ಬೀರಟ್: ಉತ್ತರ ಸಿರಿಯಾದಲ್ಲಿ ಯುದ್ಧ ವಿಮಾನ ಕೆಳಗೆ ಬಿದ್ದ ನಂತರ ಸೆರೆ ಸಿಕ್ಕ ಜಾರ್ಡನ್ ಪೈಲಟ್ ನೊಂದಿಗಿನ ಸಂದರ್ಶನವನ್ನು ಸೋಮವಾರ ಇಸ್ಲಾಮಿಕ್ ಸ್ಟೇಟ್ (ಐ ಎಸ್) ಉಗ್ರಗಾಮಿ ಸಂಘಟನೆ ಪ್ರಕಟಿಸಿದೆ.
ಇಸ್ಲಾಮಿಕ್ ಸ್ಟೇಟ್ ನವರು ತಮ್ಮ ರಾಜಧಾನಿ ಎಂದು ಹೇಳಿಕೊಳ್ಳುವ ರಕ್ಕಾದಲ್ಲಿ ಲೆಫ್ಟಿನೆಂಟ್ ಆಲ್-ಕಸೆಬಾಹ ಅವರ ಎಫ್-೧೬ ಯುದ್ಧ ವಿಮಾನ ಕೆಳಬಿದ್ದಿತ್ತು. ಅಂತರಾಷ್ಟ್ರೀಯ ಒಪ್ಪಂದದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಸೆಪ್ಟಂಬರ್ ನಲ್ಲಿ ಪ್ರಾರಂಭಿಸಿದ ಮೇಲೆ ಇದೇ ಮೊದಲ ಬಾರಿ ವಿದೇಶಿ ಯುದ್ಧ ವಿಮಾನ ಚಾಲಕನೊಬ್ಬ ಈ ಉಗ್ರಗಾಮಿ ಸಂಘಟನೆಯ ಕೈಗೆ ಸಿಕ್ಕಿರುವುದು.
ಅಂತರ್ಜಾಲದಲ್ಲಿ ಪ್ರಕಟಿಸಿರುವ ಈ ಉಗ್ರ ಸಂಘಟನೆಯ ಇಂಗ್ಲಿಶ್ ಭಾಷಿಕ ಮಾಸಿಕ ಪತ್ರಿಕೆಯ ಸಣ್ಣ ಪ್ರಶ್ನೋತ್ತರ ಮಾತುಕತೆಯಲ್ಲಿ, ಉತ್ತರ ಸಿರಿಯಾದ ರಕ್ಕಾ ಬಳಿಯ ಯುಫ್ರೇಟ್ಸ್ ನದಿಯ ಬಳಿ ಕ್ಷಿಪಣಿಯೊಂದು ತನ್ನ ಯುದ್ಧ ವಿಮಾನವನ್ನು ಹೊಡೆದುರುಳಿಸಿತು ಎಂದು ಆಲ್-ಕಸೆಬಾಹ ಹೇಳಿದ್ದಾನೆ.
ವಿಮಾನದಿಂದ ಹೊರ ಬಂದ ನಂತರ ನದಿಯ ಒಳಗೆ ಬಿದ್ದಿದ್ದೆ, ನಂತರ ಐಎಸ್ ಯೋಧರ ಕೈಲಿ ಸಿಕ್ಕಿಹಾಕಿಕೊಂಡೆ ಎಂದು ಆಲ್-ಕಸೆಬಾಹ ಹೇಳಿದ್ದಾನೆ.
ಜಾರ್ಡನ್ ಸರ್ಕಾರದ ವಕ್ತಾರ ಮೊಹಮ್ಮದ್ ಅಲ್-ಮೊಮಾನಿ ಈ ಸಂದರ್ಶನವನ್ನು ನೋಡಿದ್ದೇನೆ ಎಂದು ತಿಳಿಸಿದ್ದರೂ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇದೇ ಹೊಸ ಸಂಚಿಕೆಯಲ್ಲಿ ಐ ಎಸ್, ಆಸ್ಟ್ರೇಲಿಯಾದ ಸಿಡ್ನಿ ಕಫೆಯಲ್ಲಿ ನಡೆದ ದಾಳಿಯನ್ನು ಪ್ರಸಂಶಿಸಿದ್ದು, ಆಸ್ಟ್ರೇಲಿಯಾವನ್ನು ಒಳಗೊಂಡಂತೆ ಪಶ್ಚಿಮ ದೇಶಗಳಲ್ಲಿ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲದವರನ್ನು ಕೊಲ್ಲಲು ಕರೆ ಕೊಟ್ಟಿದೆ.