ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸೋನಿಯಾ ಆಪ್ತರಿಗೆ ಅಗಸ್ಟಾ ಗಾಳ?

ವಿವಾದಿತ ವಿವಿಐಪಿ ಕಾಪ್ಟರ್ ಡೀಲ್ ಕುದುರಿಸಲು ಅಗಸ್ಟಾವೆಸ್ಟ್‌ಲ್ಯಾಂಡ್ ಕಂಪನಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ...

Mainashree
Updated On : 1 Feb 2014, 11:09 am

ನವದೆಹಲಿ: ವಿವಾದಿತ ವಿವಿಐಪಿ ಕಾಪ್ಟರ್ ಡೀಲ್ ಕುದುರಿಸಲು ಅಗಸ್ಟಾವೆಸ್ಟ್‌ಲ್ಯಾಂಡ್ ಕಂಪನಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮೀಯರನ್ನು ದಾಳವಾಗಿ ಬಳಸಿಕೊಂಡಿದೆಯೇ?
ಇಂಥದ್ದೊಂದು ಅನುಮಾನ ಈಗ ಹುಟ್ಟಿಕೊಂಡಿದೆ. ಕಾಪ್ಟರ್ ಡೀಲ್ ಕುದುರಿಸುವ ಸಂಬಂಧ ಸೋನಿಯಾ ಗಾಂಧಿ ಅವರ ಏಳು ಆತ್ಮೀಯರನ್ನು ಒಲಿಸಿಕೊಳ್ಳುವಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅಗಸ್ಟಾವೆಸ್ಟ್‌ಲ್ಯಾಂಡ್ ಕಂಪನಿಗೆ ಸಲಹೆ ನೀಡಿದ್ದ. ಸ್ವಿಜರ್‌ಲ್ಯಾಂಡ್ ಮೂಲದ ಮಧ್ಯವರ್ತಿ ಗಿಡೋ ಹ್ಯಾಷ್ಕೆ ಕಚೇರಿಯಿಂದ ಇಟಲಿಯ ಅಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳಲ್ಲಿ ಈ ಕುರಿತ ಮಾಹಿತಿ ಸಿಕ್ಕಿದೆ. ಈ ಮಾಹಿತಿಯನ್ನು ಅಧಿಕಾರಿಗಳು ಇಟಲಿಯ ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ಪ್ರಧಾನಿ ಮನಮೋಹನ ಸಿಂಗ್, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್ ಸೇರಿ ಏಳು ಮಂದಿ ಹೆಸರು ಕ್ರಿಶ್ಚಿಯನ್ ನೀಡಿದ ಸೋನಿಯಾ ಆತ್ಮೀಯರ ಪಟ್ಟಿಯಲ್ಲಿತ್ತು.
ಬ್ರಿಟಿಷ್ ಹೈಕಮಿಷನರ್ ಬಳಕೆ?: ಸೋನಿಯಾ ಆತ್ಮೀಯರ ಮೇಲೆ ಒತ್ತಡ ಹೇರುವಂತೆ ಕ್ರಿಶ್ಚಿಯನ್ ಮೈಕೆಲ್ ಅಗಸ್ಟವೆಸ್ಟ್‌ಲ್ಯಾಂಡ್‌ನ ಭಾರತೀಯ ಕಚೇರಿಯ ಮುಖ್ಯಸ್ಥ ಪೀಟರ್ ಹುಲೆಟ್ ಅವರಿಗೆ ಮಾ.15, 2008ರಂದು ಟಿಪ್ಪಣಿಯೊಂದನ್ನು ಕಳುಹಿಸಿದ್ದ. ಈ ಟಿಪ್ಪಣಿಯಲ್ಲಿ ಸೋನಿಯಾ ಗಾಂಧಿ ಆತ್ಮೀಯರ ಮೇಲೆ ಒತ್ತಡ ಹೇರುವಂತೆ ಭಾರತದಲ್ಲಿರುವ ಬ್ರಿಟನ್‌ನ ಹೈಕಮಿಷನರ್‌ಗೆ ಸಲಹೆ ನೀಡುವಂತೆ ಪೀಟರ್‌ಗೆ ಸಲಹೆ ನೀಡಲಾಗಿತ್ತು.
ಅಲ್ಲದೆ, ಸೋನಿಯಾರ ಆತ್ಮೀಯರು ಯಾರ್ಯಾರು ಎನ್ನುವುದನ್ನು ಗುರುತಿಸಿದ್ದ ಕ್ರಿಶ್ಚಿಯನ್ ಈ ಸಂಬಂಧ ಏಳು ಮಂದಿ ಪಟ್ಟಿಯನ್ನೂ ಸಿದ್ಧಪಡಿಸಿದ್ದ. ಸಿಂಗ್, ಆಸ್ಕರ್, ಮೊಯ್ಲಿ ಅವರಲ್ಲದೆ ಅಹಮದ್ ಪಟೇಲ್, ಪ್ರಣಬ್, ಎಂ.ಕೆ. ನಾರಾಯಣನ್, ವಿನಯ್‌ಸಿಂಗ್ ಅವರೂ ಈ ಪಟ್ಟಿಯಲ್ಲಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.      

ರದ್ದಾಗಿದೆ ಡೀಲ್
ತೀವ್ರ ವಿವಾದಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಈ 12 ಕಾಪ್ಟರ್ ಪೂರೈಸುವ ಡೀಲ್ ಅನ್ನು ಯುಪಿಎ ಸರ್ಕಾರ ಇತ್ತೀಚೆಗಷ್ಟೇ ರದ್ದು ಮಾಡಿತ್ತು.

ಫೊಟೋ ತೋರಿಸಿದ್ದರು!
ವಿವಾದಿತ ಡೀಲ್‌ಗೆ ಸಂಬಂಧಿಸಿದ ವಿಚಾರಣೆ ವೇಳೆ ಇಟಲಿ ನ್ಯಾಯಾಲಯದಲ್ಲಿ ಹಷ್ಕೆಗೆ 'ಎಪಿ' ಎನ್ನುವ ಸಂಕೇತಾಕ್ಷರ ಕುರಿತು ವಿವರಣೆ ಕೇಳಲಾಗಿತ್ತು. ಎಪಿ ಎಂದರೆ ಅಹಮದ್ ಪಟೇಲ್ ಅವರೇ ಎಂದು ಫೋಟೋ ತೋರಿಸಿ ಕೇಳಲಾಗಿತ್ತು. ಈ ವೇಳೆ ಸೋನಿಯಾ ಗಾಂಧಿ ಅವರ ಫೊಟೋವನ್ನೂ ತೋರಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement