ಡಿಸಿಎಂ ಹುದ್ದೆ ದ್ವಂದ್ವ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ...
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಆದರೆ ಇದಕ್ಕೂ ಮೊದಲು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ ಅವರನ್ನು ಸಂಪುಟದಲ್ಲಿ ಒಳಗೊಳ್ಳಿಸಿಕೊಳ್ಳುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಈ ಮೂಲಕ ಡಾ.ಪರಮೇಶ್ವರ ಅವರ ಉಪಮುಖ್ಯಮಂತ್ರಿ ಸ್ಥಾನದ ಕನಸು ಇನ್ನೊಂದು ತಿರುವು ಪಡೆದುಕೊಂಡಿದೆ. ಇದುವರೆಗೆ ಈ ಜವಾಬ್ದಾರಿ ಹೈಕಮಾಂಡ್ ಹೆಗಲಿಗೆ ದಾಟಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಂಗಣಕ್ಕೆ ಪರಮೇಶ್ವರ್ ಪ್ರಶ್ನೆಯನ್ನು ರವಾನಿಸಲಾಗಿದ್ದು, ಸಮನ್ವಯ ಸಮಿತಿ ಸಭೆ ಹಲವು ಕುತೂಹಲಕ್ಕೆ ಕಾರಣವಾಗಿದೆ.
ಸಮನ್ವಯ ಸಮಿತಿ ಸಭೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ದಿಗ್ವಿಜಯ್ಸಿಂಗ್ ಕಾರ್ಯಕರ್ತರು, ಶಾಸಕರು ಹಾಗೂ ಸಚಿವರ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವುದಿಲ್ಲ. ಸರ್ಕಾರ ಹಾಗೂ ಪಕ್ಷದ ವಿದ್ಯಮಾನಗಳ ಬಗ್ಗೆ ಮಾತ್ರ ವಿಮರ್ಶೆ ನಡೆಯುತ್ತದೆ ಎಂದು ಹೇಳಿದರು.
ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ತಂಗಿರುವ ದಿಗ್ವಿಜಯ್ಸಿಂಗ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಗೃಹ ಸಚಿವ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಸದಸ್ಯರಾದ ವೀರಣ್ಣ ಮತ್ತೀಕಟ್ಟಿ, ಮೋಟಮ್ಮ, ಶಾಸಕ ಮುನಿರತ್ನ, ಡಾ.ಸುಧಾಕರ್ ಮೊದಲಾದವರು ಭೇಟಿ ಮಾಡಿದರು. ನಿಗಮ-ಮಂಡಳಿಗಾಗಿ ಬೇಡಿಕೆಗಳ ಪಟ್ಟಿಯೇ ಸಲ್ಲಿಕೆಯಾಗಿದೆ.
ವಿಸ್ತರಣೆ ಸಾಕು: ಸದ್ಯಕ್ಕೆ ನಮ್ಮ ಮುಂದೆ ಸಂಪುಟ ವಿಸ್ತರಣೆ ಮಾಡುವ ಚಿಂತನೆ ಮಾತ್ರವಿದ್ದು, ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದೆ. ನಾಲ್ಕನ್ನೂ ಭರ್ತಿ ಮಾಡುತ್ತೇವೆ. ಜತೆಗೆ ನಿಗಮ-ಮಂಡಳಿ ನೇಮಕವೂ ನಡೆಯುತ್ತದೆ. ಸಮನ್ವಯ ಸಮಿತಿ ಸಭೆಯಲ್ಲಿ ದಿಗ್ವಿಜಯ್ ಸಿಂಗ್ ಅವರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸಭೆ ಬಳಿಕ ದೆಹಲಿಗೆ ತೆರಳುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಒಳಗೊಂಡೇ ಸಂಪುಟ ವಿಸ್ತರಣೆ ನಡೆಸುತ್ತೀರಾ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ.