ಪಂಚಭೂತಗಳಲ್ಲಿ 'ಅನಂತ' ಲೀನ
ನಿನ್ನೆ ನಿಧನರಾಗಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಇಂದು ಸಂಜೆ ಪಂಚಭೂತಗಳಲ್ಲಿ ಲೀನವಾದರು.
ಬೆಂಗಳೂರು: ನಿನ್ನೆ ನಿಧನರಾಗಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಇಂದು ಸಂಜೆ ಪಂಚಭೂತಗಳಲ್ಲಿ ಲೀನವಾದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ 'ಅನಂತ'ನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಾಧ್ವ ಸಂಪ್ರದಾಯದಂತೆ ವೇದಘೋಷಗಳನ್ನು ಪಠಿಸುವ ಮೂಲಕ ಅನಂತಮೂರ್ತಿಯವರ ಚಿತೆಗೆ ಪುತ್ರ ಶರತ್ ಅಗ್ನಿ ಸ್ಪರ್ಶ ಮಾಡಿದರು.
ವಿಧಿವಿಧಾನಕ್ಕೂ ಮುನ್ನ ಅಗಲಿದ ಚೇತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಅಂಬರೀಶ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕ ಮುನಿರತ್ನ, ಯು.ಟಿ. ಖಾದರ್. ಸಚಿವೆ ಉಮಾಶ್ರೀ ಡಾ. ಮಹದೇವಪ್ಪ ಅವರು ಅಂತಿಮ ನಮನ ಸಲ್ಲಿಸಿದರು.
ಅನಂತಮೂರ್ತಿಯವರಿಗೆ ಪೊಲೀಸ್ ಬ್ಯಾಂಡ್ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಗಾಳಿಯಲ್ಲಿ ಕುಶಾಲತೋಪು ಹಾರಿಸಿ ಮೂಲಕ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಬಳಿಕ 2 ನಿಮಿಷ ಮೌನಾಚರಣೆ ಮೂಲಕ ಅನಂತಮೂರ್ತಿಯವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಮಾಧಿ ಇರುವ ಕಲಾಗ್ರಾಮದಲ್ಲಿ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನವನ್ನು ನಡೆಸಲಾಯಿತು.