನ್ನ ಅಡುಗೆ ಕೆಲಸ ಮುಗಿದ ಮೇಲೆಯೂ ವಸತಿ ಶಾಲೆಯಲ್ಲಿ ಇರುತ್ತಿದ್ದ ವಿಜಯಕುಮಾರ್ ಮಕ್ಕಳಿಂದ ಕಾಲು, ಕೈ ಒತ್ತಿಸಿಕೊಳ್ಳುತ್ತಿದ್ದ. ಇದಕ್ಕೆ ಮಕ್ಕಳು ನಿರಾಕರಿಸಿದರೆ, ಅವರ ಮೇಲೆ ಹಲ್ಲೆ ನಡೆಸುತ್ತಿದ್ದ. ಶಾಲೆಯ ವಿದ್ಯಾರ್ಥಿನಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಿ, ಕೆಲವು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ತಿಳಿದುಬಂದಿದೆ.