ಗುರುತು ಪತ್ತೆ ಪೆರೇಡ್, ವೈದ್ಯ ವಿದ್ಯಾರ್ಥಿನಿ ರಾಜಸ್ಥಾನಕ್ಕೆ ವಾಪಸ್
ಮಂಗಳೂರು: ದೇರಳಕಟ್ಟೆ ಸಾಮೂಹಿಕ ಅತ್ಯಾಚಾರ, ಬ್ಲೂಫಿಲ್ಮ್ ಚಿತ್ರೀಕರಿಸಿದ ಪ್ರಕರಣದಲ್ಲಿ ಗುರುತು ಪತ್ತೆ ಪೆರೇಡ್ನಲ್ಲಿ 8 ಆರೋಪಿಗಳನ್ನು ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿನಿ ಸ್ಪಷ್ಟವಾಗಿ ಪತ್ತೆ ಹಚ್ಚಿದ್ದಾಳೆ. ಸಂತ್ರಸ್ತ ಯುವತಿ ದೇರಳಕಟ್ಟೆ ಕಾಲೇಜು ತ್ಯಜಿಸಿ ಬೇರೆ ಕಾಲೇಜು ಸೇರ್ಪಡೆಗೆ ನಿರ್ಧರಿಸಿದ್ದು, ಗುರುತು ಪತ್ತೆ ಪೆರೇಡ್ ನಡೆಸಿದ ಬಳಿಕ ವಾಪಸ್ ರಾಜಸ್ಥಾನಕ್ಕೆ ಹೋಗಿದ್ದಾಳೆ.
ಮಂಗಳೂರು ಜೈಲಿನಲ್ಲಿ ಆರೋಪಿಗಳಾದ ಸಫ್ವಾನ್, ಸಂಶುದ್ದೀನ್, ಸಮೀರ್, ನವಾಝ್, ನಿಸಾರ್, ಅರ್ಷದ್, ಇಕ್ಬಾಲ್, ರವೂಫ್ನನ್ನು ತಹಸೀಲ್ದಾರ್ ಸಮ್ಮುಖದಲ್ಲಿ ಗುರುತು ಪತ್ತೆ ಪೆರೇಡ್ ನಡೆಸಲಾಯಿತು. ಇದರಲ್ಲಿ ಎಲ್ಲ ಎಂಟು ಆರೋಪಿಗಳನ್ನು ಗುರುತಿಸುವಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಯಶಸ್ವಿಯಾಗಿದ್ದಾಳೆ. ಬೇರೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಮಧ್ಯೆ ನಿಲ್ಲಿಸಿದಾಗಲೂ ವೈದ್ಯಕೀಯ ವಿದ್ಯಾರ್ಥಿನಿ ಎಲ್ಲ ಆರೋಪಿಗಳನ್ನು ಸ್ಪಷ್ಟವಾಗಿ ಗುರುತಿಸಿದ್ದಾಳೆ.
ಈ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯ ಗೆಳೆಯನನ್ನು ಪ್ರತ್ಯಕ್ಷ ಸಾಕ್ಷಿಯಾಗಿ ಪೊಲೀಸರು ಪರಿಗಣಿಸಿದ್ದಾರೆ. ಅದರಂತೆ ಕೋರ್ಟ್ಗೆ ತೆರಳಿ ಆರೋಪಿಗಳು ಮಾಡಿರುವ ಎಲ್ಲ ಕೃತ್ಯಗಳ ಕುರಿತು ಹೇಳಿಕೆ ಕೂಡಾ ನೀಡಿದ್ದಾನೆ. ಆತನನ್ನೂ ಸಂತ್ರಸ್ತ ಎಂದು ಕೋರ್ಟ್ ಪರಿಗಣಿಸಿದೆ. ಸೂಕ್ಷ್ಮ ಪ್ರಕರಣವಾದ ಹಿನ್ನೆಲೆಯಲ್ಲಿ ಹೇಳಿಕೆಯಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಸಂತ್ರಸ್ತೆಯ ಗೆಳೆಯನ ಕೈ ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಯುವಕ ಕೇರಳದ ತವರಿಗೆ ಹೋಗಿದ್ದ. ಸಂತ್ರಸ್ತೆಯೂ ತನ್ನೂರಾದ ರಾಜಸ್ತಾನಕ್ಕೆ ಹೋಗಿದ್ದಳು. ಗುರುತು ಪತ್ತೆ ಪೆರೇಡ್ ನಡೆಸುವಂತೆ ಪೊಲೀಸರು ತಹಸೀಲ್ದಾರರಿಗೆ ಮನವಿ ಮಾಡಿದ್ದರು. ಅದರಂತೆ ಸಂತ್ರಸ್ತ ವಿದ್ಯಾರ್ಥಿನಿಗೆ ಹಾಜರಾಗುವಂತೆ ತಹಸೀಲ್ದಾರ್ ಸೂಚಿಸಿದ್ದರು. ಗುರುವಾರ ಮಂಗಳೂರಿಗೆ ಬಂದಿದ್ದ ವಿದ್ಯಾರ್ಥಿನಿ ಗುರುತು ಪತ್ತೆ ಪೆರೇಡ್ ನಡೆಸಿದ ಬಳಿಕ ವಾಪಸ್ ಊರಿಗೆ ಹೋಗಿದ್ದಾರೆ.
ತಾಲಿಬಾನಿ ಕೃತ್ಯ: ತಾಲಿಬಾನಿ ಸಂಸ್ಕೃತಿಯ ದುರುಳರು ವೈದ್ಯಕೀಯ ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯನನ್ನು ಅಪಹರಿಸಿ ನಿರ್ಜನ ಪ್ರದೇಶದ ಮನೆಯೊಂದರಲ್ಲಿ ಇರಿಸಿದ್ದರು. ಸಂತ್ರಸ್ತೆಯ ಗೆಳೆಯನಿಗೆ ಥಳಿಸಿ ಆತನಿಂದಲೇ ಅತ್ಯಾಚಾರ ಮಾಡಿಸಿದ್ದರು. ಅತ್ಯಾಚಾರ ಸಂದರ್ಭ ಉತ್ತೇಜಿಸುತ್ತಿದ್ದದ್ದು, ಮಾತ್ರವಲ್ಲದೆ ಗುಪ್ತಾಂಗಗಳಿಗೂ ಕೈ ಹಾಕಿ ಮೃಗೀಯ ವರ್ತನೆ ತೋರಿದ್ದರು. ಇದನ್ನು ಚಿತ್ರೀಕರಿಸಿದ ಬಳಿಕ ಗೆಳೆಯನನ್ನು ಒತ್ತೆ ಇಟ್ಟು ವಿದ್ಯಾರ್ಥಿನಿಯನ್ನು ತೊಕ್ಕೊಟ್ಟು ಬಳಿ ಬಿಟ್ಟು ಹಣ ನೀಡುವಂತೆ ಬ್ಲ್ಯಾಕ್ಮೇಲ್ ಮಾಡಿದ್ದರು. ವಿದ್ಯಾರ್ಥಿನಿ ನ್ಯಾಯವಾದಿ ಮೂಲಕ ಪೊಲೀಸರಿಗೆ ಮೊರೆ ಹೋಗಿದ್ದರಿಂದ ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಗಳ ಬಂಧನವಾಗಿತ್ತು. ಆದರೆ ಪೊಲೀಸರು ಕೇವಲ ಅಪಹರಣ, ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಇದೊಂದು ಗಂಭೀರ ಪ್ರಕರಣ, ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು 'ಕನ್ನಡಪ್ರಭ' ಅಭಿಯಾನ ನಡೆಸಿತ್ತು. ಪರಿಣಾಮ ಕೋರ್ಟ್ ಸಲಹೆ ಪಡೆದು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು.
ಜಿತೇಂದ್ರ ಕುಂದೇಶ್ವರ