ಕೋಟೆ ಕಟ್ಟಿ ಮೆರೆದವ್ರೆಲ್ಲ ಏನಾದರು?
ದಶಕದಲ್ಲೇ ಔನ್ನತ್ಯ, ಅವನತಿ ಎರಡನ್ನೂ ಕಂಡ ರೆಡ್ಡಿ ಬಳಗ, ಪೇದೆಯ ಮಕ್ಕಳಾಗಿ...
ದಶಕದಲ್ಲೇ ಔನ್ನತ್ಯ, ಅವನತಿ ಎರಡನ್ನೂ ಕಂಡ ರೆಡ್ಡಿ ಬಳಗ, ಪೇದೆಯ ಮಕ್ಕಳಾಗಿದ್ದರೂ ಸಚಿವ ಸ್ಥಾನಕ್ಕೇರಿದರು
ಬಳ್ಳಾರಿ: ಒಂದು ದಶಕದಲ್ಲಿಯೇ ಬಡತನ, ಸಿರಿತನ. 2004ರಿಂದ ರಾಜಕೀಯ, ಗಣಿಗಾರಿಕೆಯ ಉದ್ಯಮದಲ್ಲಿ ರೆಡ್ಡಿ ಸಹೋದರರು, ಶ್ರೀರಾಮುಲು ಪ್ರಾಬಲ್ಯ ಮೆರೆದು 2008ರಲ್ಲಿ ರಾಜ್ಯದ ಅಧಿಕಾರ, ಆಡಳಿತದ ಚುಕ್ಕಾಣಿ ಹಿಡಿದು, ತಮಗೆ ಬೇಕಾದ ಅಧಿಕಾರಿಗಳ ವರ್ಗಾವಣೆ ಮಾಡಿಸಿ, ಅಧಿಕಾರಿಗಳೇ ಮನೆ ಕದ ತಟ್ಟುವಂತೆ ಮಾಡಿ, ಸಿಎಂಗಿಂತ ತಮ್ಮ ಮಾತು ಮಿಗಿಲಾಗುವಂತೆ ಆಡಳಿತ ನಡೆಸಿ ಜನತೆಯನ್ನು ಹುಬ್ಬೇರಿಸುವಂತೆ ಮಾಡಿದ್ದರು. ಆದರೆ 2011ರಲ್ಲಿ ಏಕಾಏಕಿ ಅಧಿಕಾರ ಕಳೆದುಕೊಂಡು, 2014ರ ಹೊತ್ತಿಗೆ ಸಂಸದ ಸ್ಥಾನ ಒಂದನ್ನು ಬಿಟ್ಟು, ಅಧಿಕಾರ ಹಣಬಲ ಹಾಗೂ ಜನಬಲವೂ ದೂರಾಗಿದೆ.
ಹಿಂದೆ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿತ್ತು. ಎಸ್ಪಿ, ಡಿಸಿ ಹಾಗೂ ಉನ್ನತ ಅಧಿಕಾರಿಗಳೆಲ್ಲ ಅವರಿಗೆ ಮುಜರೆ ಸಲ್ಲಿಸುತ್ತಿದ್ದರು. ಈಗ ಸ್ಥಿತಿಯೇ ಬದಲಾಗಿದೆ. ಕೇವಲ ಹತ್ತು ವರ್ಷಗಳಲ್ಲಿ ಇಂತಹ ಬದಲಾವಣೆ. ಹಣಬಲ, ಅಧಿಕಾರ ಬಲದ ಹಿಂದೆ ಹೋಗಿ ಏಳಿಗೆಗೆ ಕಾರಣರಾದವರನ್ನು ಮರೆತದ್ದು, ಹಲವು ನಿರ್ಧಾರದಲ್ಲಿ ಹಿಂಬಾಲಕ ಅಭಿಪ್ರಾಯ ನಿರ್ಲಕ್ಷ್ಯಿಸಿ ತಮ್ಮ ಮೂಗಿನ ನೇರಕ್ಕೆ ನಡೆದದ್ದು, ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದ ಪರಿಸ್ಥಿತಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರದ್ದು.
ಅಧಿಕಾರದಿಂದ ಜೈಲಿನವರೆಗೆ
ಲೋಕಾಯುಕ್ತ ವರದಿಯಿಂದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಸಚಿವಸ್ಥಾನ ಕಳೆದುಕೊಂಡರು. ನಂತರ ಜನಾರ್ದನ ರೆಡ್ಡಿ ಜೈಲಿಗೆ ಹೋದರು. ಇನ್ನು ಬೇಲ್ ಡೀಲ್ ಆರೋಪದಲ್ಲಿ ಜಿ. ಸೋಮಶೇಖರ ರೆಡ್ಡಿ, ಸುರೇಶ್ಬಾಬು ಕೆಲ ದಿನ ಜೈಲು ವಾಸ ಅನುಭವಿಸಿದರು. ಬೇಲೇಕೇರಿ ಅದಿರು ಆರೋಪ ಪ್ರಕರಣದಲ್ಲಿ ಕಂಪ್ಲಿ ಶಾಸಕ ಟಿ.ಎಚ್.ಸುರೇಶ್ಬಾಬು, ಶ್ರೀರಾಮುಲು ಆಪ್ತ ಕೂಡ್ಲಿಗೆ ಶಾಸಕ ಬಿ.ನಾಗೇಂದ್ರ ಜೈಲು ಪಾಲಾದರು. ಇನ್ನು ರೆಡ್ಡಿ ಸಹೋದರರಲ್ಲಿ ಒಬ್ಬರಾದ ಕರುಣಾಕರ ರೆಡ್ಡಿ ಸಚಿವ ಸ್ಥಾನ ಹೋದಾಗಿನಿಂದಲೂ ತಮ್ಮ ಇಬ್ಬರು ಸಹೋದರರಿಂದ ಅಂತರ ಕಾಯ್ದುಕೊಂಡರು, 2013ರಲ್ಲಿ ಹರಪನಹಳ್ಳಿಯಲ್ಲಿ ಸ್ಪರ್ಧಿಸಿ ಸೋಲು ಕಂಡರು.
ಪೇದೇ ಮಕ್ಕಳಾಗಿ ಸಚಿವ ಸ್ಥಾನದವರೆಗೆ
ಪೊಲೀಸ್ ಪೇದೆಯ ಮಕ್ಕಳಾಗಿ ಎನ್ನೋಬಲ್ ಚಿಟ್ಫಂಡ್ ಆರಂಭ ಮಾಡಿ, ನಂತರ ಗಣಿಗಾರಿಕೆ ಮೂಲಕ ಕೋಟ್ಯಾಧಿಪತಿಗಳಾಗಿ ರಾಜ್ಯ ಸರ್ಕಾರವನ್ನು ಕೈಯಲ್ಲಿ ಇಟ್ಟುಕೊಳ್ಳುವವರೆಗೆ ಸಾಗಿದ್ದು ಮಾತ್ರ ರೋಚಕ. 1995ರಲ್ಲಿ ಶ್ರೀರಾಮುಲು ಕಾಂಗ್ರೆಸ್ ವತಿಯಿಂದ ನಗರಸಭೆಗೆ ಆಯ್ಕೆಯಾಗಿದ್ದು, ಇವರ ರಾಜಕೀಯ ಎಂಟ್ರಿಯ ಮೊದಲನೆಯ ಹೆಜ್ಜೆ. ನಂತರ ಬಿಜೆಪಿಯಲ್ಲಿ ಕಾಣಿಸಿಕೊಂಡು 1999ರಲ್ಲಿ ಸುಷ್ಮಾ ಸ್ವರಾಜ್ ಲೋಕಸಭೆಯಲ್ಲಿ ಸ್ಪರ್ಧಿಸಿದಾಗ ಅವರ ಸಖ್ಯ ಬೆಳೆಯಿತು. 2004ರಲ್ಲಿ ಗಣಿ ಉದ್ಯಮದಲ್ಲಿ ಅಗರ್ಭ ಶ್ರೀಮಂತರಾಗಲು ಕಾರಣವಾಯಿತು.
ಅಲ್ಲದೆ, ಲೋಕಸಭೆಯಲ್ಲಿ ಕರುಣಾಕರ ರೆಡ್ಡಿ, ಶಾಸಕರಾಗಿ ಶ್ರೀರಾಮುಲು ಗೆಲುವು ಸಾಧಿಸಿ ರಾಜಕೀಯ ರುಚಿ ಕಂಡರು. ಬಳ್ಳಾರಿ ಮಟ್ಟಿಗೆ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಹೆಗ್ಗಳಿಕೆ ಹಾಗೂ (ಕು)ಖ್ಯಾತಿಗೂ ಕಾರಣರಾಗಿದ್ದರು. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗುವ ಮೂಲಕ ಇಡೀ ರಾಜ್ಯದಲ್ಲಿಯೇ ಮಿಂಚಿನ ಸಂಚಲನ ಮೂಡಿಸಿದರು. ಒಂದೇ ಜಿಲ್ಲೆಯಿಂದ ಮೂವರು ಸಚಿವರು, ಕೆಎಂಎಫ ಅಧ್ಯಕ್ಷರಾಗಿ ಹಣಬಲದೊಂದಿಗೆ, ಅಧಿಕಾರ ಬಲದಲ್ಲಿ ಪ್ರಾಬಲ್ಯ ಮೆರೆದರು. ಅಂದಿನ ಬಿಜೆಪಿ ಸರ್ಕಾರದಲ್ಲಿ ಇವರ ಮಾತೇ ವೇದವಾಕ್ಯ. ಬಳ್ಳಾರಿ ಮಟ್ಟಿಗೆ ಇವರು ಮನೋಭಾವನೆ ಒಂದು ಕಡೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಕಾರವಾಗಿ, ಕೊನೆಗೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ತಮ್ಮ ಅಕ್ರಮ ಗಣಿಕಾರಿಗೆ ಕುರಿತಾದ ವರದಿಯಲ್ಲಿ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಕರೆದರು. ಇದನ್ನು ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡವು.
ಕೈ ಸುಟ್ಟುಕೊಂಡ ಶ್ರೀರಾಮ
ಲೋಕಾಯುಕ್ತ ವರದಿಯಿಂದ ಸಚಿವ ಸ್ಥಾನ ಕೈತಪಪ್ಪಿ, ಶ್ರೀರಾಮುಲು ಸ್ವಾಭಿಮಾನಕ್ಕೂ ದಕ್ಕೆಯಾಗಿತ್ತು. ಅಧಿಕಾರದಲ್ಲಿದಾಗ ಬಹುತೇಕ ಸಚಿವರು, ಶಾಸಕರು ಇವರ ಮನೆಯ ಕದ ತಟ್ಟುತ್ತಿದ್ದ ಹಿನ್ನೆಲೆಯಲ್ಲಿ ಪಕ್ಷ ಬಿಟ್ಟಾಗಲೂ ನಮ್ಮ ಹಿಂದೆ ಬರುವವರೆಂಬ ಹುಂಬುತನದಿಂದ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಹುಟ್ಟು ಹಾಕಿ ಕೈ ಸುಟ್ಟುಕೊಂಡರು. ಮತ್ತೆ ಬಿಜೆಪಿ ಸೇರಿ ಲೋಕಸಭೆಯಲ್ಲಿ ಗೆದ್ದರು. ಈಗ ವಿಧಾನಸಭೆ ಉಪ ಚುನಾವಣೆಯಲ್ಲಿ ಅವರ ಅಭ್ಯರ್ಥಿ ಹೀನಾಯ ಸೋಲು ಕಂಡರು. ಈ ಮೂಲಕ ನಿಮ್ಮ ನಿರ್ಧಾರವೇ ನಮ್ಮ ಅಭಿಮತವಲ್ಲ ಎಂಬ ಸಂದೇಶವನ್ನು ಮತದಾರರು ನೀಡಿದ್ದಾರೆ.
-ಶಶಿಧರ ಮೇಟಿ