ತುಮಕೂರಿನಲ್ಲಿ ಆನೆಗಳ ವಾಕಿಂಗ್!
ತುಮಕೂರು: ಕಳೆದೆರಡು ವಾರಗಳಿಂದ ನಗರಕ್ಕೆ ಹೊಂದಿಕೊಂಡಿದ್ದ ಕೆರೆಗಳಲ್ಲಿ ಬೀಡು ಬಿಟ್ಟಿದ್ದ 3 ಆನೆಗಳು ಭಾನುವಾರ ಬೆಳಗ್ಗೆ ತುಮಕೂರು ಸಿಟಿಗೂ ನುಗ್ಗಿ ಸುಮಾರು ಎೆರಡು ಗಂಟೆಗಳ ಕಾಲ 'ವಾಕಿಂಗ್' ನಡೆಸಿದವು.
9 ಆನೆಗಳ ಹಿಂಡಿನಿಂದ ಬೇರ್ಪಟ್ಟ ಮೂರು ಗಂಡಾನೆಗಳು ನಗರಕ್ಕೆ ನುಗ್ಗಿ ಕೆಲವು ಕಾಲ ಆತಂಕ ಸೃಷ್ಟಿಸಿದವು. ಮೂರು ತಿಂಗಳಿಂದ ಆನೆಗಳು ತುಮಕೂರು ಜಿಲ್ಲೆಗೆ ಬರುವುದು ಹೋಗುವುದೇ ನಡೆದೇ ಇದೆ. ಹದಿನೈದು ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ 9 ಕಾಡಾನೆಗಳಲ್ಲಿ ಶನಿವಾರ ಆರು ಆನೆಗಳು ಗಂಗಸಂದ್ರ ಕೆರೆಯಲ್ಲಿ ಬೀಡು ಬಿಟ್ಟಿದ್ದರೆ, ಮೂರು ಆನೆಗಳು ಗೂಳೂರು ಕೆರೆಯಲ್ಲಿ ತಂಗಿದ್ದವು.
ಗೂಳೂರು ಕೆರೆಯಲ್ಲಿದ್ದ ಆನೆಗಳು ಆಹಾರ ಅರೆಸುತ್ತಾ ಶನಿವಾರ ರಾತ್ರಿ 11.45 ರ ಸುಮಾರಿಗೆ ಹನುಮಂತರಾಯ ಅವರ ತೋಟದ ಮೂಲಕ ವರ್ತುಲ ರಸ್ತೆಯ ರೋಟಿಘರ್ ಸಮೀಪ ಆಗಮಿಸಿ ಅಲ್ಲಿಂದ ವಿಜಯನಗರದತ್ತ ಹೊರಟು ರೇಲ್ವೆ ಹಳಿ ದಾಟಿ ರಾತ್ರಿ 2 ಗಂಟೆ ಸುಮಾರಿಗೆ ಎಸ್ಐಟಿ ಕಾಲೇಜಿನ ಕ್ರೀಡಾಂಗಣದ ಕಾಂಪೌಂಡ್ ಗೋಡೆಯನ್ನು ಒಡೆದು ಒಳನುಗ್ಗಿವೆ. ಎಸ್ಐಟಿ ಹಿಂದಿನ ಗೇಟ್ನ ರಕ್ಷಣಾ ಗೋಡೆಯನ್ನು ಕಡೆವಿ ಅಲ್ಲಿಂದ ಎಸ್ಐಟಿ ಮುಖ್ಯ ರಸ್ತೆಯಲ್ಲಿರುವ ತುಮಕೂರು ಪೆಟ್ರೋಲ್ ಬಂಕ್ ಬಳಿ ಬಂದಿವೆ.
ಅಶೋಕ ನಗರಕ್ಕೂ ನುಗ್ಗಿದವು: ನಂತರ ಎಸ್ಐಟಿ 9ನೇ ಕ್ರಾಸ್ ಮೂಲಕ ಆಶೋಕ ನಗರದ ಬಿ.ಎಚ್. ರಸ್ತೆಗೆ ಹೊಂದಿಕೊಂಡಂತೆ ಇರುವ ಅಂಬಿಕಾ ಹೊಟೇಲ್ ಹಿಂಭಾಗಕ್ಕೆ ಬಂದು ನಿಂತಿವೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಆರಣ್ಯ ಸಿಬ್ಬಂದಿ ಹಾಗೂ ಪೊಲೀಸರು ನಗರದಿಂದ ಆನೆಗಳನ್ನು ಹೊರಗಟ್ಟುವ ನಿಟ್ಟಿನಲ್ಲಿ ಪಟಾಕಿ ಸಿಡಿಸಲಾಯಿತು. ಇದಕ್ಕೆ ಬೆದರಿದ ಆನೆಗಳು ಅದೇ ರಸ್ತೆಯ ಮೂಲಕ ಎಸ್ಐಟಿ ಮುಖ್ಯರಸ್ತೆಯ ಸಿದ್ದೇಶ್ವರ್ ಕನ್ವೆಷನ್ ಹಾಲ್ ಪಕ್ಕದ ರಸ್ತೆಯಿಂದ ವಾಸವಿ ಕಾಲೇಜಿನ ಮುಂಭಾಗದ ಗೇಟ್ ಮುರಿದುಕೊಂಡು ಒಳನುಗ್ಗಿ ರೇಲ್ವೆ ಗೇಟ್ ದಾಟಿ ವಿಜಯನಗರ ಹಾಗೂ ಶೆಟ್ಟಿಹಳ್ಳಿ ಮುಖ್ಯರಸ್ತೆ ದಾಟಿ ಮಾರುತಿ ಪಕ್ಕದಲ್ಲಿಯೇ ಇರುವ ಸಣ್ಣ ಕೆರೆ ಸೇರಿವೆ. ಅಲ್ಲಿಂದಲೂ ಆನೆಗಳನ್ನು ಓಡಿಸಿದ್ದರಿಂದ ಸಾಬರ ಪಾಳ್ಯದ ಮಾವಿನ ತೋಪಿಗೆ ಬಂದು ಅಲ್ಲಿಂದ ಜಯನಗರ ವೆಂಕಟೇಶ್ವರ ದೇವಾಲಯ ಪಕ್ಕದಿಂದ ಗೆದ್ದಲಹಳ್ಳಿ ರಸ್ತೆ ದಾಟಿ ಸಣ್ಣ ಕೆರೆ ತಲುಪಿವೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಗುಬ್ಬಿ ಬೈಪಾಸ್ ರಸ್ತೆ ದಾಟಿ ಆಶ್ವಿನಿ ಆಯುರ್ವೇದ ಕಾಲೇಜು ಬಳಿಯಿಂದ ಸಾಗಿ ಮರಳೂರು ಕೆರೆ ಮೂಲಕ ಗೂಳೂರು ತಲುಪಿವೆ. ಅನಾಹುತ ಸಂಭವಿಸಿಲ್ಲ.