ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

16 ತಿಂಗಳ ಜಲವಾಸ ಇದು ನೈಜ ಕ್ಯಾಸ್ಟ್ ಅವೇ

ಯಾವ ದಿಕ್ಕಿನೆಡೆ ಕಣ್ಣು ಹಾಯಿಸಿದರೂ ಬರೀ ನೀರು.. ತನ್ನವರು ಅಂತ ಯಾರೂ ಇಲ್ಲ, ಉಪ್ಪು ನೀರು ಬಿಟ್ಟರೆ ದಾಹ ತಣಿಸಲು ಹನಿ...

Mainashree
Updated On : 1 Feb 2014, 11:10 am

ಮಜುರೋ: ಯಾವ ದಿಕ್ಕಿನೆಡೆ ಕಣ್ಣು ಹಾಯಿಸಿದರೂ ಬರೀ ನೀರು.. ತನ್ನವರು ಅಂತ ಯಾರೂ ಇಲ್ಲ, ಉಪ್ಪು ನೀರು ಬಿಟ್ಟರೆ ದಾಹ ತಣಿಸಲು ಹನಿ ನೀರಿಲ್ಲ, ಹೊಟ್ಟೆ ತುಂಬಿಸಿಕೊಳ್ಳಲು ತುತ್ತು ಅನ್ನವೂ ಇಲ್ಲ... ಬರೋಬ್ಬರಿ 16 ತಿಂಗಳಿಂದ ಸಮುದ್ರದ ಅಲೆಗಳ ಏರಿಳಿತಕ್ಕೆ ಸಿಲುಕಿ ಆತ ನಲುಗಿಹೋಗಿದ್ದಾನೆ!
 ಏನು..? 'ಕ್ಯಾಸ್ಟ್ ಅವೇ', 'ಲೈಫ್ ಆಫ್ ಪೈ' ಸಿನಿಮಾದ ಕಥೆ ಹೇಳುತ್ತಿದ್ದೀರಾ ಎಂದು ಕೇಳಬೇಡಿ. ಇದು ಸಿನಿಮಾ ಕಥೆಯಲ್ಲ. 16 ತಿಂಗಳು ಪೆಸಿಫಿಕ್ ಸಾಗರದ ಮಧ್ಯೆ ಸಿಲುಕಿಕೊಂಡು ಈಗ ಮತ್ತೆ ನೆಲವನ್ನು ಕಂಡ ವ್ಯಕ್ತಿಯ ನೈಜ ವ್ಯಥೆ.
ಆತ ತೇಲಿದ್ದು 8 ಸಾವಿರ ಮೈಲು: ಗುರುವಾರವಷ್ಟೇ ಮಜುರೋದ ಎಬಾನ್ ಅಟೋಲ್ ಎಂಬ ದ್ವೀಪದಲ್ಲಿ ಈ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಸಾವಿನ ಮನೆಯ ಬಾಗಿಲು ತಟ್ಟಿ ವಾಪಸ್ ಬಂದ ಈತನ ಹೆಸರು ಜೋಸ್ ಇವಾನ್. 2012ರ ಸೆಪ್ಟೆಂಬರ್‌ನಲ್ಲಿ ಮೆಕ್ಸಿಕೋದಿಂದ ಸಾಲ್ವಡಾರ್‌ಗೆ ಪ್ರಯಾಣಿಸಲೆಂದು ಇವಾನ್ ತನ್ನ ಗೆಳೆಯನೊಂದಿಗೆ 24 ಅಡಿಯ ಫೈಬರ್‌ಗ್ಲಾಸ್ ಬೋಟ್(ಹರಿಗೋಲುರಹಿತ) ಅನ್ನು ಏರಿದ್ದ. ಸಾಲ್ವಡಾರ್ ತಲುಪಬೇಕಿದ್ದ ಇವರ ಬದುಕಲ್ಲಿ ನಡೆದದ್ದೇ ಬೇರೆ. ದಾರಿ ಮಧ್ಯೆ ಏನಾಯಿತು ಎಂಬುದನ್ನು ಚೇತರಿಸಿಕೊಂಡ ಬಳಿಕ ಆತ ಹೇಳಬೇಕಷ್ಟೆ.    
ಆದರೆ, ಇವರು ಹತ್ತಿದ್ದ ದೋಣಿ ದಾರಿ ತಪ್ಪಿ ಸಮುದ್ರದ ಮಧ್ಯೆ ಸಿಲುಕಿಕೊಂಡಿತು. ಯಾವ ಕಡೆಗೆ ಹೋಗಬೇಕೆಂದು ತಿಳಿಯದೇ ತೇಲಲು ಶುರುಮಾಡಿತು. ಹೀಗೆ ಇದು ತೇಲಿಕೊಂಡು ಬಂದಿದ್ದು ಬರೋಬ್ಬರಿ 8 ಸಾವಿರ ಮೈಲುಗಳು(12,500 ಕಿ.ಮೀ).
ಆಮೆ, ಹಕ್ಕಿಗಳನ್ನು ತಿಂದು ಬದುಕಿದ: ಬೋಟ್‌ನಲ್ಲಿದ್ದ ಇವಾನ್‌ನ ಗೆಳೆಯ ಎಷ್ಟೋ ತಿಂಗಳ ಹಿಂದೆ ಮೃತಪಟ್ಟ. ಆದರೆ ಇವಾನ್ ಮಾತ್ರ ತೇಲುತ್ತಿದ್ದ ಬೋಟ್‌ನಲ್ಲೇ 16 ತಿಂಗಳು ಕಳೆದ. ಹೊಟ್ಟೆ ತಾಳ ಹಾಕಲು ಆರಂಭಿಸಿದಾಗ ಬೇರೆ ದಾರಿ ಕಾಣದೇ ಕೈಯಲ್ಲೇ ಆಮೆ, ಹಕ್ಕಿ, ಮೀನುಗಳನ್ನು ಬೇಟೆಯಾಡಿ ತಿನ್ನತೊಡಗಿದ. ಮಳೆ ಬಂದಾಗ ಬಾಯಾರಿಕೆ ತೀರಿಸಿಕೊಂಡ. ಮಳೆ ಇಲ್ಲದಾಗ ಆಮೆಯ ರಕ್ತವನ್ನು ಕುಡಿದು ದಾಹ ತಣಿಸಿದ. ಗುರುವಾರ ಈತನಿದ್ದ ಬೋಟ್ ಎಬಾನ್‌ನ ದಡಕ್ಕೆ ಬಂದು ನಿಂತಿತ್ತು. ದಿಬ್ಬದ ಮೇಲೆ ಇವಾನ್ ಬಿದ್ದಿದ್ದ. ಈತನನ್ನು ನೋಡಿದ ಕೂಡಲೇ ಅಲ್ಲಿನ ಇಬ್ಬರು ಸ್ಥಳೀಯರು ಇವಾನ್‌ನನ್ನು ರಕ್ಷಿಸಿ ಮೇಲಕ್ಕೆ ತಂದರು. ಬೋಟ್‌ನಲ್ಲಿ ಒಂದು ಆಮೆ ಸತ್ತು ಬಿದ್ದಿತ್ತು.
ಚೇತರಿಸಿಕೊಳ್ಳುತ್ತಿರುವ ಇವಾನ್
ಸದ್ಯ ಇವಾನ್‌ಗೆ ಸ್ಥಳೀಯರ ಮನೆಯಲ್ಲಿ ಆಶ್ರಯ ನೀಡಲಾಗಿದೆ. ಆತ ತುಂಬಾ ಸೊರಗಿಹೋಗಿದ್ದಾನೆ, ತೊಟ್ಟಿದ್ದ ಪ್ಯಾಂಟುಗಳು ಚಿಂದಿಯಾಗಿವೆ, ಗಡ್ಡ, ಕೂದಲು ಉದ್ದವಾಗಿ ಬೆಳೆದಿದೆ. ತನ್ನ ಹೆಸರು ಜೋಸ್ ಇವಾನ್ ಎಂದಷ್ಟೇ ಈತ ಹೇಳಿಕೊಂಡಿದ್ದಾನೆ. ಇವನಿಗೆ ಸ್ಪ್ಯಾನಿಷ್ ಭಾಷೆ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಪ್ರತಿದಿನ ಇವಾನ್‌ನ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಜೀವಕ್ಕೇನೂ ಅಪಾಯವಿಲ್ಲ, ಆದರೆ ರಕ್ತದೊತ್ತಡ ಕಡಿಮೆಯಾಗಿದೆ ಎಂದಿದ್ದಾರೆ ವೈದ್ಯರು. ಕ್ರಮೇಣ ಬಲಪಡೆದುಕೊಳ್ಳುತ್ತಿರುವ ಆತ ಇಬ್ಬರ ಸಹಾಯ ಪಡೆದು ನಡೆಯಲು ಪ್ರಯತ್ನಿಸುತ್ತಿದ್ದಾನೆ. ಸ್ಥಳೀಯ ಮೇಯರ್ ವಿದೇಶಾಂಗ ಸಚಿವಾಲಯಕ್ಕೆ ಕರೆ ಮಾಡಿದ್ದು, ಇವಾನ್‌ನನ್ನು ಆತನ ದೇಶಕ್ಕೆ ಮರಳಿ ಕಳುಹಿಸುವ ಬಗ್ಗೆ ಪ್ರಕ್ರಿಯೆ ಆರಂಭಿಸಿದ್ದಾರೆ.


ಹಿಂದೆಯೂ ನಡೆದಿತ್ತು ಇಂತಹ ಘಟನೆಗಳು
2006- ಶಾರ್ಕ್ ಮೀನಿನ ಶೋಧಕ್ಕೆಂದು ತೆರಳಿದ್ದ ಮೂವರು ಮೆಕ್ಸಿಕನ್ನರು 9 ತಿಂಗಳುಗಳ ಕಾಲ ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದರು. ಕಡಲು ಹಕ್ಕಿಗಳು, ಮೀನುಗಳನ್ನು ತಿನ್ನುತ್ತಾ, ಬೈಬಲ್ ಓದುತ್ತಾ ದಿನಕಳೆದಿದ್ದರು. ಇದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿತ್ತು. 1992- ಮೀನುಹಿಡಿಯಲೆಂದು ತೆರಳಿದ್ದ ಕಿರಿಬಾತಿಯಲ್ಲಿನ ಇಬ್ಬರು ಬೆಸ್ತರು 177 ದಿನಗಳನ್ನು ಸಮುದ್ರದಲ್ಲಿಯೇ ಕಳೆದಿದ್ದರು. ಕೊನೆಗೆ ಸಮೋವಾದಲ್ಲಿ ದಡ ಸೇರಿ ಜೀವ ಉಳಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement