ಅನಂತಮೂರ್ತಿ ಅವಹೇಳನ ರಾಜ್ಯಪಾಲರ ವಿರುದ್ಧ ಹೋರಾಟ
ಬೆಳಗಾವಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಕುರಿತು ರಾಜ್ಯಪಾಲ ಹಂಸರಾಜ ಭಾರದ್ವಾಜ್ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಪಾಲರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂವಿಧಾನದ ಗೌರವ ಕಾಪಾಡುವ ರಾಜ್ಯಪಾಲರೇ ವ್ಯಕ್ತಿಗತವಾಗಿ ಅನಂತಮೂರ್ತಿ ಅವರನ್ನು ಟೀಕಿಸುವ ಮೂಲಕ ಸಾಹಿತ್ಯಲೋಕಕ್ಕೆ ಹಾಗೂ ನಾಡಿನ ಕನ್ನಡಿಗರಿಗೆ ಅವಮಾನಗೊಳಿಸಿದ್ದಾರೆ. ಇಂತಹ ರಾಜ್ಯಪಾಲರು ರಾಜ್ಯಕ್ಕೆ ಅಗತ್ಯವೇ ಇಲ್ಲ ಎಂದರು.
ಕನ್ನಡ ಹೋರಾಟಕ್ಕಿಲ್ಲದ ಚಿತ್ರರಂಗ: ಇದೇ ಸಂದರ್ಭದಲ್ಲಿ ಡಬ್ಬಿಂಗ್ ವಿರುದ್ಧ ಕನ್ನಡ ಚಿತ್ರರಂಗದ ಮಂದಿ ತಮ್ಮ ಬದುಕಿಗಾಗಿ ಹೋರಾಡುತ್ತಿದ್ದಾರೆ ಹೊರತು ಕನ್ನಡ ಉಳಿವಿಗಾಗಿ ಅಲ್ಲ ಎಂದು ಲೇವಡಿ ಮಾಡಿದರು.
ಕನ್ನಡ ನೆಲ, ಜಲ, ಭಾಷೆ, ಗಡಿ ವಿಚಾರದ ಹೋರಾಟದಿಂದ ಈ ಸಿನೆಮಾ ಮಂದಿ ದೂರವೇ ಉಳಿದಿದ್ದಾರೆ. ಕನ್ನಡ ಚಲನಚಿತ್ರಗಳಿಂದ ಕನ್ನಡ ಭಾಷೆ, ಸಂಸ್ಕೃತಿ ಉಳಿದಿದೆಯೇ ಎಂಬ ಯಕ್ಷಪ್ರಶ್ನೆ ಮೂಡುತ್ತದೆ. ಬಣ್ಣ ಹಚ್ಚುವವರಿಂದ ಹಿಡಿದು ಕ್ಯಾಮೆರಾಮೆನ್ವರೆಗೆ ಪರಭಾಷಿಕರೇ ಇದ್ದಾರೆ. ಈಗ ಡಬ್ಬಿಂಗ್ ಚಿತ್ರ ಬೇಡ ಎಂದು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬೇಡ ಎಂಬ ತೀರ್ಮಾನದ ಕುರಿತು ಎಲ್ಲರೂ ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕನ್ನಡ ನಾಡಿಗೆ ಅನುಕೂಲವಿರುವಂತಹ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡೋಣ. ಮಾರಕವಿರುವ ಚಿತ್ರಗಳನ್ನು ಮಾಡುವುದು ಬೇಡ. ಈಗ ಕನ್ನಡ ಚಲನಚಿತ್ರ ಮಾಡುತ್ತಿರುವ ರಿಮೇಕ್ ಚಿತ್ರಗಳು ಕೂಡ ತಪ್ಪೆ ಎಂದರು.