ಜಿಂಕೆ ಬೇಟೆಗಾರ ಧರ್ಮೇಶ್ ಆಸ್ಪತ್ರೆಗೆ
ನಂಜನಗೂಡು: ಬಂಡೀಪುರ ರಾಷ್ಟ್ರೀಯ ಅರಣ್ಯ ಪ್ರವೇಶಿಸಿ ಜಿಂಕೆ ಕೊಂದ ಆರೋಪದ ಮೇಲೆ ಶುಕ್ರವಾರ ಬಂಧಿತರಾಗಿದ್ದ 6 ಮಂದಿ ಆರೋಪಿಗಳನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯವು 15 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಶುಕ್ರವಾರ ರಾತ್ರಿ ಬಂಧನದ ನಂತರ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಸೇರಿದಂತೆ 6 ಮಂದಿ ಆರೋಪಿಗಳನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ದೇವೇಂದ್ರ ಪಂಡಿತ್ ಅವರ ಮುಂದೆ ಶನಿವಾರ ಮಧ್ಯಾಹ್ನ ಹಾಜರುಪಡಿಸಲಾಯಿತು.
ಸಿಐಡಿ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾಹನದಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಧರ್ಮೇಶ್ ತೀವ್ರ ನಿತ್ರಾಣಗೊಂಡಂತೆ ಕಂಡು ಬಂದರು. ಮೊದಲ ಮಹಡಿಯಲ್ಲಿರುವ ನ್ಯಾಯಾಲಯ ಸಭಾಂಗಣಕ್ಕೆ ಧರ್ಮೇಶ್ ಅವರನ್ನು ಅರಣ್ಯ ಇಲಾಖೆ ಮತ್ತು ಕೆ.ಆರ್. ಆಸ್ಪತ್ರೆ ಸಿಬ್ಬಂದಿ ಗಾಲಿ ಕುರ್ಚಿಯಲ್ಲಿ ಹೊತ್ತು ತಂದರು.
ವೈದ್ಯರ ವರದಿ ಪರಿಶೀಲಿಸಿದ ನ್ಯಾಯಾಧೀಶರು ಆರೋಪಿಗೆ ಅಗತ್ಯ ಚಿಕಿತ್ಸೆ ಕೊಡಿಸುವಂತೆ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶನ ನೀಡಿದರು. ಉಳಿದ ಐವರು ಆರೋಪಿಗಳಾದ ಅತೀಕ್ ಅಹಮದ್, ಹಮೀದ್, ಫರೀದ್, ಮಂಜಯ್ಯ, ರಘು ಅವರನ್ನು ನಂಜನಗೂಡು ಉಪ ವಿಭಾಗ ಕಾರಾಗೃಹಕ್ಕೆ ಕಳುಹಿಸಲಾಯಿತು. ಸಹಾಯಕ ಅಭಿಯೋಜಕ ಶಕೀಲಾ ಅಬೂಬ್‌ಕರ್ ವಾದ ಮಂಡಿಸಿದರು. ಆರೋಪಿಗಳ ಪರವಾಗಿ ವಕೀಲ ಸಿ.ಎಂ. ಜಗದೀಶ್ ಇದ್ದರು.