ಮುಂಬೈ: ಸಿರಿಯಾದಲ್ಲಿ ಇಸಿಸ್ ಸಂಘಟನೆಗೆ ಸೇರಿಕೊಂಡು ಅಲ್ಲಿಂದ ವಾಪಸ್ ಬಂದಿರುವ ಮುಂಬೈ ಕಲ್ಯಾಣ್‌ನ 23ರ ಹರೆಯದ ಅರೀಬ್ ಮಜೀದ್, ನಿಪುಣ ಆತ್ಮಾಹುತಿ ಬಾಂಬರ್ ಆಗಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಹೊರಬಂದಿದೆ.
ಸಿರಿಯಾದ ರಕ್ಷಣಾ ದಳದ ಮೇಲೆ ಆತ್ಮಾಹುತಿ ದಾಳಿ ಮಾಡಲು ಪ್ರಯತ್ನಿಸಿ ತಾನು ವಿಫಲನಾಗಿದ್ದೆ ಎಂದು ಅರೀಬ್ ವಿಚಾರಣೆ ವೇಳೆ ಹೇಳಿದ್ದಾನೆ.
ಮುಂಬೈಗೆ ಬಂದ ಕೂಡಲೇ ಬಂಧನಕ್ಕೊಳಗಾಗಿದ್ದ ಈ ಯುವಕನಿಗೆ ತಾನು ಇಸಿಸ್‌ಗೆ ಸೇರಿದ್ದಕ್ಕೆ ಯಾವುದೇ ರೀತಿಯ ಪಶ್ಚಾತಾಪವೂ ಇಲ್ಲವಂತೆ.
ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶದಲ್ಲಿರುವ ಮಜೀದ್‌ನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನ ಬಂಧನವನ್ನು ಡಿಸೆಂಬರ್ 22ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ತಾನು ಇಸಿಸ್‌ನಲ್ಲಿ ಉಗ್ರನಾಗಿರಲಿಲ್ಲ, ಅಲ್ಲಿ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದ ಮಜೀದ್, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತ್ಮಾಹುತಿ ಬಾಂಬರ್ ಆಗಿ ಪರಿಣತಿ ಹೊಂದಿದ್ದನು ಎಂಬ ವಿಚಾರ ಬಹಿರಂಗವಾಗಿದೆ.