ಪ್ರಧಾನ ಸುದ್ದಿ

ನೇತ್ರ ತಪಾಸಣಾ ಶಿಬಿರದಲ್ಲಿ 60 ಮಂದಿ ದೃಷ್ಟಿ ಕಳೆದುಕೊಂಡರು!

Rashmi Kasaragodu

ಅಮೃತಸರ: ಇಲ್ಲಿನ ಗುರುದಾಸ್‌ಪುರ್ ಜಿಲ್ಲೆಯಲ್ಲಿ ಎನ್‌ಜಿಒ ಆಯೋಜಿಸಿದ್ದ ನೇತ್ರ ತಪಾಸಣಾ ಶಿಬಿರದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾದ 60 ಮಂದಿ ದೃಷ್ಟಿ ಕಳೆದುಕೊಂಡ ಘಟನೆ ಶುಕ್ರವಾರ ವರದಿಯಾಗಿದೆ.

ಇದರಲ್ಲಿ 16 ಮಂದಿ ಅಮೃತಸರದ ಗ್ರಾಮವಾಸಿಗಳಾಗಿದ್ದು, ಇನ್ನುಳಿದವರೆಲ್ಲರೂ ಗುರ್‌ದಾಸ್‌ಪುರ್ ಜಿಲ್ಲೆಯವರಾಗಿದ್ದಾರೆ. ಇವರೆಲ್ಲರನ್ನೂ ಅಮೃತಸರ ಮತ್ತು ಗುರುದಾಸ್‌ಪುರ್‌ನಲ್ಲಿರುವ ಇಎನ್‌ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅಮೃತಸರದ ಡೆಪ್ಯೂಟಿ ಕಮಿಷನರ್ ರವಿ ಭಗತ್ ಶಸ್ತ್ರಚಿಕಿತ್ಸೆಗೊಳಪಟ್ಟವರೆಲ್ಲರೂ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ದೃಢೀಕರಿಸಿದ್ದಾರೆ.

ಅದೇ ವೇಳೆ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರುಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಭಗತ್ ಹೇಳಿದ್ದಾರೆ.

ಈ ಬಗ್ಗೆ ಅಮೃತಸರ ಆಸ್ಪತ್ರೆಯ ಸಿವಿಲ್ ಸರ್ಜನ್ ರಾಜೀವ್ ಭಲ್ಲಾ ಮಾತನಾಡಿದ್ದು,  ಶಿಬಿರದಲ್ಲಿ ವೈದ್ಯರುಗಳು ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡಿ ಅಸುರಕ್ಷಿತ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದರಿಂದಲೇ ಇಷ್ಟೊಂದು ಜನರು ದೃಷ್ಟಿ ಕಳೆದುಕೊಳ್ಳಬೇಕಾಗಿ ಬಂತು ಎಂದು ಹೇಳಿದ್ದಾರೆ.

ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೊಳಗಾದವರು 60 ವರ್ಷದಿಂದ ಮೇಲ್ಪಟ್ಟ ಹಿರಿಯ ನಾಗರಿಕರಾಗಿದ್ದು, ಇವರೆಲ್ಲರೂ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇದೀಗ ಆಸ್ಪತ್ರೆಗೆ ದಾಖಲಾಗಿರುವ ಈ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಭಲ್ಲಾ ಹೇಳಿದ್ದಾರೆ.



SCROLL FOR NEXT