ಇನ್ಫಿ ಮೂರ್ತಿ ದಂಪತಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ
ಚಿತ್ರದುರ್ಗ: ಕಾಯಕ ಮಂತ್ರ ಜಪಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಬಸವೇಶ್ವರ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ 'ಬಸವಶ್ರೀ- 2013' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಶ್ರಮ ಸಂಸ್ಕೃತಿಯಿಂದ ಹನ್ನೆರಡನೇ ಶತಮಾನದಲ್ಲಿ ಬಸವ, ಅಲ್ಲಮಪ್ರಭು, ಅಕ್ಕಮಹಾದೇವಿ ಇನ್ನೂ ಮುಂತಾದ ಶರಣರು ದೇಶದ ಅಭಿವೃದ್ಧಿಗೆ ಶ್ರಮಿಸಿದರು ಎಂದು ಹೇಳಿದರು.
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮಾತನಾಡಿ, 'ಶ್ರೀಮಠವು ಯಾವುದೇ ಜಾತಿ- ಭೇದವಿಲ್ಲದೆ ನೀಡುತ್ತಿರುವ ಬಸವಶ್ರೀ ಪ್ರಶಸ್ತಿಗೆ ಭಾಜನವಾಗಿರುವುದಕ್ಕೆ ತುಂಬ ಸಂತೋಷವಾಗಿದೆ. ಯಾವುದೇ ಒಂದು ಸಾಧನೆ ಮಾಡಬೇಕಾದರೂ ದಕ್ಷತೆ ಮುಖ್ಯ. ತಂತ್ರಜ್ಞಾನ ಬಳಸಿಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ' ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ, 'ನಾನು ಹುಬ್ಬಳ್ಳಿಯವಳು. ಸುಮಾರು 2 ಸಾವಿರ ವಚನ ಕಲಿತಿದ್ದೇನೆ. ನನಗೆ ವಚನ ಕಲಿಸಿದ ಗುರುಗಳು, ವಚನಗಳ ಅರ್ಥವು ಕಷ್ಟ, ಸುಖ ಬಂದಾಗ ಗೊತ್ತಾಗುತ್ತದೆ ಎಂದಿದ್ದರು. ನನಗೆ ಬಸವಣ್ಣನವರ ದಯವೇ ಧರ್ಮದ ಮೂಲವಯ್ಯ ಎನ್ನುವ ವಚನ ತುಂಬ ಇಷ್ಟ' ಎಂದರು. ಪ್ರಶಸ್ತಿಯ ಮೊತ್ತ 5ಲಕ್ಷವನ್ನು ಶ್ರೀಮಠದ ಅನಾಥಾಶ್ರಮಕ್ಕೆ ಉಪಯೋಗಿಸಲಿ ಎಂದು ಶ್ರೀಗಳಲ್ಲಿ ಮನವಿ ಮಾಡಿದರು.
ಬಿಡುಗಡೆ: ಇದೇ ಸಂದರ್ಭದಲ್ಲಿ ಶ್ರೀಗಳ ಜೇನು ಕೃತಿಯ ಆಂಗ್ಲ ಅವತರಣಿಕೆ 'ದಿ ನೆಕ್ಟರ್' ಮತ್ತು 'ದಿ ಎಂಬ್ರಾಸಿಯಾ' ಕೃತಿಗಳನ್ನು ಸಚಿವರಾದ ಆಂಜನೇಯ ಮತ್ತು ಉಮಾಶ್ರೀ ಲೋಕಾರ್ಪಣೆ ಮಾಡಿದರು.
ವೈಷ್ಣವಿ ಭಾರದ್ವಾಜ್, ಸಂಸದರಾದ ಜನಾರ್ದನಸ್ವಾಮಿ ಹಾಗೂ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.