ಹಾಡಿವಾಸಿಗಳ ತ್ರಿಶಂಕು ಪಾಡು
ಹೋಗದಿರಿ ಸೋದರರೇ, ಬಂಧುಗಳೇ ಮರೆಯದಿರಿ ಎಂಬುದು ತಾತ-ಮುತ್ತಾಂದಿರ...
ಮೈಸೂರು: ಹೋಗದಿರಿ ಸೋದರರೇ, ಬಂಧುಗಳೇ ಮರೆಯದಿರಿ ಎಂಬುದು ತಾತ-ಮುತ್ತಾಂದಿರ ಕಾಲದಿಂದಲೂ ಅಲ್ಲಿಯೇ ಬದಕುತ್ತಿರುವ ಜನರ ಭಾವನಾತ್ಮಕ ಮಾತುಗಳಾದರೆ, ಇಲ್ಲಿ ಮೂಲ ಸೌಲಭ್ಯವಿಲ್ಲ. ಆನೆಗಳ ಕಾಟ, ಇಲ್ಲಿ ಇರುವುದೋ ಬಿಡುವುದೋ ನೀವೇ ಹೇಳಿ ಎಂಬುದು ಇನ್ನೊಂದು ಗುಂಪಿನ ಪ್ರಶ್ನೆ.
ಇದು ನಾಗರಹೊಳೆ ಅಭಯಾರಣ್ಯದ ನಡುವೆ ಕುಟ್ಟಾ ಗೇಟ್ ಕಡೆಗಿರುವ ವೀರಾಜಪೇಟೆ ತಾಲೂಕಿನ ಗೋಣಿಗದ್ದೆ ಗ್ರಾಮಸ್ಥರ ತೊಳಲಾಟ.
ಗೋಣಿಗೆದ್ದ ಹಾಡಿಯಲ್ಲಿ ತಲೆತಲಾಂತರದಿಂದ ಜೇನು ಕುರುಬರ 46 ಕುಟುಂಬ ವಾಸವಿದೆ. ಇಲ್ಲಿ ಮೂಲ ಸೌಲಭ್ಯವಿಲ್ಲ, ಜೀಪು ಸಂಚಾರಕ್ಕೆ ಅರಣ್ಯ ಇಲಾಖೆ ನಿರ್ಮಿಸಿಕೊಂಡಿರುವ ಮಣ್ಣು ರಸ್ತೆ ಇವರಿಗೂ ದಾರಿ. ಆಶ್ರಮ ಶಾಲೆ ಇದ್ದು, ಆಸ್ಪತ್ರೆ, ವಿದ್ಯುತ್ ಇಲ್ಲ. ಅನಾರೋಗ್ಯವಾದರೆ ತುಂಬಾ ಕಷ್ಟ, ಕೆಲವೊಮ್ಮೆ ಮಾನವೀಯತೆಯಿಂದ ಅರಣ್ಯ ಇಲಾಖೆಯವರೇ ಜೀಪಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಿದೆ. ಜತೆಗೆ ಕಾಡುಪ್ರಾಣಿಗಳ ಭಯ ಬೇರೆ .
ಮನೆಗಳಿಗೆ ಬರುತ್ತೆ
ಇಲ್ಲಿ ಆನೆಗಳು ಏಕಾಏಕಿ ಮನೆ ಕಡೆ ನುಗ್ಗುತ್ತದೆ. ಆಗ ಬೆಂಕಿ ತೋರಿಸಿ ಓಡಿಸಲಾಗುತ್ತದೆ. ಇದುವರೆಗೆ ಇಂಥ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಆದರೆ ಆ ಮಾರ್ಗದಲ್ಲಿ ಸಂಚರಿಸುವಾಗ ನಾಲ್ವರನ್ನು ಬಲಿ ತೆಗೆದುಕೊಂಡಿವೆ ಎಂದು ಹಾಡಿಯ ಹಿರಿಯ ಬಸಪ್ಪ ಹೇಳುತ್ತಾರೆ.
ನಾಗರಹೊಳೆ ಅಭಯಾರಣ್ಯದಲ್ಲಿ ಇರುವ ಬಹುತೇಕ ಹಾಡಿಗಳ ಜನರು ಕಾಡಿನಿಂದ ನಾಡಿಗೆ ಬಂದಿದ್ದಾರೆ. ನಾಗಾಪುರ, ಹೆಬ್ಬಳ್ಳ, ಸೊಳ್ಳೇಪುರ, ಶೆಟ್ಟಳ್ಳಿ ಮೊದಲಾದ ಕಡೆ ನಿರ್ಮಿಸಿರುವ ಪುನರ್ವಸತಿ ಕೇಂದ್ರಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕೇಂದ್ರ ಸರ್ಕಾರವು ಅರಣ್ಯ ಇಲಾಖೆ ಮೂಲಕ ನೀಡುತ್ತಿರುವ ಪ್ಯಾಕೇಜ್ ಇದಕ್ಕೆ ಕಾರಣ. ಈ ಪ್ಯಾಕೇಜ್ ಪ್ರಕಾರ, ಕಾಡಿನಿಂದ ನಾಡಿಗೆ ಬರುವ ಪ್ರತಿಯೊಂದು ಕುಟುಂಬಕ್ಕೂ 50್ಗ80 ಅಳತೆಯ ನಿವೇಶನದಲ್ಲಿರುವ ನಿರ್ಮಿಸಿರುವ ಒಂದು ಕೊಠಡಿ, ಹಾಲ್, ಅಡುಗೆ ಮತ್ತು ಸ್ನಾನದ ಮನೆ ಇರುವ ಪುಟ್ಟ ಮನೆ, ಕಂದಾಯ ಇಲಾಖೆ ಮೂಲಕ 3 ಎಕರೆ ಜಮೀನು, ಕುಟುಂಬದ ಮುಖ್ಯಸ್ಥನ ಹೆಸರಿನಲ್ಲಿ ರು. 3 ಲಕ್ಷ ಠೇವಣಿ, ಸ್ಥಳಾಂತರಗೊಂಡಾಗ ಪಾತ್ರೆ ಮತ್ತಿತರ ಗೃಹೋಪಯೋಗಿ ವಸ್ತುಗಳ ಖರೀದಿಗೆ ರು. 50,000 ನಗದು ನೀಡಲಾಗುತ್ತದೆ.
ಇದನ್ನು ತಿಳಿದು ಕಳೆದ ವರ್ಷ ಗೋಣಿಗದ್ದೆಯ 11 ಕುಟುಂಬಗಳು ಹೆಬ್ಬಳ್ಳ ಪುನರ್ವತಿಸಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದವು. ಈಗ ಆ. 25 ರಂದು 22 ಕುಟುಂಬಗಳು ಸ್ಥಳಾಂತರಗೊಂಡಿವೆ.
ಮೊನ್ನೆಯವರೆಗೆ ಅಲ್ಲಿನ ಆಶ್ರಮ ಶಾಲೆಯಲ್ಲಿ 22 ಮಕ್ಕಳು ಓದುತ್ತಿದ್ದರು. ಈಗ 22 ಕುಟುಂಬಗಳು ಹುಣಸೂರು ತಾಲೂಕು ಹೆಬ್ಬಳ್ಳ ಬಳಿ ಅರಣ್ಯ ಇಲಾಖೆ ನಿರ್ಮಿಸಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರವಾಗಿರುವುದರಿಂದ ಆ ಸಂಖ್ಯೆ 6ಕ್ಕೆ ಕುಸಿದಿದೆ. ಇನ್ನು ಕೇವಲ 13 ಕುಟುಂಬಗಳು ಮಾತ್ರ ಉಳಿದಿವೆ. ಎಲ್ಲವನ್ನೂ ತೆರವು ಮಾಡಿಕೊಂಡು ಹೋಗಿದ್ದು, ಹಾಡಿ ಬಿಕೋ ಎನ್ನುತ್ತಿದೆ. ಇದು ನೋವು ತರುತ್ತಿದ್ದು, ಮುಖ ಮುಚ್ಚಿಕೊಂಡು ಓಡಾಡುವೆ. ಉಳಿದವರಿಗೆ ಮುಂದೆ ಏನು ಮಾಡಬೇಕೆಂಬ ಚಿಂತೆ ಕಾಡಿದೆ ಎಂದು ಹಿರಿಯ ಕಾಳಪ್ಪ ಹೇಳುತ್ತಾರೆ.
ನಮಗೆ ಕುಲದೇವ್ರು ಮುಖ್ಯ. ಇಲ್ಲಿ ಅಯ್ಯಪ್ಪ ದೇವಸ್ಥಾನವಿದ್ದು, ದೇವರನ್ನು ಬಿಟ್ಟು ಬರಲಾದೀತೆ? ನಾವು ಹಾಡಿ ಖಾಲಿ ಮಾಡಿದರೂ ನಾಳೆ ಪೂಜೆಗೆ ಬಂದರೇ ಅರಣ್ಯ ಇಲಾಖೆಯವರು ಒಳಗೆ ಬಿಡುತ್ತಾರೆ ಅನ್ನೋದು ಯಾವ ಗ್ಯಾರೆಂಟಿ? ಎಂದು ಯುವಕ ಗಣೇಶ ಪ್ರಶ್ನಿಸುತ್ತಾನೆ.
2 ಹಾಡಿ ಸಂಪೂರ್ಣ ತೆರವು
ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ 35 ಹಾಡಿಗಳು ಬರುತ್ತವೆ. ಈ ಪೈಕಿ ಬಳ್ಳೆ ಬಳಿಯ ಕೆರೆಹಳ್ಳಿ ಹಾಡಿ ಹಾಗೂ ಮಚ್ಚೂರು ಕೆರೆ ಹಾಡಿಯ ಆದಿವಾಸಿಗಳು ಸಂಪೂರ್ಣ ಸ್ಥಳಾಂತರಗೊಂಡಿದ್ದಾರೆ. ಇನ್ನೂ 33 ಹಾಡಿಗಳಲ್ಲಿ 1550 ಕುಟಂಬಗಳಿವೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಗೋಕುಲ್ ತಿಳಿಸಿದರು.
-ಅಂಶಿ ಪ್ರಸನ್ನಕುಮಾರ್