ಲಕ್ನೌ: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರ ಖಾಯಂ ಕ್ಷೇತ್ರವಾಗಿರುವ ರಾಯ್ ಬರೇಲಿಯಲ್ಲಿ ಘರ್ ವಾಪಸಿ (ಮನೆಗೆ ಹಿಂತಿರುಗಿ) ಕಾರ್ಯಕ್ರಮವನ್ನು ಆಯೋಜಿಸುವ ಯೋಜನೆ ಹಾಕಿಕೊಂಡಿದೆ ಎಂದು ವಿಶ್ವ ಹಿಂದೂ ಪರಿಷದ್ (ವಿ ಎಚ್ ಪಿ) ಸೋಮವಾರ ಘೋಷಿಸಿದೆ.
'ಮನೆಗೆ ಹಿಂತಿರುಗಿ'ಗೆ ಕೇಸರಿ ಬಣ ಸುಮಾರು ೬೦ ಕುಟುಂಬಗಳನ್ನು ಗುರುತಿಸಿರುವುದಾಗಿ ರಾಯ್ ಬರೇಲಿಯ ವಿ ಎಚ್ ಪಿ ಬಣದ ಅಧ್ಯಕ್ಷ ಹರೀಶ್ ಚಂದ್ರ ಶರ್ಮ ತಿಳಿಸಿದ್ದಾರೆ. ಇದಕ್ಕಾಗಿ ಯಾವುದೇ ಒತ್ತಡ ಹಾಕಿಲ್ಲ ಅಥವಾ ಯಾವುದೇ ಆಮಿಷ ಒಡ್ಡಿಲ್ಲ ಎಂದು ಕೂಡ ತಿಳಿಸಿದ್ದಾರೆ.
"ಘರ್ ವಾಪಸಿ" ಕಾರ್ಯಕ್ರಮಕ್ಕೆ "ಹುಸಿ-ಜಾತ್ಯಾತೀತ" ಪಕ್ಷಗಳು ಕೋಮುವಾದಿ ಬಣ್ಣ ಹಚ್ಚಲು ಪ್ರಯತ್ನಿಸುತ್ತಿವೆ ಎಂದಿರುವ ಅವರು, ವಿ ಎಚ್ ಪಿ ಮತ್ತು ಬಳಗ ಹಿಂದಿನಿಂದ ನಡೆಸಿಕೊಂಡು ಬಂದಿರುವ ಸರಳ ಮತ್ತು ನಿರಂತರ ಕೆಲಸ ಇದು ಎಂದಿದ್ದಾರೆ.
ಸುಮಾರು ೧೦೦ ಕುಟುಂಬಗಳಿಗೆ "ಘರ್ ವಾಪಸಿ" ಮಾಡುವ ಯೋಜನೆಯಿದೆ ಎಂದು ತಿಳಿಸಿರುವ ವಿ ಎಚ್ ಪಿ ನಾಯಕ, ಈ ಗುರಿ ತಲುಪಿದಾಕ್ಷಣ ಅವರನ್ನು ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡಲು ದಿನಾಂಕವನ್ನು ಘೋಷಿಸಲಿದ್ದೇವೆ ಎಂದಿದ್ದಾರೆ.
ಆದರೆ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದಿರುವ ಜಿಲ್ಲಾಡಳಿತ, "ಇಲ್ಲಿಯವರೆಗೆ ನಮಗೆ ಇಂತಹ ಯಾವುದೇ ನಡೆಯ ಬಗ್ಗೆ ತಿಳಿದು ಬಂದಿಲ್ಲ, ನಮ್ಮ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳುತ್ತೇವೆ" ಎಂದು ಜಿಲ್ಲಾಧಿಕಾರಿ ಕಛೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗ್ರಾದಲ್ಲಿ ನಡೆದ ಗುಂಪು ಮತಾಂತರದ ನಂತರ, ಕೇಸರಿ ಸಂಸ್ಥೆ ಕಳೆದ ಕೆಲವು ದಿನಗಳಿಂದ "ಮನೆಗೆ ಹಿಂತಿರುಗಿ" ಕಾರ್ಯಕ್ರಮವನ್ನು ತೀವ್ರಗೊಳಿಸಿದೆ.
ಈ ಮಧ್ಯೆ ಇಂತಹ ಕಾರ್ಯಕ್ರಮಗಳ ಮೇಲೆ ಕಣ್ಣಿಡಲು ಸಮಾಜವಾದಿ ಪಕ್ಷದ ಶಾಸಕ ಜಮೀರುಲ್ಲಾ ಸಹಾಯವಾಣಿ ಯನ್ನು ಉದ್ಘಾಟಿಸಿದ್ದಲ್ಲದೆ ಆಲಿಘರ್ ನಲ್ಲಿ ವೀಕ್ಷಣಾ ಕೊಠಡಿಯನ್ನು ಸ್ಥಾಪಿಸಿದ್ದಾರೆ.