ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ: ಗಣತಿಗೆ ನಿರ್ಧಾರ

ರಾಜ್ಯದಲ್ಲಿರುವ ಖಾಸಗಿ ಸಂಸ್ಥೆಗಳು, ಐಟಿಬಿಟಿ..

Vishwanath S
Updated On : 30 Aug 2014, 11:20 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.28
ರಾಜ್ಯದಲ್ಲಿರುವ ಖಾಸಗಿ ಸಂಸ್ಥೆಗಳು, ಐಟಿಬಿಟಿ ಸೇರಿದಂತೆ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗ ಪ್ರಮಾಣದ ಬಗ್ಗೆ ಪರಿಶೀಲಿಸಲು ಸರ್ಕಾರ ಮುಂದಾಗಿದೆ.
ಐಟಿಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತಿರುವ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಲಾಗಿದ್ದು, ಅದರ ಬಗ್ಗೆಯೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಸರೋಜಿನಿ ಮಹಿಷಿ ವರದಿ ಪ್ರಕಾರ ಖಾಸಗಿ ರಂಗದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಲಭಿಸುತ್ತಿಲ್ಲ. ಜತೆಗೆ ಐಟಿಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತಿದೆ. ಇದು ಗಂಭೀರ ವಿಚಾರ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಸಂಬಂಧ ವರದಿ ತಯಾರಿಸುವಂತೆ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕೆಗೆ ಸೂಚನೆ ನೀಡಿರುವ ಸಿಎಂ ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದ ಸಂಸ್ಧೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ವಸತಿ ಸಹಾಯಧನ ಮನ್ನಾ, ಕಾರ್ಪೊರೇಟ್ ಸಹಭಾಗಿತ್ವದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ, ನ್ಯಾ.ಮೂ. ಸೋಮಶೇಖರ್ ಆಯೋಗದ ವರದಿ ಪುನರ್ ಪರಿಶೀಲನೆ ಸೇರಿದಂತೆ ಮಹತ್ವದ ಆಡಳಿತಾತ್ಮಕ ವಿಚಾರ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಕಡನ ವಿಲೇ ವಿಳಂಬ: ಸಿಎಂ ಗರಂ
ಕಡತ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡತ ವಿಲೇವಾರಿ ಮಾಡಲು ಸಚಿವರು ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ.

ಪ್ರಮುಖ ತೀರ್ಮಾನಗಳು
* ಆಶ್ರಯ ಸೇರಿದಂತೆ ವಿವಿಧ ವಸತಿ ಯೋಜನೆ ಅನ್ವಯ 10.84 ಲಕ್ಷ ಫಲಾನುಭವಿಗಳಿಗೆ ನೀಡಿದ್ದ ಸಹಾಯಧನವನ್ನು ನನ್ನ ಮನೆ ನನ್ನ ಸ್ವತ್ತು ಯೋಜನೆ ಅನ್ವಯ ಮನ್ನಾ ಮಾಡಲು ನಿರ್ಧಾರ. ರು. 1458 ಕೋಟಿ ಅಸಲು ರು. 1030 ಕೋಟಿ ಬಡ್ಡಿ ಸೇರಿದಂತೆ ಒಟ್ಟು ರು. 2488 ಕೋಟಿ ಮನ್ನಾ.
* ಹುಣಸೂರು ಪುರಸಭೆಯಲ್ಲಿ ನಗರಸಭೆಯಾಗಿ, ಗುರುಮಿಠಕಲ್ ಮತ್ತು ನಾಗಮಂಗಲ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಪರಿವರ್ತಿಸಲು ಒಪ್ಪಿಗೆ.
* 2010ರ ಕೆಎಎಸ್ ಪ್ರೋಬೇಷನರಿ ನೇಮಕ ಆಯ್ಕೆ ಪಟ್ಟಿ ಪುನರ್ ಪರಿಶೀಲನೆ ಇಲ್ಲ. ಆ ಪಟ್ಟಿಯಲ್ಲಿ ಆಯ್ಕೆಗೊಂಡ ಒಬ್ಬ ಅಭ್ಯರ್ಥಿ ಕೆಎಟಿ ಮೊರೆ ಹೋದ ಹಿನ್ನೆಲೆಯಲ್ಲಿ ಪ್ರಸ್ತುತ ಅವರು ನಿಭಾಯಿಸುತ್ತಿರುವ ಡಿವೈಎಸ್‌ಪಿ ಹುದ್ದೆ ಬದಲು ಸಹಾಯಕ ಆಯುಕ್ತ ಹುದ್ದೆ ನೀಡಲು ಒಪ್ಪಿಗೆ. ಉಳಿದಂತೆ ಯಥಾಸ್ಥಿತಿ ಕಾಪಾಡಲು ನಿರ್ಧಾರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement