ಇಸ್ಲಮಾಬಾದ್: ಮುಂಬೈ ೨೬/೧೧ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ಜಾಕಿರ್ ರೆಹಮಾನ್ ಲಕ್ವಿ ಬಿಡುಗಡೆಯಾಗಿಲ್ಲ. ಅವರಿನ್ನೂ ಬಂಧನದಲ್ಲಿದ್ದಾರೆ. ಆದರೆ ಸಂಜೋತ ರೈಲು ಸ್ಫೋಟ ಪ್ರಕರಣದ ಬಗೆಗಿನ ತನಿಖೆಯ ಪ್ರಗತಿಯನ್ನು ಭಾರತ ತೋರಿಸಬೇಕು ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಭದ್ರತಾ ಹಾಗೂ ವಿದೇಶಾಂಗ ಸಲಹೆಗಾರ ಸತ್ರಾಜ್ ಅಜೀಜ್ ಹೇಳಿದ್ದಾರೆ.
೨೦೦೭ ರಲ್ಲಿ ದೆಹಲಿ-ಲಾಹೋರ್ ಮಧ್ಯೆ ಸಂಚರಿಸುತ್ತಿದ್ದ ಸಂಜೋತ ರೈಲು ಸ್ಫೋಟದ ದುರ್ಘಟನೆಯಲ್ಲಿ ಸುಮೇರು ೭೦ ಜನ (ಹೆಚ್ಚಿನ ಸಂಖ್ಯೆ ಪಾಕಿಸ್ತಾನದವರು) ಮೃತಪಟ್ಟಿದ್ದರು.
ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನದ ಗಡಿಯಲ್ಲಿ ಉಗ್ರರನ್ನು ಮಟ್ಟ ಹಾಕಲು ಎರಡೂ ದೇಶದ ಸೇನೆ ಜಂಟಿ ಕಾರ್ಯಾಚರಣೆ ನಡೆಸಲಿವೆ ಎಂದು ಕೂಡ ಆಜೀಜ್ ತಿಳಿಸಿದ್ದಾರೆ.
ಪಾಕಿಸ್ತಾನದ ಪೇಶಾವರದ ಸೇನಾ ಶಾಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ೧೩೨ ಮಕ್ಕಳು ಸೇರಿದಂತೆ ಸುಮಾರು ೧೪೦ ಜನ ಮೃತಪಟ್ಟ ಹಿನ್ನಲೆಯಲ್ಲಿ, ಇದು "ಪಾಕಿಸ್ತಾನ ೯/೧೧" ಎಂದಿದ್ದ ಆಜೀಜ್, ಉಗ್ರಗಾಮಿಗಳನ್ನು ಹತ್ತಿಕ್ಕಲು ಆಪ್ಘಾನಿಸ್ತಾನದ ನಾಯಕತ್ವ ಪಾಕಿಸ್ತಾನ ಸೇನೆಗೆ ಸಂಪೂರ್ಣ ಬೆಂಬಲ ನೀಡಲು ಒಪ್ಪಿಗೆ ಕೊಟ್ಟಿದೆ ಎಂದಿದ್ದಾರೆ.